ನವದೆಹಲಿ: ಅಯೋಧ್ಯೆಯ ರಾಮ ಮಂದಿರ (Ayodhya Rama Mandir) ಉದ್ಘಾಟನೆಗೆ ದಿನ ಗಣನೆ ಆರಂಭವಾಗಿದೆ. ಜನವರಿ 22ರಂದು ರಾಮ ಮಂದಿರದಲ್ಲಿ ರಾಮ ಲಲ್ಲಾ (Ram lalla) ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಸಂಬಂಧ ಈಗಾಗಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿವೆ. ಜನವರಿ 22ರಂದು ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳನ್ನು (Central govt offices) ಅರ್ಧ ದಿನ ಮುಚ್ಚಲಾಗುವುದು (Half day leave) ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ತಿಳಿಸಿದ್ದಾರೆ. ಜತೆಗೆ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕ್ಗಳು (PSBs), ವಿಮಾ ಕಂಪೆನಿಗಳು, ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೂ ಅರ್ಧ ದಿನ ರಜೆ ಘೋಷಿಸಲಾಗಿದೆ.
ಪ್ರಾಣ ಪ್ರತಿಷ್ಠೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ, ಜನವರಿ 22ರಂದು ಅಪರಾಹ್ನ 2.30ರ ವರೆಗೆ ಬ್ಯಾಂಕ್ ಮುಚ್ಚಿರುತ್ತವೆ ಎಂದು ಹಣಕಾಸು ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇತ್ತ ಖಾಸಗಿ ವಲಯದ ಬ್ಯಾಂಕ್ಗಳು ಎಂದಿನಂತೆ ಪೂರ್ತಿ ದಿನ ತೆರೆದಿರುತ್ತವೆ. ಆನ್ಲೈನ್ ಬ್ಯಾಂಕಿಂಗ್ ಸೇವೆಗಳು ಮುಂದುವರಿಯಲಿದೆ.
ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ ʼಇದು ಕೇಂದ್ರೀಯ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಡಿಒಪಿಟಿ (ಸಿಬ್ಬಂದಿ ಮತ್ತು ತರಬೇತಿ ಇಲಾಖೆ)ಯ ಆದೇಶವು ಎಲ್ಲ ಸಾರ್ವಜನಿಕ ವಲಯದ ಬ್ಯಾಂಕ್ಗಳು / ಸಾರ್ವಜನಿಕ ವಲಯದ ವಿಮಾ ಕಂಪೆನಿಗಳು / ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ ಅರ್ಧ ದಿನದ ರಜೆಯ ಆದೇಶ ಅನ್ವಯವಾಗುತ್ತದೆʼ ಎಂದು ತಿಳಿಸಿದೆ.
ಈ ಹಿಂದೆ ಹೊರಡಿಸಿದ್ದ ಪ್ರಕಟಣೆಯಲ್ಲಿ ರಾಷ್ಟ್ರವ್ಯಾಪಿಯ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳು ಅರ್ಧ ದಿನ ಮುಚ್ಚಿರುತ್ತವೆ ಎಂದು ಘೋಷಿಸಲಾಗಿತ್ತು. ದೇಶದ ಜನತೆಯ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅರ್ಧ ದಿನ ಕಚೇರಿ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. “ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠೆಯನ್ನು ಭಾರತದಾದ್ಯಂತ 22ನೇ ಜನವರಿ 2024ರಂದು ಆಚರಿಸಲಾಗುತ್ತದೆ. ಆಚರಣೆಯಲ್ಲಿ ಭಾಗವಹಿಸಲು ನೌಕರರನ್ನು ಸಕ್ರಿಯಗೊಳಿಸಲು, ಭಾರತದಾದ್ಯಂತ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳನ್ನು ಮಧ್ಯಾಹ್ನದವರೆಗೆ ಅರ್ಧ ದಿನ ಮುಚ್ಚಲು ನಿರ್ಧರಿಸಲಾಗಿದೆ” ಎಂದು ಎಲ್ಲ ಕೇಂದ್ರ ಸರ್ಕಾರದ ಸಚಿವಾಲಯಗಳು/ ಇಲಾಖೆಗಳಿಗೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಬುಧವಾರ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದು ಜನವರಿ 22ರಂದು ರಜೆ ನೀಡುವಂತೆ ಮನವಿ ಮಾಡಿದೆ.
ಇದನ್ನೂ ಓದಿ: Ram Mandir: ಕನ್ನಡಿಗ ಕೆತ್ತಿದ ರಾಮಲಲ್ಲಾ ಹೇಗಿದ್ದಾನೆ? ಮೂರ್ತಿಯ ಮೊದಲ ಫೋಟೊ ಇಲ್ಲಿದೆ
ಜನವರಿ 22ರಂದು ಮಧ್ಯಾಹ್ನ 12.30ಕ್ಕೆ ರಾಮ ಮಂದಿರದ ಪ್ರಾಣ-ಪ್ರತಿಷ್ಠಾ ಸಮಾರಂಭ ಪ್ರಧಾನಿ ನರೇಂದ್ರ ಮೋದಿ ಮತ್ತು ಸಮಾಜದ ಎಲ್ಲ ವರ್ಗಗಳ ಹಲವಾರು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಭಾರತ ಮತ್ತು ವಿದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪರದೆ ಅಳವಡಿಸಿ ಈ ಸಮಾರಂಭದ ನೇರ ಪ್ರದರ್ಶನಕ್ಕೆ ಈಗಾಗಲೇ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ