Site icon Vistara News

Rahul Gandhi: ಸರ್ಕಾರಿ ಬಂಗಲೆಯಿಂದ ಹೊರ ಬಿದ್ದಿರುವ ರಾಹುಲ್‌ ಗಾಂಧಿಗೆ ಆಶ್ರಮಕ್ಕೆ ಬನ್ನಿ ಎಂದ ಅಯೋಧ್ಯೆಯ ಶ್ರೀ

Ayodhya seer invites congress leader Rahul Gandhi to stay at ashram

ನವದೆಹಲಿ: ಕೇಂದ್ರ ಸರ್ಕಾರವು ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನೀಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ನಾಯಕಿಯೊಬ್ಬರು ಮನೆಯನ್ನು ಬರೆದುಕೊಟ್ಟಿದ್ದರು. ಇದೀಗ ಅಯೋಧ್ಯೆಯ ಶ್ರೀಗಳೊಬ್ಬರು(Ayodhya Seer), ತಮ್ಮ ದೇಗುಲದ (Hanumangarhi) ಆವರಣದಲ್ಲಿ ಸನ್ಯಾಸಿಗಳೊಂದಿಗೆ ವಾಸಿಸುವಂತೆ ರಾಹುಲ್ ಗಾಂಧಿ (Rahul Gandhi) ಅವರಿಗೆ ಮನವಿ ಮಾಡಿದ್ದಾರೆ. 2019ರ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಅವರು ಲೋಕಸಭೆ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ಹಾಗಾಗಿ, ಸರ್ಕಾರ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭಾ ಕಾರ್ಯದರ್ಶಿಗಳು ರಾಹುಲ್‌ಗೆ ಸೂಚನೆ ನೀಡಿದ್ದರು.

ಬಿಜೆಪಿಯ ಪ್ರಾಬಲ್ಯವಿರುವ ಅಯೋಧ್ಯೆಯಲ್ಲಿ ಶ್ರೀಗಳು ನೀಡಿರುವ ಆಫರ್ ಕಾಂಗ್ರೆಸ್‌ಗೆ ವ್ಯಕ್ತವಾಗುತ್ತಿರುವ ಬೆಂಬಲ ಎಂದು ಹಲವರು ವಿಶ್ಲೇಷಣೆ ಮಾಡುತ್ತಿದ್ದಾರೆ. ಅಯೋಧ್ಯೆಯ ಸನ್ಯಾಸಿಗಳಾದ ನಾವು ರಾಹುಲ್ ಗಾಂಧಿ ಅವರನ್ನು ಪುಣ್ಯಾತ್ಮರ ನಗರವಾಗಿರುವ ಅಯೋಧ್ಯೆಗೆ ಆಹ್ವಾನಿಸುತ್ತೇವೆ. ಅವರು ನಮ್ಮ ಸ್ಥಳದಲ್ಲಿ ಬಂದು ವಾಸಿಸಬಹುದು ಎಂದು ಮಹಂತ್ ಸಂಜಯ್ ದಾಸ್ ಅವರು ಹೇಳಿದ್ದಾರೆ.

ಮಹಂತ್ ಸಂಜಯ್ ದಾಸ್ ಅವರು ಹನುಮಾನ್‌ಘರಿಯ ಹಿರಿಯ ದರ್ಶಕರಾದ ಮಹಂತ್ ಜ್ಞಾನ್ ದಾಸ್ ಅವರ ಪ್ರತಿಷ್ಠಿತ ಸ್ಥಾನದ ಉತ್ತರಾಧಿಕಾರಿಯಾಗಿದ್ದಾರೆ. ಸಂಜಯ್ ದಾಸ್ ಸಂಕಟ್ ಮೋಚನ್ ಸೇನೆಯ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ. ಪಿಟಿಐನೊಂದಿಗೆ ಮಾತನಾಡಿದ ಅವರು, ಒಂದು ವೇಳೆ ರಾಹುಲ್ ಗಾಂಧಿ ಅವರು ಹನುಮಾನಘರಿಯಲ್ಲಿ ಬಂದು ವಾಸಿಸಲು ಇಷ್ಟಪಟ್ಟರೆ ಅವರಿಗೆ ಸ್ವಾಗತವನ್ನು ಕೋರುತ್ತೇವೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಅಯೋಧ್ಯೆಗೆ ಬಂದು, ಹನುಮಾನಘರಿಗೆ ಭೇಟಿ ನೀಡಬೇಕು. ಅವರು ಇಲ್ಲಿ ಪ್ರಾರ್ಥನೆ ಸಲ್ಲಿಸಲಿ. ಹನುಮಾನಘರಿಯಲ್ಲಿ ಸಾಕಷ್ಟು ಕ್ಯಾಂಪಸ್‌ಗಳಿವೆ. ಅವರು ಬಂದು ನಮ್ಮ ಆಶ್ರಮದಲ್ಲಿ ವಾಸಿಸಲು ಮುಂದಾದರೆ, ನಮಗೂ ಖುಷಿ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿಗೆ 4 ಅಂತಸ್ತಿನ ಮನೆ ಬರೆದುಕೊಟ್ಟ ಕಾಂಗ್ರೆಸ್ ನಾಯಕಿ

ಕೆಲವು ದಿನಗಳ ಹಿಂದಷ್ಟೇ, “ನನಗೆ 52 ವರ್ಷವಾದರೂ ಸ್ವಂತ ಮನೆ ಇಲ್ಲ” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದರು. ಅದರಲ್ಲೂ, ಮಾನಹಾನಿ ಪ್ರಕರಣದಲ್ಲಿ ಸಿಲುಕಿ, ಲೋಕಸಭೆಯಿಂದ ಅನರ್ಹರಾದ ಬಳಿಕ ಅವರಿಗೆ ನೀಡಿದ್ದ ಅಧಿಕೃತ ನಿವಾಸವನ್ನೂ ತೆರವುಗೊಳಿಸಬೇಕಿದೆ. ಸರ್ಕಾರದ ನಿವಾಸವನ್ನು ರಾಹುಲ್‌ ಗಾಂಧಿ ತೊರೆಯಬೇಕಾದ ಕಾರಣ ಕಾಂಗ್ರೆಸ್‌ ನಾಯಕಿಯೊಬ್ಬರು ರಾಹುಲ್‌ ಗಾಂಧಿ (Rahul Gandhi) ಅವರಿಗೆ ತಮ್ಮ ನಾಲ್ಕು ಅಂತಸ್ತಿನ ಮನೆಯನ್ನೇ ಬರೆದುಕೊಟ್ಟಿದ್ದಾರೆ.

ಹೌದು, ದೆಹಲಿ ಕಾಂಗ್ರೆಸ್‌ ಸೇವಾ ದಳದ ಅಧ್ಯಕ್ಷೆಯಾಗಿರುವ ರಾಜಕುಮಾರಿ ಗುಪ್ತಾ ಅವರು ರಾಹುಲ್‌ ಗಾಂಧಿ ಅವರ ಹೆಸರಿಗೆ ನಾಲ್ಕು ಮಹಡಿಯ ಮನೆಯನ್ನು ವರ್ಗಾವಣೆ ಮಾಡಿದ್ದಾರೆ. “ದೆಹಲಿ ಕಾಂಗ್ರೆಸ್‌ ಸೇವಾದಳ ಅಧ್ಯಕ್ಷೆಯಾಗಿರುವ ರಾಜಕುಮಾರಿ ಗುಪ್ತಾ ಅವರು ಮಂಗೋಲ್ಪುರಿ ಪ್ರದೇಶದಲ್ಲಿರುವ ತಮ್ಮ ಮನೆಯನ್ನು ರಾಹುಲ್‌ ಗಾಂಧಿ ಅವರಿಗೆ ನೀಡಿದ್ದಾರೆ. ಗುಪ್ತಾ ಅವರು ಇಂದಿರಾ ಗಾಂಧಿ ಅವರ ಕಾಲದಲ್ಲಿ ಈ ಮನೆಯನ್ನು ಪಡೆದಿದ್ದರು. ರಾಹುಲ್‌ ಗಾಂಧಿ ಅವರನ್ನು ಮೋದಿ ಅವರು ಮನೆಯಿಂದ ಓಡಿಸಬಲ್ಲರು, ಜನರ ಹೃದಯದಿಂದ ಓಡಿಸಲು ಸಾಧ್ಯವಿಲ್ಲ” ಎಂಬುದಾಗಿ ರಾಜಕುಮಾರಿ ಅವರು ಹೇಳಿದ್ದಾರೆ ಕಾಂಗ್ರೆಸ್‌ ಸೇವಾದಳ ಟ್ವೀಟ್‌ ಮಾಡಿದೆ.

ರಾಜಕುಮಾರ್‌ ಗುಪ್ತಾ ಅವರು ರಾಹುಲ್‌ ಗಾಂಧಿ ಅವರಿಗೆ ಮನೆ ನೀಡಿರುವ ಕುರಿತ ವಿಡಿಯೊವನ್ನು ಕೂಡ ಕಾಂಗ್ರೆಸ್ ಹಂಚಿಕೊಂಡಿದೆ. 22 ಸೆಕೆಂಡ್‌ನ ವಿಡಿಯೊದಲ್ಲಿ ರಾಜಕುಮಾರಿ ಅವರು ತಮ್ಮ ಮನೆಯ ಡೀಡ್‌ ಹಿಡಿದುಕೊಂಡಿರುವ ದೃಶ್ಯವಿದೆ. ರಾಹುಲ್‌ ಗಾಂಧಿ ಹೆಸರಿಗೆ ಮನೆಯನ್ನು ಬರೆದ ಬಳಿಕ ಅವರು ಪ್ರಮಾಣಪತ್ರವನ್ನು ಮಾಧ್ಯಮದವರಿಗೆ ತೋರಿಸಿದ್ದಾರೆ ಎಂದು ತಿಳಿದುಬಂದಿದೆ. ರಾಹುಲ್‌ ಗಾಂಧಿ ಅವರು ನಿವಾಸ ಖಾಲಿ ಮಾಡಬೇಕು ಎಂಬುದಾಗಿ ನೋಟಿಸ್‌ ನೀಡಿದ ಕಾರಣ ಮನನೊಂದು ಗುಪ್ತಾ ಅವರು ತಮ್ಮ ಮನೆಯನ್ನೇ ಕಾಂಗ್ರೆಸ್‌ ನಾಯಕನಿಗೆ ನೀಡಿದ್ದಾರೆ.

ಇದನ್ನೂ ಓದಿ: 2019ರ ಮಾನಹಾನಿ ಕೇಸ್: ರಾಹುಲ್ ಗಾಂಧಿ ಜೈಲು ಶಿಕ್ಷೆಗೆ ಸೂರತ್ ಸೆಷನ್ ಕೋರ್ಟ್ ತಡೆ, ಸಂಸತ್ ಸದಸ್ಯತ್ವ ಮರಳುತ್ತಾ?

ಮೋದಿ ಉಪನಾಮ ಹೊಂದಿರುವ ಎಲ್ಲರೂ ಕಳ್ಳರೇ ಎಂದು ರಾಹುಲ್‌ ಗಾಂಧಿ ಅವರು ಹೇಳಿಕೆ ನೀಡಿದ್ದ ಕಾರಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಪ್ರಕರಣದಲ್ಲಿ ರಾಹುಲ್‌ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಸೂರತ್‌ ನ್ಯಾಯಾಲಯವು ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಾಗಾಗಿ, ಅವರು ಲೋಕಸಭೆಯಿಂದ ಅನರ್ಹಗೊಂಡಿದ್ದಾರೆ. ಇದರಿಂದಾಗಿ ತುಘಲಕ್‌ ಲೇನ್‌ನಲ್ಲಿ ರಾಹುಲ್‌ ಗಾಂಧಿ ವಾಸವಾಗಿರುವ 12ನೇ ಸಂಖ್ಯೆಯ ಸರ್ಕಾರಿ ನಿವಾಸವನ್ನು ಏಪ್ರಿಲ್‌ 23ರೊಳಗೆ ಖಾಲಿ ಮಾಡಬೇಕು ಎಂಬುದಾಗಿ ನೋಟಿಸ್‌ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್‌ ಗಾಂಧಿ, ಖಾಲಿ ಮಾಡುವುದಾಗಿ ತಿಳಿಸಿದ್ದಾರೆ.

Exit mobile version