ಚಂಡೀಗಢ: ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಬಡವರಿಗೆ ಆರೋಗ್ಯ ಭದ್ರತೆ ಒದಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ (Ayushman Bharat) ಯೋಜನೆ ಜಾರಿಗೆ ತಂದಿದೆ. ಅದರಂತೆ, ಕೋಟ್ಯಂತರ ಜನ ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ, “ಆಯುಷ್ಮಾನ್ ಭಾರತ್ ಯೋಜನೆ ಅಡಿ ನಿರ್ಮಿಸಿರುವ ಆರೋಗ್ಯ ಹಾಗೂ ಸ್ವಾಸ್ಥ್ಯ ಕೇಂದ್ರಗಳು ರಾಜ್ಯಗಳು ತಮ್ಮ ಯೋಜನೆಗಳಿಗಾಗಿ ಪರಿವರ್ತಿಸಿಕೊಳ್ಳುವಂತಿಲ್ಲ” ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ಸ್ಪಷ್ಟಪಡಿಸಿದ್ದಾರೆ.
ಪಂಜಾಬ್‌ನ ಪಟಿಯಾಲಕ್ಕೆ ತೆರಳಿದ್ದ ವೇಳೆ ದಿಢೀರನೇ ನೀಟ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಭದ್ರತೆ ಸೇರಿ ಹಲವು ಕ್ರಮಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. “ಕೇಂದ್ರ ಹಾಗೂ ರಾಜ್ಯದ 60:40ರ ಅನುಪಾತದಂತೆ ಅನುದಾನದ ಹಂಚಿಕೆಯಾಗುತ್ತದೆ. ಆದರೆ, ಆಯುಷ್ಮಾನ್ ಭಾರತ್ ಯೋಜನೆಯ ಸ್ವಾಸ್ಥ್ಯ ಕೇಂದ್ರಗಳನ್ನು ರಾಜ್ಯ ಸರ್ಕಾರಗಳು ಪರಿವರ್ತನೆ ಮಾಡಿಕೊಳ್ಳುವಂತಿಲ್ಲ” ಎಂದು ಸ್ಪಷ್ಟಪಡಿಸಿದರು.
ಪಂಜಾಬ್‌ನಲ್ಲಿ ಆಮ್ ಆದ್ಮಿ ಸರ್ಕಾರವು ಸ್ವಾಸ್ಥ್ಯ ಕೇಂದ್ರಗಳನ್ನು ಮೊಹಲ್ಲಾ ಕ್ಲಿನಿಕ್‌ಗಳಾಗಿ ಪರಿವರ್ತನೆ ಮಾಡುತ್ತಿದೆ ಎಂದು ಇದಕ್ಕೂ ಮೊದಲು ಮನ್ಸುಖ್ ಮಂಡಾವಿಯ ಹೇಳಿದ್ದರು. ಹಾಗೆಯೇ, ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಅನುದಾನ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದರು. ಈಗ ಎಲ್ಲ ರಾಜ್ಯಗಳಿಗೂ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Ayushman Bharat | ಡಿಜಿಟಲ್ ಮಿಷನ್ ಪರಿಣಾಮಕಾರಿ ಜಾರಿಗೆ ಮಾರ್ಗಸೂಚಿ, ಏನೆಲ್ಲ ಸೌಲಭ್ಯ?