Site icon Vistara News

ರಾಜಕೀಯದಲ್ಲಿ ಕಾಂಗ್ರೆಸ್‌ ಪದೇಪದೆ ಲಾಂಚ್‌ ಮಾಡುವುದು ಯಾರನ್ನು? ಮೋದಿ ಕೊಟ್ಟರು ಉತ್ತರ

Narendra modi

Baar Baar Launch: PM Narendra Modi's jibe at Rahul Gandhi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಹಾಗೂ ಸ್ಟಾರ್ಟಪ್‌ಗಳ ನಡುವಿನ ಹೋಲಿಕೆ ಮೂಲಕ ಮೋದಿ ಟಾಂಗ್‌ ಕೊಟ್ಟಿದ್ದಾರೆ. ನವದೆಹಲಿಯಲ್ಲಿರುವ ಭಾರತ ಮಂಟಪದಲ್ಲಿ ನಡೆದ ಸ್ಟಾರ್ಟಪ್‌ ಮಹಾಕುಂಭದಲ್ಲಿ (Startup Mahakumbh) ಮಾತನಾಡಿದ ಅವರು, “ರಾಜಕೀಯದಲ್ಲಿ ಪಕ್ಷಗಳು ಪದೇಪದೆ ಲಾಂಚ್‌ ಮಾಡುತ್ತಿರುತ್ತವೆ” ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿ ಅವರಿಗೆ ಟಾಂಗ್‌ ಕೊಟ್ಟರು.

“ತುಂಬ ಜನ ನವೋದ್ಯಮಗಳನ್ನು ಆರಂಭಿಸುತ್ತಾರೆ. ಹಾಗೆಯೇ, ರಾಜಕೀಯದಲ್ಲೂ ಪದೇಪದೆ ಲಾಂಚ್‌ ಮಾಡಲಾಗುತ್ತದೆ. ಪದೇಪದೆ ಲಾಂಚ್‌ ಮಾಡಬೇಕಾಗುತ್ತದೆ. ಆದರೆ, ನವೋದ್ಯಮಗಳನ್ನು ಆರಂಭಿಸುವವರು ಹಾಗೂ ರಾಜಕೀಯದಲ್ಲಿ ಲಾಂಚ್‌ ಮಾಡುವವರ ಮಧ್ಯೆ ತುಂಬ ವ್ಯತ್ಯಾಸವಿದೆ. ನವೋದ್ಯಮಿಗಳು ಹತ್ತಾರು ಪ್ರಯೋಗಗಳಿಗೆ ಆದ್ಯತೆ ನೀಡುತ್ತಾರೆ. ವೈಫಲ್ಯದ ಬಳಿಕವೂ ಹೊಸ ಹೊಸ ಐಡಿಯಾಗಳೊಂದಿಗೆ ಯಶಸ್ಸಿನೆಡೆಗೆ ನೀವು ನುಗ್ಗುತ್ತೀರಿ. ರಾಜಕೀಯದಲ್ಲಿ ಹಾಗಾಗುವುದಿಲ್ಲ” ಎಂದು ಮೋದಿ ಹೇಳಿದರು.

ಅಭಿವೃದ್ಧಿಯ ಕುರಿತು ಕೂಡ ಮೋದಿ ಪ್ರಸ್ತಾಪಿಸಿದರು. “ಭಾರತದಲ್ಲಿ ನವೋದ್ಯಮ, ಹೊಸ ಐಡಿಯಾಗಳ ಅಳವಡಿಕೆ ಹಾಗೂ ಅಭಿವೃದ್ಧಿಯ ಕುರಿತು ಸರಿಯಾದ ಸಮಯದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಂಡ ಕಾರಣ ಭಾರತ ಏಳಿಗೆಯತ್ತ ಸಾಗುತ್ತಿದೆ. ನಿಮ್ಮಲ್ಲಿರುವ ಸಕಾರಾತ್ಮಕ ಶಕ್ತಿ, ಹೊಸ ಸಂಶೋಧನೆ, ಹೊಸ ಯೋಜನೆಗಳನ್ನು ಜಾರಿಗೊಳಿಸುವುದರಿಂದಾಗಿಯೇ ಭಾರತವು ನವೋದ್ಯಮಗಳಲ್ಲಿ ಮಹತ್ವದ ಮುನ್ನಡೆ ಸಾಧಿಸಿದೆ” ಎಂದು ನವೋದ್ಯಮಿಗಳನ್ನು ಮೋದಿ ಶ್ಲಾಘಿಸಿದರು.

“ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ ಸಾಫ್ಟ್‌ವೇರ್‌ ಹಾಗೂ ಮಾಹಿತಿ ತಂತ್ರಜ್ಞಾನವು ಹೆಚ್ಚು ಮುನ್ನೆಲೆಗೆ ಬಂದಿದೆ. ಆದರೀಗ, ಇನೋವೇಷನ್‌ ಹಾಗೂ ಸ್ಟಾರ್ಟಪ್‌ ಸಂಸ್ಕೃತಿಯು ಭಾರತವನ್ನು ಮುನ್ನಡೆಸುತ್ತಿದೆ. ಸ್ಟಾರ್ಟಪ್‌ಗಳಿಗೆ ಕೇಂದ್ರ ಸರ್ಕಾರ ಹೆಚ್ಚು ಉತ್ತೇಜನ ನೀಡುತ್ತಿದೆ. ಇವುಗಳೇ ಭಾರತದ ಅಭಿವೃದ್ಧಿಯ ಎಂಜಿನ್‌ ಎಂಬುದಾಗಿ ಕೇಂದ್ರ ಸರ್ಕಾರ ಭಾವಿಸಿದೆ. ಜಗತ್ತಿನಲ್ಲೇ ಅಗ್ರ 20 ಸ್ಟಾರ್ಟಪ್‌ ಎಕೋಸಿಸ್ಟಮ್‌ ಹೊಂದಿರುವ ದೇಶಗಳಲ್ಲಿ ಭಾರತ ಕೂಡ ಒಂದಾಗಬೇಕು ಎಂಬುದು ಕೇಂದ್ರ ಸರ್ಕಾರದ ಪ್ರಯತ್ನವಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: PM Narendra Modi: ಈಶ್ವರಪ್ಪ ವಿರುದ್ಧ ಕ್ರಮವಹಿಸದ ನೀವು ‘ವೀಕ್ ಪಿಎಂ’; ಮೋದಿಗೆ ಸಿದ್ದರಾಮಯ್ಯ ಹಲವು ಪ್ರಶ್ನೆ!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version