ನವ ದೆಹಲಿ: ಅಲೋಪಥಿ ಸೇರಿದಂತೆ ಇತರ ವೈದ್ಯ ಪದ್ಧತಿಗಳ ಬಗ್ಗೆ ಬಾಬಾ ರಾಮದೇವ (Baba Ramdev) ಅವರು ಕೆಟ್ಟದಾಗಿ ಮಾತನಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಸ್ಪಷ್ಟವಾಗಿ ಹೇಳಿದೆ. ತಮ್ಮ ಪತಂಜಲಿ ಉತ್ಪನ್ನಗಳ ಮಾರಾಟಕ್ಕಾಗಿ ಇತರ ವೈದ್ಯ ಪದ್ಧತಿಗಳು ಮತ್ತು ವೈದ್ಯರ ಹಗುರವಾಗಿ ಮಾತನಾಡಬಾರದು ಎಂದು ತಿಳಿಸಿದೆ.
ವೈದ್ಯರು ಮತ್ತು ಅಲೋಪಥಿ ವೈದ್ಯ ಪದ್ಧತಿ ಕುರಿತು ಅಪಮಾನಕರ ರೀತಿಯಲ್ಲಿ ಮಾತನಾಡುತ್ತಿದ್ದ ಬಾಬಾ ರಾಮದೇವ ಅವರ ನಡೆಯನ್ನು ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ಕೇಂದ್ರ ಸರ್ಕಾರ ಹಾಗೂ ಪತಂಜಲಿ ಆರ್ಯುವೇದ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
“ವೈದ್ಯರು ಮತ್ತು ಇತರ ವೈದ್ಯ ಪದ್ಧತಿಗಳನ್ನು ಅವರೇಕೆ ಹಿಯಾಳಿಸಬೇಕು? ಯೋಗವನ್ನುಅವರ ಜನಪ್ರಿಯಗೊಳಿಸಿದ್ದಕ್ಕಾಗಿ ಅವರ ಬಗ್ಗೆ ಗೌವರವಿದೆ. ಹಾಗಂತ ಅವರು ಇತರ ವೈದ್ಯ ಪದ್ಧತಿಗಳನ್ನು ಟೀಕಿಸುವಂತಿಲ್ಲ. ಜನರು ಎದುರಿಸುವ ಎಲ್ಲ ರೋಗಗಳನ್ನು ಬಾಬಾ ರಾಮದೇವ ಅವರು ತಾವು ಪ್ರತಿಪಾದಿಸುವ ವೈದ್ಯ ಪದ್ಧತಿಯಿಂದಲೇ ಗುಣಪಡಿಸುತ್ತಾರೆಂಬುದಕ್ಕೆ ಏನು ಗ್ಯಾರಂಟಿ” ಎಂದು ಪೀಠ ಪ್ರಶ್ನಿಸಿದೆ.
ಐಎಂಎ ಪರವಾಗಿ ವಾದ ಮಂಡಿಸಿದ ಪ್ರಭಾಸ್ ಬಜಾಜ್ ಅವರು, ”ಅನೇಕ ಸಾವು ನೋವಿಗೆ ಅಲೋಪಥಿ ಪದ್ಧತಿಯೇ ಕಾರಣ ಎಂದು ಪತಂಜಲಿ ಜಾಹೀರಾತು ನೀಡಿದೆ. ಹೀಗೆ ನೀಡಿದ ಬಹುತೇಕ ಜಾಹೀರಾತುಗಳು ಕೋವಿಡ್ 19 ಸಾಂಕ್ರಾಮಿಕ ಅವಧಿಯಲ್ಲಿ ಪ್ರಕಟವಾಗಿವೆ. ಈ ಬಗ್ಗೆ ಆಯುಷ್ ಇಲಾಖೆಗೆ ದೂರು ನೀಡಲಾಗಿತ್ತು. ಜಾಹೀರಾತುಗಳು ತಪ್ಪು ಮಾಹಿತಿಯಿಂದ ಕೂಡಿವೆ ಎಂದು ಒಪ್ಪಿಕೊಂಡರು ಬಾಬಾ ರಾಮದೇವ ವಿರುದ್ಧ ಇಲಾಖೆಯು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಜತೆಗೆ, ಬಾಬಾ ರಾಮದೇವ ಅವರು ಇತರ ಪದ್ಧತಿಗಳ ವಿರುದ್ಧ ತಮ್ಮ ಟೀಕೆಯನ್ನು ಮುಂದುವರಿಸಿದ್ದಾರೆ” ಎಂದು ತಿಳಿಸಿದರು.
ಈ ಹಿಂದೆ ದಿಲ್ಲಿ ಹೈಕೋರ್ಟ್ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಾಬಾ ರಾಮದೇವ (Baba Ramdev) ವಿರುದ್ಧಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿತ್ತು. ಪತಂಜಲಿ ಉತ್ಪನ್ನವಾಗಿರುವ ಕೊರೊನಿಲ್‌ಗೆ ಸಂಬಂಧಿಸಿದಂತೆ ವಾಸ್ತವಲ್ಲದ ಕ್ಲೇಮ್ ಮಾಡಬಾರದು ಎಂದು ಸೂಚಿಸಿತ್ತು.
ಕೊರೊನಾ ಸಾಂಕ್ರಾಮಿದ ಸಂದರ್ಭದಲ್ಲಿ ಬಾಬಾ ರಾಮದೇವ ಅವರು ಇದೇ ರೀತಿ ಅಲೋಪಥಿ ಮತ್ತು ವೈದ್ಯರ ಸಂಬಂಧ ಇದೇ ರೀತಿ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದ ಭಾರೀ ವೈರಲ್ ಆಗಿತ್ತು. ಆ ಬಳಿಕ, ಭಾರತೀಯ ವೈದ್ಯ ಸಂಘವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಇದನ್ನು ಓದಿ | Dolo 65O | ಡೋಲೊ 650 ಮಾತ್ರೆಗಳನ್ನೇ ಸೂಚಿಸಲು ವೈದ್ಯರಿಗೆ ಕಂಪನಿ ಆಮಿಷ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ