ನವದೆಹಲಿ: ರೈಲಿನ ಬರ್ತ್‌ಗಳು ಒಬ್ಬರು ಮಲಗಲು ಸೂಕ್ತವಾಗುವ ಹಾಗೆ ಇದೆ. ಒಂದು ವೇಳೆ ಒಬ್ಬ ತಾಯಿ ತನ್ನ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಳ್ಳಬೇಕು ಎಂದರೆ ಭಾರಿ ಕಷ್ಟಪಡಬೇಕು. ಅದೂ ಎಳೆ ಹಸುಳೆಗಳಿದ್ದರೆ ಕ್ಷಣ ಕ್ಷಣಕ್ಕೂ ಆತಂಕವೆ.
ಪ್ರಯಾಣಿಕರು, ಅದರಲ್ಲೂ ಮಹಿಳಾ ಪ್ರಯಾಣಿಕರ ಕಷ್ಟವನ್ನು ಅರ್ಥ ಮಾಡಿಕೊಂಡಿರುವ ರೈಲ್ವೆ ಇಲಾಖೆ ಪುಟ್ಟ ಹಸುಳೆಗಳು ಮತ್ತು ಅವರ ತಾಯಂದಿರ ಸಂಚಾರಕ್ಕೆ ಅನುಕೂಲವಾಗುವಂತೆ ಬೇಬಿ ಬರ್ತ್‌ಗಳನ್ನು ಒಳಗೊಂಡಿರುವ ವಿಶೇಷ ಬೋಗಿಯನ್ನು ಆರಂಭಿಸಿದೆ.
ಈ ಬರ್ತ್‌ಗಳಲ್ಲಿ ಒಂದು ಮಡಚಬಹುದಾದ ಹೆಚ್ಚುವರಿ ಸೀಟ್ ಒಂದಿರುತ್ತದೆ. ಅದನ್ನು ವಿಸ್ತರಿಸಿದರೆ ಮಗುವನ್ನು ಮಲಗಿಸಿಕೊಳ್ಳಲು ಹೆಚ್ಚುವರಿ ಜಾಗ ದೊರೆಯುತ್ತದೆ. ಕುಳಿತುಕೊಳ್ಳಲು ಮತ್ತು ಮಲಗಲೂ ಇದು ಅನುಕೂಲವಾಗಿದೆ. ಅಲ್ಲದೆ ಮಗು ಕೆಳಗೆ ಬೀಳದಂತೆ ಬೆಲ್ಟ್ ಹಾಕುವ ವ್ಯವಸ್ಥೆಯೂ ಇದೆ.
ಅಮ್ಮನ ದಿನಕ್ಕೆ ವಿಶೇಷ
ಭಾರತೀಯ ರೈಲ್ವೆಯು ತಾಯಿ ಮತ್ತು ಮಗುವಿನ ಅನುಕೂಲಕ್ಕಾಗಿ ರೂಪಿಸಿರುವ ಈ ವ್ಯವಸ್ಥೆಯನ್ನು ಅಮ್ಮಂದಿರ ದಿನದಂದೇ ಲೋಕಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದೆ. ಲಕ್ನೋ ಮೇಲ್‌ನಲ್ಲಿ ಕೋಚ್ ಸಂಖ್ಯೆ 194129/ B4, ಬರ್ತ್ ಸಂಖ್ಯೆ 12 ಮತ್ತು 60 ರಲ್ಲಿ ‘ಬೇಬಿ ಬರ್ತ್’ ಅನ್ನು ಪರಿಚಯಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ದೇಶದ ಇತರ ರೈಲುಗಳಿಗೂ ವಿಸ್ತರಣೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಇದನ್ನು ಓದಿ | ಈ ರೈಲ್ವೆ ಸ್ಟೇಶನ್‌ಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಬೆಲೆ ₹50ಕ್ಕೆ ಏರಿಸಲಾಗಿದೆ