ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ‘ನಾಲ್ಕು’ಕಾಲುಗಳುಳ್ಳ ಹೆಣ್ಣು ಮಗುವೊಂದು ಹುಟ್ಟಿದೆ. ಸಿಕಂದರ್ ಕಂಪೂ ಎಂಬಲ್ಲಿನ ನಿವಾಸಿ ಆರತಿ ಕುಶ್ವಾಹ್ ಅವರ ಹೊಟ್ಟೆಯಲ್ಲಿ ಹುಟ್ಟಿದ ಈ ಮಗುವಿನ ಫೋಟೋ ವೈರಲ್ ಆಗುತ್ತಿದೆ. ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಆರತಿಗೆ ಹೆರಿಗೆಯಾಗಿದ್ದು, ಮಗುವಿಗೆ ನಾಲ್ಕು ಕಾಲುಗಳಿರುವ ಅಸಹಜತೆಯೊಂದನ್ನು ಬಿಟ್ಟರೆ, ಉಳಿದಂತೆ ಅದು ಆರೋಗ್ಯವಾಗಿದೆ. ಹುಟ್ಟುವಾಗ 2.3 ಕೆಜಿ ತೂಕವಿತ್ತು. ಶಿಶುವನ್ನು ಎಲ್ಲ ರೀತಿಯ ಟೆಸ್ಟ್ಗಳೂ ಒಳಪಡಿಸಲಾಗಿದೆ. ಬೇರಾವ ಆರೋಗ್ಯ ಸಮಸ್ಯೆಯೂ ಇಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮಗುವಿನ ತಪಾಸಣೆ ನಡೆಸಿದ ಜಯಾರೋಗ್ಯ ಆಸ್ಪತ್ರೆ ಗ್ರೂಪ್ನ ಡಾ. ಆರ್ಕೆಎಸ್ ಧಕಡ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ‘ಹೀಗೆ ನಾಲ್ಕು ಕಾಲು ಹೊಂದಿ ಹುಟ್ಟುವುದು ದೈಹಿಕ ವಿರೂಪತೆ ಎನ್ನಿಸಿಕೊಳ್ಳುತ್ತದೆ. ಕೆಲವು ಭ್ರೂಣಗಳು ಹೀಗೆ ಹೆಚ್ಚುವರಿಯಾಗಿ ಬೆಳೆಯುತ್ತವೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಗರ್ಭದಲ್ಲಿ ಭ್ರೂಣ ಅಂಕುರವಾಗುತ್ತಿದ್ದಾಗ ಅದು ಯಾವ ಭಾಗದಲ್ಲಿ ಎರಡು ವಿಭಾಗಗಳಾಗುತ್ತದೆಯೋ, ಆ ಭಾಗದಲ್ಲಿ ಅಂಗಗಳು ಹೆಚ್ಚುವರಿಯಾಗಿ ಬೆಳೆಯುತ್ತವೆ. ಈ ಹೆಣ್ಣು ಶಿಶುವಿನ ಭ್ರೂಣ ಸೊಂಟದ ಕೆಳಭಾಗದಲ್ಲಿ ಎರಡು ಭಾಗಗಳಾಗಿ ವಿಭಜನೆಯಾಗಿತ್ತು. ಹಾಗಾಗಿ ಮಗುವಿಗೆ 2 ಕಾಲುಗಳು ಹೆಚ್ಚುವರಿಯಾಗಿ ರಚನೆಗೊಂಡಿವೆ. ಆದರೆ ಈ ಎರಡೂ ಹೆಚ್ಚುವರಿ ಕಾಲುಗಳು ನಿಷ್ಕ್ರಿಯವಾಗಿ ಇರಲಿವೆ. ಕಾರ್ಯನಿರ್ವಹಿಸುವುದಿಲ್ಲ’ ಎಂದು ತಿಳಿಸಿದ್ದಾರೆ.
‘ಸದ್ಯ ಮಗುವಿಗೆ ಕಮಲಾ ರಾಜಾ ಆಸ್ಪತ್ರೆಯ ಎನ್ಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಶುತಜ್ಞರು ಮಗುವಿನ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಅದರ ಹೆಚ್ಚುವರಿ ಕಾಲುಗಳನ್ನು ಸರ್ಜರಿ ಮೂಲಕ ತೆಗೆದು ಹಾಕುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೆಲವು ದಿನಗಳಲ್ಲೇ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಬಳಿಕ ಆ ಮಗು ಸಹಜವಾಗಿಯೇ ಬೆಳೆಯಲಿದೆ ಎಂದೂ ವೈದ್ಯರು ಹೇಳಿದ್ದಾರೆ.
ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಮಧ್ಯಪ್ರದೇಶದ ರತ್ಲಂ ಎಂಬಲ್ಲಿ ಎರಡು ತಲೆ, ಮೂರು ತೋಳುಗಳು ಇರುವ ಮಗುವೊಂದು ಹುಟ್ಟಿತ್ತು. ಆ ಮಗುವಿನ ಬಗ್ಗೆ ಮಾತನಾಡಿದ್ದ ಡಾ. ಬ್ರಜೇಶ್ ಲಾಹೋಟಿ, ‘ಈ ಮಹಿಳೆಯ ಗರ್ಭವನ್ನು ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಎರಡು ಮಕ್ಕಳು ಇರುವುದಾಗಿ ಕಾಣಿಸಿತ್ತು. ಆದರೆ ಹುಟ್ಟಿದಾಗ ಹೀಗೆ ಇತ್ತು. ನಿಜಕ್ಕೂ ಇದು ಅತಿವಿರಳ ಪ್ರಕರಣ. ಈ ಮಗು ತುಂಬ ವರ್ಷ ಬದುಕುವುದು ಅನುಮಾನ’ ಎಂದಿದ್ದರು.
ಇದನ್ನೂ ಓದಿ: Viral Video | ಅಬ್ಬಾ, ಅಜ್ಜ ಪಾರಾದರಲ್ಲ; ಆದರೂ ಬಸ್ನಡಿ ಬಿದ್ದ ವೃದ್ಧ ಬದುಕಿ ಬಂದಿದ್ದು ಹೇಗೆ?!