Site icon Vistara News

ಇಬ್ಬರು ಮಕ್ಕಳನ್ನು ಕೊಂದ ಪ್ರಕರಣ; ಮತ್ತೊಬ್ಬ ಆರೋಪಿಯ ಎನ್‌ಕೌಂಟರ್‌ ಮಾಡಬೇಡಿ ಎಂದ ತಂದೆ

Javed

Badaun Double Murder Case: Killer Sajid's Brother Javed Arrested from Bareilly

ಲಖನೌ: ಉತ್ತರ ಪ್ರದೇಶದ ಬದೌನ್‌ನಲ್ಲಿ (Badaun Murder Case) ಇಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆಗೈದ ಕ್ಷೌರಿಕ ಸಾಜಿದ್‌ನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ ಬೆನ್ನಲ್ಲೇ ಸಾಜಿದ್‌ನ (Sajid) ಸಹೋದರ ಮೊಹಮ್ಮದ್ ಜಾವೇದ್‌ನನ್ನು‌ (Mohammed Javed) ಕೂಡ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮೊಹಮ್ಮದ್‌ ಜಾವೇದ್‌ ಕೂಡ ಎರಡನೇ ಆರೋಪಿಯಾಗಿದ್ದು, ಈತನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿಲ್ಲ. ಆರೋಪಿಯೇ ಪೊಲೀಸರಿಗೆ ಶರಣಾಗಿದ್ದು, ಭೀಕರ ಕೃತ್ಯ ಎಸಗಲು ಕಾರಣವೇನು ಎಂಬುದನ್ನು ತಿಳಿಯಲು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈತನ್ನು ಎನ್‌ಕೌಂಟರ್‌ ಮಾಡಬೇಡಿ, ಜೀವಂತವಾಗಿ ಹಿಡಿದು ವಿಚಾರಣೆ ನಡೆಸಿ. ನನ್ನ ಮಕ್ಕಳನ್ನು ಕೊಂದಿದ್ದಕ್ಕೆ ಕಾರಣ ಪತ್ತೆ ಹಚ್ಚಿ ಎಂದು ಮೃತ ಮಕ್ಕಳ ತಂದೆ ಪೊಲೀಸರಿಗೆ ಮನವಿ ಮಾಡಿದ್ದರು.

11 ವರ್ಷದ ಆಯುಷ್‌ ಹಾಗೂ 6 ವರ್ಷದ ಅಹಾನ್‌ನನ್ನು ಕೊಂದ ಸಾಜಿದ್‌ನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ ಬಳಿಕ ಮೊಹಮ್ಮದ್‌ ಜಾವೇದ್‌ ತಲೆಮರೆಸಿಕೊಂಡಿದ್ದ. ಆದರೆ, ನಿನ್ನನ್ನು ಎನ್‌ಕೌಂಟರ್‌ ಮಾಡುವುದಿಲ್ಲ, ಶರಣಾಗು ಎಂದು ಪೊಲೀಸರು ಮನವಿ ಮಾಡಿದ್ದರು. ಅದರಂತೆ, ಆರೋಪಿ ಮೊಹಮ್ಮದ್‌ ಜಾವೇದ್ ಬರೇಲಿಯ ಬರದಾರಿಯಲ್ಲಿರುವ ಸ್ಯಾಟಲೈಟ್‌ ಪೊಲೀಸ್‌ ಠಾಣೆಯಲ್ಲಿ ಶರಣಾಗಿದ್ದಾನೆ. “ಮೊಹಮ್ಮದ್‌ ಜಾವೇದ್‌ನನ್ನು ಬರೇಲಿಯಿಂದ ಬದೌನ್‌ಗೆ ಕರೆತರಲಾಗುತ್ತಿದೆ. ಭೀಕರ ಹತ್ಯೆಗೆ ಏನು ಕಾರಣ ಎಂಬ ಕುರಿತು ವಿಚಾರಣೆ ನಡೆಸಲಾಗುತ್ತದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗಾರ ಸಾಜಿದ್, ಸಂತ್ರಸ್ತರ ಮನೆಯ ಎದುರು ಕ್ಷೌರದ ಅಂಗಡಿಯನ್ನು ನಡೆಸುತ್ತಿದ್ದ. ಮಕ್ಕಳ ತಂದೆ ವಿನೋದ್ ಅವರಿಗೆ ಆತನ ಪರಿಚಯವಿತ್ತು. ಮಂಗಳವಾರ (ಮಾರ್ಚ್‌ 19) ಸಂಜೆ ಸಾಜಿದ್, ವಿನೋದ್‌ ಮನೆಗೆ ಭೇಟಿ ನೀಡಿದ್ದ. ಆಗ ವಿನೋದ್ ಮನೆಯಲ್ಲಿ ಇರಲಿಲ್ಲ. ವಿನೋದ್ ಅವರ ಪತ್ನಿ ಸಂಗೀತಾ ಅವರಿಗೆ, ತನ್ನ ಗರ್ಭಿಣಿ ಪತ್ನಿ ಆಸ್ಪತ್ರೆಯಲ್ಲಿದ್ದು, ಆಕೆಯ ಚಿಕಿತ್ಸೆಗೆ ₹5,000 ಅಗತ್ಯವಿದೆ ಎಂದು ಸಾಜಿದ್‌ ಹೇಳಿದ್ದಾನೆ. ಸಂಗೀತಾ ಪತಿ ವಿನೋದ್‌ಗೆ ಫೋನ್ ಮಾಡಿದ್ದಾಳೆ. ಹಣ ಕೊಡುವಂತೆ ವಿನೋದ್‌ ಪತ್ನಿಗೆ ಸೂಚಿಸಿದ್ದಾರೆ.

ಸಂಗೀತಾ ಹಣವನ್ನು ಸಾಜಿದ್‌ಗೆ ಕೊಟ್ಟು, ಆತನಿಗೆ ಚಹಾ ಮಾಡಲೆಂದು ಕಿಚನ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆತ ಮೂವರು ಮಕ್ಕಳ ಮೇಲೆ ದಾಳಿ ನಡೆಸಿದ್ದ. ಮೊದಲು ಸಾಜಿದ್, ವಿನೋದ್‌ನ ಹಿರಿಯ ಮಗ 11 ವರ್ಷದ ಆಯುಷ್‌ಗೆ ಮೇಲಿನ ಮಹಡಿಯಲ್ಲಿರುವ ಆತನ ತಾಯಿಯ ಬ್ಯೂಟಿ ಸಲೂನ್ ಅನ್ನು ತೋರಿಸಲು ಕೇಳಿದ್ದಾನೆ. ಹುಡುಗ ಅವನನ್ನು ಎರಡನೇ ಮಹಡಿಗೆ ಕರೆದೊಯಿದ್ದ. ಎರಡನೇ ಮಹಡಿಯಲ್ಲಿ ಸಾಜಿದ್ ಲೈಟ್ ಆಫ್ ಮಾಡಿ ಆಯುಷ್ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾನೆ.

ಅಷ್ಟರಲ್ಲಿ ಆಯುಷ್‌ನ ಕಿರಿಯ ಸಹೋದರ ಅಹಾನ್ (6) ಒಳಗೆ ಬಂದಿದ್ದು, ಅಹಾನ್‌ನನ್ನು ಕೂಡ ಸಾಜಿದ್ ಹಿಡಿದು ಅದೇ ರೀತಿಯಲ್ಲಿ ಕೊಂದಿದ್ದಾನೆ. ಅದನ್ನು ಇನ್ನೊಬ್ಬ ಸಹೋದರ ಪಿಯೂಷ್ ನೋಡಿದ್ದಾನೆ. ಪಿಯೂಷ್‌ ಮೇಲೆ ಸಾಜಿದ್‌ ದಾಳಿ ಮಾಡುವಷ್ಟರಲ್ಲಿ ಏಳು ವರ್ಷದ ಆ ಮಗು ಓಡಿಹೋಗಿ ಅಡಗಿಕೊಂಡಿದ್ದಾನೆ. ಆಯುಷ್ ಮತ್ತು ಅಹಾನ್ ಸಾವನ್ನಪ್ಪಿದ್ದಾರೆ. ಪಿಯೂಷ್ ಸಣ್ಣ ಗಾಯಗಳಾಗಿವೆ.

ಕೊಲೆಯಲ್ಲಿ ಜಾವೇದ್‌ ಪಾತ್ರವೇನು?

ಕೊಲೆಯ ನಂತರ ಹೊರಗೆ ಬೈಕ್‌ನೊಂದಿಗೆ ಕಾಯುತ್ತಿದ್ದ ತನ್ನ ಸಹೋದರ ಜಾವೇದ್‌ನೊಂದಿಗೆ ಸಾಜಿದ್ ಪರಾರಿಯಾಗಿದ್ದ. ಸಾಜಿದ್ ಮತ್ತು ಜಾವೇದ್ ಇಬ್ಬರೂ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ಸಾಜಿದ್‌ನ ಬೆನ್ನು ಹತ್ತಿದ್ದು, ಆತ ಸಿಕ್ಕಿಬಿದ್ದಾಗ ಪೊಲೀಸರ ಗನ್‌ ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದ. ಪೊಲೀಸರು ಗುಂಡು ಹಾರಿಸಿ ಆತನನ್ನು ಕೊಂದುಹಾಕಿದ್ದಾರೆ. ಇನ್ಸ್‌ಪೆಕ್ಟರ್‌ಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾವೇದ್ ಇನ್ನೂ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ: Double Murder: ಕೋಳಿ ಕತ್ತು ಕೊಯ್ದಂತೆ ಮಕ್ಕಳನ್ನು ಸಾಯಿಸಿದ ಕ್ಷೌರಿಕ ಸಾಜಿದ್;‌ ಪೊಲೀಸರಿಂದ ಎನ್‌ಕೌಂಟರ್‌

ಪೊಲೀಸರು ಬಂಧಿಸಿದ ಬಳಿಕ ಜಾವೇದ್‌ ಮಾತನಾಡಿರುವ ವಿಡಿಯೊ ಲಭ್ಯವಾಗಿದೆ. “ನಾನು ಯಾವ ತಪ್ಪನ್ನೂ ಮಾಡಿಲ್ಲ. ನನಗೆ ಬೇಕಾದರೆ ಹೊಡೆಯಿರಿ” ಎಂಬುದಾಗಿ ಹೇಳಿರುವ ವಿಡಿಯೊ ಈಗ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version