ಇಂದೋರ್: ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ವರ್ಗಿಯಾ (Kailash Vijayvargiya) ಅವರ ಮಾತೊಂದು ವಿವಾದಕ್ಕೆ ಕಾರಣವಾಗಿದೆ. ಕೆಟ್ಟದಾಗಿ ಉಡುಗೆ ತೊಡುವ ಹೆಣ್ಣುಮಕ್ಕಳು ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಅವರು ಹೇಳಿರುವ ವಿಡಿಯೊ ವೈರಲ್ ಆಗಿದ್ದು, ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. ಮಧ್ಯಪ್ರದೇಶದ ಇಂದೋರ್ನಲ್ಲಿ, ಹನುಮಾನ್ ಜಯಂತಿ ಮತ್ತು ಮಹಾವೀರ ಜಯಂತಿ ಆಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಹೀಗೆ ಮಾತನಾಡಿದ್ದಾರೆ.
‘ಯುವತಿಯರು/ಹದಿಹರೆಯದ ಹುಡುಗಿಯರು ಅದರಲ್ಲೂ ಮಾದಕ ವಸ್ತುಗಳ ವ್ಯಸನ ಅಂಟಿಸಿಕೊಂಡಿರುವ ಯುವತಿಯರ ಬಗ್ಗೆ ಮಾತನಾಡಿದ ಕೈಲಾಶ್ ವಿಜಯ್ವರ್ಗಿಯಾ, ‘ನಾನು ಎಷ್ಟೋ ಕೆಲಸ ಮುಗಿಸಿ ರಾತ್ರಿ ಮನೆಗೆ ಹೋಗುವಾಗ ನೋಡುತ್ತೇನೆ. ಶಿಕ್ಷಣವಂತರಂತೆ ಕಾಣುವ ಜನರು, ಇನ್ನೂ ಸಣ್ಣವಯಸ್ಸಿನವರು, ಯುವತಿಯರು ಡ್ರಗ್ಸ್ ತೆಗೆದುಕೊಂಡು ತೂರಾಡುತ್ತ, ಅಸಭ್ಯವಾಗಿ ವರ್ತಿಸುತ್ತ ಇರುವುದು ಕಾಣುತ್ತದೆ. ದೇವರಾಣೆ ಹೇಳುತ್ತೇನೆ..ನನಗೆ ಅವರನ್ನು ನೋಡಿದಾಕ್ಷಣ ಕಾರಿನಿಂದ ಇಳಿದು ಹೋಗಿ ಅವರಿಗೆ ಆರೇಳು ಸಲ ಹೊಡೆದು, ಅಮಲು ಇಳಿಸಬೇಕು ಎನ್ನಿಸುತ್ತದೆ’ ಎಂದು ಹೇಳಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದ ಅವರು, ಯುವತಿಯರು ತೊಡುವ ಉಡುಪುಗಳ ಬಗ್ಗೆಯೂ ಮಾತನಾಡಿದರು. ‘ಹುಡುಗಿಯರು ಅದೆಷ್ಟು ಅಸಭ್ಯವಾಗಿ ಬಟ್ಟೆ ಧರಿಸಿರುತ್ತಾರೆ. ನಾವು ಮಹಿಳೆಯರನ್ನು ದೇವತೆಗಳು ಎಂದು ಭಾವಿಸುತ್ತೇವೆ. ಆದರೆ ಈ ಯುವತಿಯರಲ್ಲಿ ದೇವತೆಗಳ ಒಂದಂಶವನ್ನು ಕಾಣಲು ಸಾಧ್ಯವಿಲ್ಲ. ಅವರೆಲ್ಲ ಥೇಟ್ ಶೂರ್ಪನಖಿಯಂತೆ ಕಾಣಿಸುತ್ತಾರೆ. ‘ದೇವರು ನಿಮಗೆ ಚೆಂದನೆಯ ದೇಹ ಕೊಟ್ಟಿದ್ದಾನೆ. ಒಳ್ಳೊಳ್ಳೆ ಬಟ್ಟೆಗಳನ್ನು ಧರಿಸಿ, ನಿಮ್ಮ ಮಕ್ಕಳಿಗೂ ಒಳ್ಳೆ ಸಂಸ್ಕಾರ ನೀಡಿ’ ಎಂದು ಅವರ ಬಳಿ ಕೇಳುತ್ತೇನೆ. ‘ಈ ಬಗ್ಗೆ ನನಗೆ ನಿಜವಾಗಿಯೂ ಆತಂಕ ಇದೆ’ ಎಂದು ಕೈಲಾಶ್ ಹೇಳಿದ್ದಾರೆ.
ಇದನ್ನೂ ಓದಿ: Karnataka Congress: ಚುನಾವಣಾ ಆಯೋಗ ತಾರತಮ್ಯ ಮಾಡುತ್ತಿದೆ: ಬಿಜೆಪಿ ನಾಯಕರಿಂದ ಒತ್ತಡ ಎಂದ ಕೃಷ್ಣಭೈರೇಗೌಡ
ಈ ವಿಡಿಯೊವನ್ನು ಕಾಂಗ್ರೆಸ್ನವರು ಹಂಚಿಕೊಂಡು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಟ್ವೀಟ್ ಮಾಡಿ, ‘ಕೈಲಾಶ್ ವಿಜಯ್ವರ್ಗಿಯಾ ಅವರು ಇಷ್ಟು ಗಲೀಜು ಹೇಳಿಕೆ ನೀಡಿ, ರಾಷ್ಟ್ರದ ಮಹಿಳೆಯರಿಗೆಲ್ಲ ಅವಮಾನ ಮಾಡಿದ್ದರೂ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರೇಕೆ ಸುಮ್ಮನಿದ್ದಾರೆ? ಅಥವಾ ಸ್ಮೃತಿ ಇರಾನಿ ಕೇವಲ ರಾಹುಲ್ ಗಾಂಧಿಯವರ ವಿರುದ್ಧ ಮಾತಾಡಲಷ್ಟೇ ತಮ್ಮ ಧ್ವನಿ ಬಳಕೆ ಮಾಡುತ್ತಾರಾ?’ ಎಂದು ವ್ಯಂಗ್ಯ ಮಾಡಿದ್ದಾರೆ. ಇನ್ನೊಬ್ಬ ಕಾಂಗ್ರೆಸ್ ನಾಯಕಿ ಸಂಗೀತಾ ಶರ್ಮಾ ಪ್ರತಿಕ್ರಿಯೆ ನೀಡಿ ‘ಬಿಜೆಪಿ ನಾಯಕರು ಮಹಿಳೆಯರಿಗೆ ಮತ್ತೆಮತ್ತೆ ಅವಮಾನ ಮಾಡುತ್ತಿದ್ದಾರೆ. ಅವರೆಂಥಾ ಮನಸ್ಥಿತಿಯವರು ಎಂಬುದು ಅವರ ಮಾತುಗಳಲ್ಲೇ ಗೊತ್ತಾಗುತ್ತದೆ. ಈಗ ಕೈಲಾಶ್ ವಿಜಯ್ವರ್ಗಿಯಾ ಅವರು ಮಹಿಳೆಯರು ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಹೇಳಿದ್ದಾರೆ. ಸ್ವತಂತ್ರ ಭಾರತದಲ್ಲಿ ಯುವತಿಯರಿಗೆ ತಮಗೆ ಬೇಕಾದ ಉಡುಪು ಧರಿಸಲೂ ಸ್ವಾತಂತ್ರ್ಯವಿದೆ. ಬಿಜೆಪಿ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.