Site icon Vistara News

Lok Sabha Election 2024: ‘ಲೋಕ’ ಸಮರದಲ್ಲಿ ಬಿಎಸ್‌ಪಿ ಏಕಾಂಗಿ ಸ್ಪರ್ಧೆ; ಬೆಹನ್‌ಜಿ ಪ್ರಧಾನಿ ಕನಸು ಏನಾಯ್ತು?

Mayawati

ಲಖನೌ: 2024ರ ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿರುವ, ಪ್ರತಿಪಕ್ಷಗಳು ಒಗ್ಗೂಡಿ INDIA ಒಕ್ಕೂಟ ರಚಿಸಿರುವ ಹಾಗೂ ಎನ್‌ಡಿಎ ಕೂಡ ಮಿತ್ರಪಕ್ಷಗಳನ್ನೂ ಒಗ್ಗೂಡಿಸಿ ಶಕ್ತಿ ಪ್ರದರ್ಶಿಸಿರುವ ಬೆನ್ನಲ್ಲೇ, “ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ” ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಘೋಷಣೆ ಮಾಡಿರುವುದು ಅಚ್ಚರಿ ಮೂಡಿಸಿದೆ.

“ಯಾವ ಮೈತ್ರಿಕೂಟದ ಜತೆಗೂ ಬಿಎಸ್‌ಪಿ ಹೋಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುತ್ತದೆ. ಯಾವ ಮೈತ್ರಿಕೂಟಕ್ಕೂ ನಮ್ಮ ಬೆಂಬಲವಿಲ್ಲ. ಸಾರ್ವತ್ರಿಕ ಚುನಾವಣೆಗೆ ಬಿಎಸ್‌ಪಿ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ನಾವು ಕೂಡ ದೇಶಾದ್ಯಂತ ಸಭೆ, ಸಮಾವೇಶ, ರ‍್ಯಾಲಿಗಳನ್ನು ಆಯೋಜಿಸುತ್ತೇವೆ. ಆ ಮೂಲಕ ಜನರ ಬೆಂಬಲ ಗಳಿಸುತ್ತೇವೆ” ಎಂದು ಮಾಜಿ ಮುಖ್ಯಮಂತ್ರಿಯೂ ಆದ ಮಾಯಾವತಿ ಘೋಷಿಸಿದ್ದಾರೆ.

ಬೆಹನ್‌ಜಿ ಪ್ರಧಾನಿ ಕನಸು ಏನಾಯ್ತು?

ಮಾಯಾವತಿಯವರು ಒಂದು ಕಾಲದಲ್ಲಿ ಪ್ರಧಾನಿ ಅಭ್ಯರ್ಥಿ ಎಂದೇ ಹೇಳಲಾಗಿತ್ತು. ಪ್ರಧಾನಿ ಕನಸನ್ನು ಮಾಯಾವತಿ ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದರೆ, ಬಿಎಸ್‌ಪಿ ಯಾವುದೇ ಮೈತ್ರಿಕೂಟದ ಜತೆಗೆ ಹೋಗದೆ, ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ಅವರು ಹೇಳುವ ಮೂಲಕ ಪ್ರಧಾನಿ ಕನಸು ಅಧಿಕೃತವಾಗಿ ಕೈಬಿಟ್ಟಿರುವ ಕುರಿತು ಅವರೇ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: Chirag Paswan: ಚಿರಾಗ್‌ ಪಾಸ್ವಾನ್‌ಗೆ ಮೋದಿ ಅಪ್ಪುಗೆ; ರಾಹುಲ್‌ ಗಾಂಧಿ ಎಫೆಕ್ಟ್‌ ಎಂದ ಕಾಂಗ್ರೆಸ್

ಮಮತಾ ಬ್ಯಾನರ್ಜಿ, ನಿತೀಶ್‌ ಕುಮಾರ್‌, ಅರವಿಂದ್‌ ಕೇಜ್ರಿವಾಲ್‌ ಸೇರಿ ಹಲವರು ಮಂಗಳವಾರ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲರೂ ಒಗ್ಗೂಡಿ, ಬಿಜೆಪಿಯನ್ನು ಸೋಲಿಸಿದರೆ ಇವರಲ್ಲಿ ಹಲವು ಜನ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳೂ ಆಗಿದ್ದಾರೆ. ಆದರೆ, ಮಾಯಾವತಿಯವರು ಎನ್‌ಡಿಎ ಕಡೆಗೂ ಹೋಗದೆ, ಪ್ರತಿಪಕ್ಷಗಳ ಜತೆಗೂ ಕೈ ಜೋಡಿಸದೆ, ಏಕಾಂಗಿಯಾಗಿ ಸ್ಪರ್ಧಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೂ ಮೊದಲು ಅವರು ಎನ್‌ಡಿಎಗೆ ಬೆಂಬಲ ನೀಡುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.

ಒಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳಿಂದ ಹಿಡಿದು ರಾಷ್ಟ್ರೀಯ ಪಕ್ಷಗಳವರೆಗೆ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸುತ್ತಿವೆ. ಅದರಲ್ಲೂ, ಚುನಾವಣೆಗೆ 10 ತಿಂಗಳು ಬಾಕಿ ಇರುವಾಗಲೇ ಪ್ರತಿಪಕ್ಷಗಳ ಒಗ್ಗಟ್ಟು ಪ್ರದರ್ಶಿಸಿ ಆಡಳಿತಾರೂಢ ಎನ್‌ಡಿಗೆ ಸೆಡ್ಡು ಹೊಡೆದಿವೆ. ಅತ್ತ, ಬಿಜೆಪಿಯೂ ಮಿತ್ರಪಕ್ಷಗಳನ್ನು ಹಿಡಿದಿಟ್ಟಿದೆ. ಇವೆಲ್ಲ ಕಾರಣಗಳಿಂದಾಗಿ ಲೋಕಸಭೆ ಚುನಾವಣೆಯು ಕುತೂಹಲ ಕೆರಳಿಸಿದೆ.

Exit mobile version