ನವದೆಹಲಿ: ಹಿಂದುತ್ವ ಹಾಗೂ ಇಸ್ಲಾಂ ಕಾಲಘಟ್ಟ, ಮತಾಂತರದ ಕುರಿತು ಡೆಮಾಕ್ರಸಿ ಪ್ರೊಗ್ರೆಸ್ಸಿವ್ ಆಜಾದ್ ಪಕ್ಷದ ಮುಖ್ಯಸ್ಥ, ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಅವರು ನೀಡಿದ ಹೇಳಿಕೆಯನ್ನು ಹಿಂದು ಸಂಘಟನೆಗಳಾದ ಬಜರಂಗದಳ (Bajrang Dal) ಹಾಗೂ ವಿಶ್ವ ಹಿಂದು ಪರಿಷತ್ (Vishwa Hindu Parishad) ಸ್ವಾಗತಿಸಿವೆ. “ಗುಲಾಂ ನಬಿ ಆಜಾದ್ ಅವರು ನೀಡಿದ ಹೇಳಿಕೆಯನ್ನು ಸ್ವಾಗತಿಸುತ್ತೇವೆ” ಎಂದು ಸಂಘಟನೆಗಳು ತಿಳಿಸಿವೆ.
“ಗುಲಾಂ ನಬಿ ಆಜಾದ್ ಅವರು ನೀಡಿದ ಹೇಳಿಕೆ ಸಮಂಜಸವಾಗಿದೆ. ಭಾರತದಲ್ಲಿದ್ದ ಹಿಂದುಗಳನ್ನು ಹೇಗೆ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲಾಯಿತು ಎಂಬುದಕ್ಕೆ ಇವರ ಹೇಳಿಕೆ ಸಾಕ್ಷಿಯಾಗಿದೆ” ಎಂದು ಬಜರಂಗದಳ ರಾಷ್ಟ್ರೀಯ ಸಂಚಾಲಕ ನೀರಜ್ ದೌನೆರಿಯಾ ತಿಳಿಸಿದ್ದಾರೆ. ಇನ್ನು ವಿಎಚ್‌ಪಿ ಕೇಂದ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ವಿನಾಯಕರಾವ್ ದೇಶಪಾಂಡೆ ಅವರು ಕೂಡ ಗುಲಾಂ ನಬಿ ಆಜಾದ್ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. “ಭಾರತದ ಮುಸ್ಲಿಮರ ಮೂಲ ಹಿಂದುತ್ವವಾಗಿದೆ ಹಾಗೂ ಕಾಶ್ಮೀರ ಮುಸ್ಲಿಮರು ಮೊದಲು ಪಂಡಿತರಾಗಿದ್ದರು ಎಂಬ ಹೇಳಿಕೆಯನ್ನು ಸ್ವಾಗತಿಸುತ್ತೇವೆ” ಎಂದಿದ್ದಾರೆ.
ಗುಲಾಂ ನಬಿ ಆಜಾದ್ ಹೇಳಿದ್ದೇನು?
ಜಮ್ಮು-ಕಾಶ್ಮೀರದ ದೋಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, “ನಾವು ಹಿಂದುಗಳು, ಮುಸ್ಲಿಮರು, ದಲಿತರ ಹಾಗೂ ಕಾಶ್ಮೀರಿಗರಿಗಾಗಿ ರಾಜ್ಯವನ್ನು ನಿರ್ಮಿಸಿದ್ದೇವೆ. ಯಾರೂ ಹೊರಗಿನಿಂದ ಇಲ್ಲಿಗೆ ಬಂದಿಲ್ಲ. ಸಂಸತ್ತಿನಲ್ಲಿ ನಮ್ಮ ಸಂಸದರೊಬ್ಬರು ಕಾಶ್ಮೀರಕ್ಕೆ ಹೊರಗಿನಿಂದ ಬಂದವರ ಕುರಿತು ಮಾತನಾಡಿದರು. ಆದರೆ, ನಾನು ಅದನ್ನು ನಿರಾಕರಿಸಿದೆ. ಇಸ್ಲಾಂ ಕೇವಲ 1,500 ವರ್ಷದ ಇತಿಹಾಸ ಹೊಂದಿದೆ. ಆದರೆ, ಹಿಂದುತ್ವವು ಇದಕ್ಕಿಂತ ತುಂಬ ಹಳೆಯದು” ಎಂದು ಹೇಳಿದ್ದರು.
“ಕಾಶ್ಮೀರದಲ್ಲಿ 600 ವರ್ಷಗಳ ಹಿಂದೆ ಮುಸ್ಲಿಮರು ಎಲ್ಲಿದ್ದರು? ಕಣಿವೆಯಲ್ಲಿ ಇದ್ದವರೆಲ್ಲ ಕಾಶ್ಮೀರಿ ಪಂಡಿತರೇ ಆಗಿದ್ದರು. ಅಂದರೆ, ಈಗಿರುವ ಮುಸ್ಲಿಮರು ಮೊದಲು ಕಾಶ್ಮೀರಿ ಪಂಡಿತರೇ ಆಗಿದ್ದರು. ಹಾಗಾಗಿ, ಇಲ್ಲಿನ ಮುಸ್ಲಿಮರ ಮೂಲ ಹಿಂದು ಧರ್ಮವೇ ಆಗಿತ್ತು. ಹಿಂದು ಧರ್ಮದ ಆಧಾರದ ಮೇಲೆಯೇ ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ ಇದೆ. ಹಾಗಾಗಿ, ನಮ್ಮ ಮೂಲ ಹಿಂದು ಧರ್ಮವೇ ಆಗಿದೆ” ಎಂದು ಗುಲಾಂ ನಬಿ ಆಜಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.