Site icon Vistara News

ಸರ್ಕಾರ ನಮಗೆ ತಿಂಗಳಿಗೆ 6000 ರೂಪಾಯಿ ಪಿಂಚಣಿ ಕೊಡಲೇಬೇಕು ಎಂದು ಪಟ್ಟು ಹಿಡಿದ ಬೋಳುತಲೆಯ ಮಂದಿ!

bald men Demand pension From Government in Telangana

ಹೈದರಾಬಾದ್​: ತಲೆಯಲ್ಲಿ ಕೂದಲು ಇಲ್ಲದೆ ಬೋಳಾಗಿರುವವರನ್ನು, ಅರ್ಧ ತಲೆಗೆ ಮಾತ್ರ ಕೂದಲಿದ್ದು ಬಕ್ಕತಲೆ (Bald Men) ಆಗಿರುವವರನ್ನು ಅಪಹಾಸ್ಯ ಮಾಡುವ ಪರಿಪಾಠ ಅನೇಕರಲ್ಲಿ ಇದೆ. ತಲೆ ಮೇಲೆ ಸೊಂಪಾಗಿ ಕೂದಲಿರಬೇಕು, ಅದಕ್ಕೊಂದು ಒಪ್ಪಿತ ಸ್ಟೈಲ್​ ಇರಬೇಕು ಇದು ಪುರುಷ/ಮಹಿಳೆಯರ ಸಹಜ ಬಯಕೆ. ತಲೆ ಬೋಳಾಗುವ ಸಮಸ್ಯೆ ಮಹಿಳೆಯರಿಗೆ ಇರುವುದಿಲ್ಲ ಎಂದಲ್ಲ, ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಸಮಸ್ಯೆ ಕಡಿಮೆ. ಈಗಂತೂ ಅನೇಕ ಪುರುಷರು ಸಣ್ಣ ವಯಸ್ಸಿನಲ್ಲಿಯೇ ತಲೆಕೂದಲು ಕಳೆದುಕೊಂಡು ಬೋಳಾಗುತ್ತಾರೆ. ಇಲ್ಲವೇ ಬಕ್ಕ ತಲೆ ಸಮಸ್ಯೆಗೆ ಒಳಗಾಗುತ್ತಾರೆ. ಅವರನ್ನು ನೋಡಿ ಹಲವರು ನಗುತ್ತಾರೆ.

ಹೀಗೆ ತಲೆ ಬೋಳಾಗಿರುವ ಕಾರಣಕ್ಕೆ ಅನೇಕರಿಂದ ಅಪಹಾಸ್ಯಕ್ಕೀಡಾದ ತೆಲಂಗಾಣದ ಒಂದಷ್ಟು ಪುರುಷರು ಗುಂಪುಗೂಡಿ, ‘ತಮಗೆ ತಿಂಗಳಿಗೆ 6000 ರೂಪಾಯಿ ಪಿಂಚಣಿ ಹಣ ನೀಡಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಿದ್ದಿಪೇಟ್​​ನ ತಂಗಲ್ಲಪಲ್ಲಿ ಎಂಬ ಹಳ್ಳಿಯಲ್ಲಿರುವ ಒಂದಷ್ಟು ಮಂದಿ ಬೋಳರು-ಬಕ್ಕತಲೆಯವರೆಲ್ಲ ಸೇರಿಕೊಂಡು ಈ ಆಗ್ರಹ ಮಾಡಿದ್ದಾರೆ.

‘ನಮ್ಮ ತಲೆಯಲ್ಲಿ ಕೂದಲಿಲ್ಲ ಎಂಬ ಕಾರಣಕ್ಕೆ ನಮಗೆ ಅನೇಕರು ಅವಮಾನ ಮಾಡುತ್ತಿದ್ದಾರೆ. ಇದರಿಂದಾಗಿ ಮುಜುಗರ, ಅವಮಾನಕ್ಕೆ ಒಳಗಾಗುತ್ತಿದ್ದೇವೆ. ಹೀಗೆ ವ್ಯಂಗ್ಯ-ಅಣುಕಿಸುವ ಮಾತುಗಳನ್ನು ಕೇಳಿಕೇಳಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದೇವೆ. ಸರ್ಕಾರ ನಮ್ಮಂಥ ಬೋಳು ತಲೆ/ಬಕ್ಕತಲೆಯವರಿಗೆ ತಿಂಗಳಿಗೆ 6000 ರೂಪಾಯಿ ಪಿಂಚಣಿ ಘೋಷಿಸಿದರೆ, ನಮಗೂ ಆದ್ಯತೆ ಇದೆ ಎಂದಾಗುತ್ತದೆ. ನಮ್ಮನ್ನು ಅಪಹಾಸ್ಯ ಮಾಡುವುದನ್ನು ಜನ ನಿಲ್ಲಿಸುತ್ತಾರೆ. ನಮಗೆ ಈ ಸಂಕ್ರಾಂತಿಗೆ ಪಿಂಚಣಿ ಗಿಫ್ಟ್ ಘೋಷಿಸಿ’ ಎಂದು ಬೋಳರ ಗುಂಪು ಸರ್ಕಾರಕ್ಕೆ ಹೇಳಿದೆ.

ಅಂದಹಾಗೇ, ಇದೇ ಹಳ್ಳಿಯಲ್ಲಿ ಸುಮಾರು 30 ಮಂದಿ ಬೋಳು/ಬಕ್ಕ ತಲೆಯವರು ಇದ್ದಾರೆ. ಅವರಲ್ಲಿ ಕೆಲವರು ಇನ್ನೂ 20ರ ವಯಸ್ಸಿನ ಆಸುಪಾಸಿನವರು. ಇವರ ಗುಂಪಿನ ಅಧ್ಯಕ್ಷನ ಹೆಸರು ವೇಲ್ಡಿ ಬಾಲಯ್ಯ. ಪಿಂಚಣಿ ಹಣದಲ್ಲಿ ಏನು ಮಾಡುತ್ತೀರಿ ಎಂದು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು ‘ಆ ಹಣದಲ್ಲಿ ನಾವು ಚಿಕಿತ್ಸೆ ಪಡೆಯುತ್ತೇವೆ. ಕೂದಲು ಉದುರಿ ಹೋಗಿದೆ ಎಂಬ ಕಾರಣಕ್ಕೆ ಜನರು ನಗುತ್ತಿದ್ದಾರೆ. ನಾವೂ ಅಗತ್ಯ ಟ್ರೀಟ್​​ಮೆಂಟ್ ಪಡೆಯುತ್ತೇವೆ. ಅದಕ್ಕಾಗಿ ಈ ಹಣ ಉಪಯೋಗಿಸಿಕೊಳ್ಳುತ್ತೇವೆ’ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ತಲೆ ಕೂದಲು ಉದುರಿದ್ದರಿಂದ ನೊಂದ ಯುವತಿ ನೇಣಿಗೆ ಶರಣು

Exit mobile version