ಡೆಹ್ರಾಡೂನ್: ಉತ್ತರಾಖಂಡದಲ್ಲಿ ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರ ಒಡೆತನದ ಪತಂಜಲಿ ಸಂಸ್ಥೆಗೆ ಸೇರಿದ ಐದು ಔಷಧಗಳ ಉತ್ಪಾದನೆ ಮೇಲೆ ಹೇರಿದ್ದ ನಿಷೇಧವನ್ನು ಉತ್ತರಾಖಂಡ ಸರ್ಕಾರ ತೆರವುಗೊಳಿಸಿದೆ. ಉತ್ತರಾಖಂಡ ಆಯುರ್ವೇದ ಹಾಗೂ ಯುನಾನಿ ಪರವಾನಗಿ ಪ್ರಾಧಿಕಾರವು ತನ್ನ ಆದೇಶ ಹಿಂಪಡೆದಿದ್ದು, ಈಗ ಔಷಧಗಳನ್ನು ಉತ್ಪಾದನೆಗೆ ಅನುಮತಿ ನೀಡಿದೆ.
ದಿವ್ಯ ಫಾರ್ಮಸಿಯು ಡ್ರಗ್ಸ್ ಆ್ಯಂಡ್ ಮ್ಯಾಜಿಕ್ ರೆಮೆಡೀಸ್ ಆ್ಯಕ್ಟ್ ಮತ್ತು ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಆ್ಯಕ್ಟ್‌ನ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಕೇರಳದ ವೈದ್ಯ ಕೆ.ವಿ.ಬಾಬು ಎಂಬುವರು ದೂರು ನೀಡಿದ ಹಿನ್ನೆಲೆಯಲ್ಲಿ ಬಾಬಾ ರಾಮದೇವ್ ಅವರಿಗೆ ಸೇರಿದ ದಿವ್ಯ ಫಾರ್ಮಸಿಯ (Divya Pharmacy) ಐದು ಔಷಧಗಳ ಉತ್ಪಾದನೆ ನಿಲ್ಲಿಸುವಂತೆ ಆದೇಶಿಸಲಾಗಿತ್ತು. ಈ ಇದನ್ನು ಹಿಂಪಡೆಯಲಾಗಿದೆ. ನಿಷೇಧ ಹಿಂಪಡೆದಿದ್ದಕ್ಕೆ ಬಾಬಾ ರಾಮದೇವ್ ಅವರ ಆಪ್ತ ಆಚಾರ್ಯ ಬಾಲಕೃಷ್ಣ ಅವರು ಟ್ವಿಟರ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಆದೇಶ ಹಿಂಪಡೆದಿದ್ದು ಏಕೆ?
ರಕ್ತದೊತ್ತಡ, ಗಳಗಂಡ, ಗ್ಲುಕೋಮಾ ಹಾಗೂ ಅಧಿಕ ಕೊಬ್ಬಿನ ಅಂಶಕ್ಕೆ ಬಳಸುವ ಬಿಪಿಗ್ರಿಟ್, ಮಧುಗ್ರಿಟ್, ಥೈರೋಗ್ರಿಟ್, ಲಿಪಿಡೊಮ್ ಹಾಗೂ ಐಗ್ರಿಟ್ ಗೋಲ್ಡ್ ಮೆಡಿಸಿನ್‌ಗಳ ಉತ್ಪಾದನೆ ಮೇಲಿನ ನಿಷೇಧ ಹಿಂಪಡೆಯಲಾಗಿದೆ. ಇದರ ಕುರಿತು ಪ್ರಾಧಿಕಾರವು ಈಗ ಸ್ಪಷ್ಟನೆ ನೀಡಿದೆ. “ತರಾತುರಿಯಲ್ಲಿ ಉತ್ಪಾದನೆ ಸ್ಥಗಿತಕ್ಕೆ ಆದೇಶಿಸಲಾಗಿತ್ತು. ಆದೇಶ ಹೊರಡಿಸುವ ಮೊದಲು ನಾವು ವಿವರಣೆ ಕೇಳಿ ನೋಟಿಸ್ ನೀಡಬೇಕಿತ್ತು. ಹಾಗಾಗಿ ನಿಷೇಧ ಹಿಂಪಡೆಯಲಾಗಿದೆ” ಎಂದು ತಿಳಿಸಿದೆ.
ಇದನ್ನೂ ಓದಿ | Patanjali | ಪತಂಜಲಿಯ 4 ಕಂಪನಿಗಳಿಂದ 5 ವರ್ಷಗಳಲ್ಲಿ ಷೇರುಪೇಟೆ ಪ್ರವೇಶ: ಬಾಬಾ ರಾಮ್‌ದೇವ್