Site icon Vistara News

Ban on Muslim organizations: ಕಣಿವೆನಾಡಿನ ಎರಡು ಮುಸ್ಲಿಂ ಸಂಘಟನೆಗಳು ಬ್ಯಾನ್‌!

Ban on Muslim organizations

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಎರಡು ಮುಸ್ಲಿಂ ಸಂಘಟನೆ(Ban on Muslim organizations)ಗಳ ಮೇಲೆ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(UAPA)ಯಡಿಯಲ್ಲಿ ಐದು ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ(ಮಸರತ್ ಆಲಂ ಬಣ) ಮತ್ತು ತೆಹ್ರೀಕ್-ಎ-ಹುರಿಯತ್ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರುವಂತೆ ವಾದ ಮಂಡಿಸಿತ್ತು. ಇದೀಗ ಇದನ್ನು ಯುಎಪಿಎ ನ್ಯಾಯಮಂಡಳಿ ಎತ್ತಿ ಹಿಡಿದಿದೆ.

ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಈ ಸಂಘಟನೆಗಳ ಮೇಲೆ ನಿಷೇಧ ಹೇರಲು ಸಾಕಷ್ಟು ಕಾರಣವಿದೆಯೇ ಎಂದು ನಿರ್ಣಯಿಸಲು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸಚಿನ್ ದತ್ತಾ ಅವರ ಏಕಸದಸ್ಯ ನ್ಯಾಯಮಂಡಳಿಯನ್ನು ಜನವರಿಯಲ್ಲಿ ರಚಿಸಲಾಗಿತ್ತು. ಕಣಿವೆ ರಾಜ್ಯದಲ್ಲಿ ಈ ಎರಡು ಸಂಘಟನೆಗಳು ಪ್ರತ್ಯೇಕತಾವಾದಿ ಹಾಗೂ ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಖಚಿತವಾಗಿದೆ. ಅದೂ ಅಲ್ಲದೇ ಪಾಕಿಸ್ತಾನದ ಜೊತೆ ನಿಕಟ ಸಂಪರ್ಕ ಹೊಂದಿದೆ ಎಂದು ನ್ಯಾಯಪೀಠ ವರದಿ ನೀಡಿತ್ತು.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಪರವಾಗಿ ಈ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಕಣಿವೆಯಲ್ಲಿ ಉಗ್ರಗಾಮಿ ಕಾರ್ಯಾಚರಣೆಗಳನ್ನು ನಡೆಸಲು ಬೆಂಬಲವನ್ನು ನಿರಂತರವಾಗಿ ನೀಡುತ್ತಿವೆ ಎಂಬ ಕೇಂದ್ರದ ವಾದವನ್ನು ನ್ಯಾಯಮಂಡಳಿ ಎತ್ತಿಹಿಡಿದಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಮತ್ತು ವಕೀಲ ರಜತ್ ನಾಯರ್ ಅವರು ನ್ಯಾಯಮಂಡಳಿಯ ಮುಂದೆ ಸರ್ಕಾರವನ್ನು ಪ್ರತಿನಿಧಿಸಿದರು. ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸರತ್ ಆಲಂ ಬಣ) ಕೇಂದ್ರಾಡಳಿತ ಪ್ರದೇಶದಲ್ಲಿ ರಾಷ್ಟ್ರವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಾರಣಕ್ಕಾಗಿ 2023 ರ ಡಿಸೆಂಬರ್ 27 ರಂದು ಯುಎಪಿಎ ಅಡಿಯಲ್ಲಿ ಸರ್ಕಾರವು ಐದು ವರ್ಷಗಳ ಕಾಲ ಕಾನೂನುಬಾಹಿರ ಎಂದು ಘೋಷಿಸಿತು.

ಯಾವುದು ಈ ತೆಹ್ರೀಕ್-ಎ-ಹುರಿಯತ್ ಸಂಘಟನೆ?

ಮೃತ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಸ್ಥಾಪಿಸಿದ, ತೆಹ್ರೀಕ್-ಎ-ಹುರಿಯತ್ (TeH) ಅನ್ನು ಡಿಸೆಂಬರ್ 31, 2023 ರಂದು ಐದು ವರ್ಷಗಳ ಕಾಲ ಕಾನೂನುಬಾಹಿರಗೊಳಿಸಲಾಯಿತು. ಈ ಸಂಘಟನೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಮತ್ತು ಭಾರತ-ವಿರೋಧಿ ಪ್ರಚಾರವನ್ನು ಹರಡುವ ಆರೋಪದಲ್ಲಿ ಅದನ್ನು ನಿಷೇಧಿಸಲಾಗಿದೆ. TeH ಮತ್ತು ಅದರ ಸದಸ್ಯರು ತಮ್ಮ ಚಟುವಟಿಕೆಗಳಿಂದ ದೇಶದ ಸಾಂವಿಧಾನಿಕ ಅಧಿಕಾರ ಮತ್ತು ಸಾಂವಿಧಾನಿಕ ಸ್ಥಾಪನೆಗೆ ಸಂಪೂರ್ಣ ಅಗೌರವವನ್ನು ತೋರಿಸುತ್ತಾರೆ ಮತ್ತು ದೇಶದ ಸಮಗ್ರತೆ, ಸಾರ್ವಭೌಮತೆ, ಭದ್ರತೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಕೇಂದ್ರದ ವಾದವೇನು?

ಉಗ್ರ ಸಂಘಟನೆಗಳ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲು ಪಿತೂರಿ, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಿಗೆ ಹಲವು ಮೂಲಗಳಿಂದ ಹಣ ಸಂಗ್ರಹಿಸಿ ನೆರವು ನೀಡುವುದು ಸೇರಿದಂತೆ ಹಲವು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೆಹ್ರಿಕ್ ಇ ಹುರಿಯತ್​ ನಾಯಕರು ಮತ್ತು ಸದಸ್ಯರು ತೊಡಗಿಸಿಕೊಂಡಿದ್ದರು. ನಿಷೇಧಿತ ಸಂಘಟನೆಗಳ ಸದಸ್ಯರ ದೇಶವಿರೋಧಿ ಚಟುವಟಿಕೆಗಳಿಂದ ಸಾಂವಿಧಾನಿಕ ಅಧಿಕಾರ ಸ್ಥಾಪನೆ, ದೇಶದ ಸಮಗ್ರತೆ, ಸಾರ್ವಭೌಮತೆ, ಭದ್ರತೆ ಮತ್ತು ಕೋಮು ಸೌಹಾರ್ದತೆಗೆ ಉಂಟಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ನಿಷೇಧಕ್ಕೆ ಕಾರಣ ನೀಡಿತ್ತು.

ಮುಸ್ಲಿಂ ಲೀಗ್ (ಮಸರತ್ ಆಲಂ ಬಣ) ಜಮ್ಮು ಕಾಶ್ಮೀರವನ್ನು ಭಾರತದಿಂದ ವಿಘಟಿಸಿ ಸ್ವತಂತ್ರವನ್ನಾಗಿ ಮಾಡುವ ದುರುದ್ದೇಶ ಹೊಂದಿತ್ತು. ಜೊತೆಗೆ ಪಾಕಿಸ್ತಾನದಲ್ಲಿ ವಿಲೀನ, ಇಸ್ಲಾಮಿಕ್​ ಆಡಳಿತವನ್ನು ಸ್ಥಾಪಿಸುವ ಸಂಘಟನೆಯ ಗುರಿಯಾಗಿತ್ತು ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.

Exit mobile version