ನವ ದೆಹಲಿ: ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಎಎನ್ಐ ಸುದ್ದಿ ಮಾಧ್ಯಮಕ್ಕೆ ಸಂದರ್ಶನ ಕೊಟ್ಟು, ಹಲವು ಮಹತ್ವದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕೊವಿಡ್ 19 ಸಾಂಕ್ರಾಮಿಕ ಪರಿಸ್ಥಿತಿ ಎದುರಿಸಲು ಕೊವಿಡ್ 19 ಲಸಿಕೆ ನೀಡಿದ ಮತ್ತು ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದಾಗ, ಆ ದೇಶದಲ್ಲಿದ್ದ ಬಾಂಗ್ಲಾದೇಶದ ವಿದ್ಯಾರ್ಥಿಗಳನ್ನೂ ರಕ್ಷಿಸಲು ಸಹಾಯ ಮಾಡಿದ್ದಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ಹಸೀನಾ ಶೇಖ್ ಸೆಪ್ಟೆಂಬರ್ 5ರಂದು ಭಾರತಕ್ಕೆ ಬರಲಿದ್ದು, ಅದಕ್ಕೂ ಪೂರ್ವ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಂದರ್ಶನ ನೀಡಿದ ಅವರು ‘1971 ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಬಾಂಗ್ಲಾದೇಶ ವಿಮೋಚನೆಗೆ ಭಾರತ ಮಾಡಿದ ಉಪಕಾರವನ್ನೂ ನೆನಪಿಸಿಕೊಂಡರು. ಹಾಗೇ, ‘ಬಾಂಗ್ಲಾದೇಶದ ಪಾಲಿಗೆ ಭಾರತ ಬಹುಕಾಲದ, ನಂಬಿಕಾರ್ಹ ಗೆಳೆಯ’ ಎಂದು ಹೇಳಿದರು. ಹಾಗೇ, 1975ರಲ್ಲಿ ಬಾಂಗ್ಲಾದೇಶದಲ್ಲಿ ಸೇನಾ ಕ್ರಾಂತಿ ನಡೆದು, ತನ್ನ ತಂದೆ ಶೇಖ್ ಮುಜಿಬುರ್ ರೆಹಮಾನ್ ಹತ್ಯೆಯಾದ ಸಂದರ್ಭದ ಬಗ್ಗೆಯೂ ಶೇಖ್ ಹಸೀನಾ ಕಣ್ತುಂಬಿಕೊಂಡು ಮದುವೆಯಾದರು.
‘ನನ್ನ ಪತಿ ಜರ್ಮನಿಯಲ್ಲಿ ಪರಮಾಣು ವಿಜ್ಞಾನಿಯಾಗಿದ್ದರು. ಅವರು ವಿದೇಶದಲ್ಲಿ ಇದ್ದ ಕಾರಣ ನಾನು ನನ್ನ ತವರು ಮನೆಯಲ್ಲೇ ಇದ್ದೆ. ಆಗಿನ್ನೂ ನನ್ನ ತಂದೆ ಬದುಕಿದ್ದರು. ಒಂದು ದಿನ ನನ್ನ ಪತಿಯಿದ್ದಲ್ಲಿಗೆ ಹೊರಟೆ. ಅಪ್ಪ-ಅಮ್ಮ ಎಲ್ಲರೂ ಏರ್ಪೋರ್ಟ್ವರೆಗೆ ಬಂದು ಪ್ರೀತಿಯ ವಿದಾಯ ಕೊಟ್ಟರು. ಅದೇ ಕೊನೆಯಾಯಿತು. ಬಳಿಕ ನನ್ನ ತಂದೆ ಹತ್ಯೆಯಾದರು. ಕುಟುಂಬದ 18 ಜನರ ಕೊಲೆಯಾಯಿತು. ಅಪ್ಪನ ಹಂತಕರಿಂದ ನಾನು ಪಾರಾಗಲು 1975ರ ಸಮಯದಲ್ಲಿ ದೆಹಲಿಯ ಪಂಡರಾ ರಸ್ತೆಯಲ್ಲಿ ಮಕ್ಕಳೊಂದಿಗೆ ಗುಟ್ಟಾಗಿ ವಾಸಿಸುತ್ತಿದ್ದೆ. ಆಗಲೂ ಭಾರತ ಸರ್ಕಾರ ನನಗೆ ಸಹಾಯ ಮಾಡಿತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Asia Cup | ಇಂದು ಶ್ರೀಲಂಕಾ- ಬಾಂಗ್ಲಾದೇಶ ತಂಡದ ನಡುವೆ ಪಂದ್ಯ, ಗೆದ್ದ ತಂಡ ಸೂಪರ್-4ಗೆ ಪ್ರವೇಶ