Site icon Vistara News

Bangladesh Protest: ಮುಸ್ಲಿಂ ದೇಶಗಳಲ್ಲಿ ಯಾರೂ ಸುರಕ್ಷಿತರಲ್ಲ; ಮತ್ತೊಂದು ಕಿಡಿ ಹೊತ್ತಿಸಿದ ಕಂಗನಾ ರಣಾವತ್

Bangladesh Protest

ಢಾಕಾ: ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪ ತಾಳಿದ್ದು, ಪ್ರಧಾನಿ ಶೇಖ್‌ ಹಸೀನಾ (Sheik Hasina) ಅವರು ರಾಜೀನಾಮೆ ನೀಡಿ ಪ್ರಾಣಭಯದಿಂದ ಭಾರತಕ್ಕೆ ಆಗಮಿಸಿ ಆಶ್ರಯ ಪಡೆದಿದ್ದಾರೆ (Bangladesh Protest). ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್​ (Kangana Ranaut), ಯಾವ ಮುಸ್ಲಿಂ ರಾಷ್ಟ್ರವೂ ಸುರಕ್ಷಿತವಲ್ಲ ಎಂದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಂಗನಾ ಮತ್ತೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ. “ಭಾರತವು ಸುತ್ತಲಿನ ಎಲ್ಲ ಇಸ್ಲಾಮಿಕ್ ಪ್ರಜಾಪ್ರಭುತ್ವ ದೇಶಗಳ ಮೂಲ ತಾಯ್ನಾಡು. ಬಾಂಗ್ಲಾದೇಶದ ಪ್ರಧಾನಿ ಭಾರತದಲ್ಲಿ ಸುರಕ್ಷಿತ ಎಂದು ಭಾವಿಸಿ ಇಲ್ಲಿಗೆ ಆಗಮಿಸಿದ್ದಾರೆ. ಆದರೆ ಭಾರತದಲ್ಲೇ ವಾಸಿಸುವವರು ಹಿಂದೂ ರಾಷ್ಟ್ರ ಯಾಕೆ? ಏಕೆ ರಾಮರಾಜ್ಯ? ಎಂದು ಕೇಳುತ್ತಲೇ ಇರುತ್ತಾರೆ. ಈ ಪ್ರಶ್ನೆಗೆ ಈಗ ಸೂಕ್ತ ಉತ್ತರ ಸಿಕ್ಕಿದೆʼʼ ಎಂದು ಅವರು ಹೇಳಿದ್ದಾರೆ.

ಮುಂದುವರಿದು, “ಮುಸ್ಲಿಂ ದೇಶಗಳಲ್ಲಿ ಯಾರೂ ಸುರಕ್ಷಿತರಲ್ಲ, ಸ್ವತಃ ಮುಸ್ಲಿಮರು ಕೂಡ. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಬ್ರಿಟನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ದುರದೃಷ್ಟಕರ. ರಾಮರಾಜ್ಯದಲ್ಲಿ ಬದುಕುತ್ತಿರುವುದು ನಮ್ಮ ಅದೃಷ್ಟ. ಜೈ ಶ್ರೀ ರಾಮ್ʼʼ ಎಂದು ಕಂಗನಾ ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಈ ಹೇಳಿಕೆಗೆ ವಿರುದ್ಧ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಶೇಖ್ ಹಸೀನಾ ಭಾರತಕ್ಕೆ ಪರಾರಿಯಾಗಿದ್ದೇಕೆ? 

ಬಾಂಗ್ಲಾದೇಶದಲ್ಲಿ ಮೀಸಲಾತಿ ಕಾರಣಕ್ಕಾಗಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ. 1971ರಲ್ಲಿ ನಡೆದ ಬಾಂಗ್ಲಾದೇಶ ಹೋರಾಟದಲ್ಲಿ ಭಾಗಿಯಾದವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಮೀಸಲಾತಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಕೆಲ ದಿನಗಳ ಹಿಂದೆಯೂ ನಡೆದ ಹಿಂಸಾತ್ಮಕ ಹೋರಾಟದಲ್ಲಿ ನೂರಾರು ಜನ ಮೃತಪಟ್ಟಿದ್ದರು.

ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೇಳುತ್ತಲೇ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್‌, ಶೇ. 30ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿತ್ತು. ಆದರೆ ಸಂಪೂರ್ಣವಾಗಿ ಮೀಸಲಾತಿಯನ್ನು ರದ್ದುಗೊಳಿಸುವ ಬದಲು ಶೇ.5ರಷ್ಟು ಮೀಸಲಾತಿ ಮುಂದುವರಿಸಿದೆ. ಸಂಪೂರ್ಣವಾಗಿ ಮೀಸಲಾತಿ ರದ್ದುಗೊಳಿಸಬೇಕು ಎಂದು ಜನರ ಆಗ್ರಹವಾಗಿದ್ದು, ಇದಕ್ಕಾಗಿ ಪ್ರತಿಭಟನೆ ಆರಂಭವಾಗಿದೆ. ಪ್ರತಿಭಟನೆಗೆ ಪ್ರತಿಪಕ್ಷಗಳೂ ಬೆಂಬಲ ನೀಡಿದ್ದು, ಶೇಖ್‌ ಹಸೀನಾ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಅದರಂತೆ ಶೇಖ್‌ ಹಸೀನಾ ಅವರು ರಾಜೀನಾಮೆ ನೀಡಿದ್ದಾರೆ.

ಭಾರತಕ್ಕೆ ಬಂದಿದ್ದೇಕೆ?

ಭಾರತವು ಬಾಂಗ್ಲಾದೇಶಕ್ಕೆ ಮಿತ್ರರಾಷ್ಟ್ರವಾಗಿದ್ದು, ನರೇಂದ್ರ ಮೋದಿ ಅವರಿಗೆ ಶೇಖ್‌ ಹಸೀನಾ ಆಪ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪ್ರಾಣಭಯದಿಂದ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಅವರು ಇಂಗ್ಲೆಂಡ್‌ಗೆ ತೆರಳಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಶೇಖ್‌ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಪಲಾಯನಗೈದ ಬೆನ್ನಲ್ಲೇ ಇತ್ತ ಬಾಂಗ್ಲಾದೇಶದಲ್ಲಿ ಮಧ್ಯಂತರ ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ದೇಶದ ಆಡಳಿತ ಈಗ ಸೇನೆಯ ವ್ಯಾಪ್ತಿಗೆ ಬಂದಿದೆ. 

ಇದನ್ನೂ ಓದಿ: Bangla Protest Explainer: ಬಾಂಗ್ಲಾದಲ್ಲಿ ಹಿಂಸೆ ಭುಗಿಲೆದ್ದಿದ್ದೇಕೆ? ಶೇಖ್ ಹಸೀನಾ ಭಾರತಕ್ಕೆ ಪರಾರಿಯಾಗಿದ್ದೇಕೆ? ಮುಂದೇನು?

Exit mobile version