ನವದೆಹಲಿ: ಬಾಂಗ್ಲಾದೇಶ(Bangladesh Unrest)ದಲ್ಲಿ ನಡೆಯುತ್ತಿರುವ ಅಶಾಂತಿ ಮತ್ತು ಭಾರತದ ಮೇಲೆ ಅದರ ಪರಿಣಾಮಗಳ ಕುರಿತು ವಿದೇಶಾಂಗ ಸಚಿವ(External affair minister) ಎಸ್ ಜೈಶಂಕರ್(Jai Shankar) ಮಂಗಳವಾರ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜೈಶಂಕರ್ ಅವರು ತಮ್ಮ ಭಾಷಣದಲ್ಲಿ ಪ್ರಸ್ತುತ ಬಾಂಗ್ಲಾದೇಶದಲ್ಲಿ ಸುಮಾರು 19,000 ಭಾರತೀಯ ಪ್ರಜೆಗಳಿದ್ದಾರೆ, ಅವರಲ್ಲಿ 9,000 ವಿದ್ಯಾರ್ಥಿಗಳು ಇದ್ದಾರೆ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿರುವ ಭಾರತೀಯರ ಜೊತೆ ಕೇಂದ್ರ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಬಾಂಗ್ಲಾದೇಶದಲ್ಲಿ ಅಶಾಂತಿ ಹಿಂಸಾತ್ಮಕ ತಿರುವು ಪಡೆದಾಗ ನೆರೆಯ ದೇಶದಲ್ಲಿ ನೆಲೆಸಿರುವ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಜುಲೈನಲ್ಲಿ ಮನೆಗೆ ಮರಳಿದ್ದಾರೆ. ನಮ್ಮ ರಾಜತಾಂತ್ರಿಕ ಕಾರ್ಯಗಳ ಮೂಲಕ ಬಾಂಗ್ಲಾದೇಶದಲ್ಲಿರುವ ಭಾರತೀಯ ಸಮುದಾಯದೊಂದಿಗೆ ನಾವು ನಿಕಟ ಮತ್ತು ನಿರಂತರ ಸಂಪರ್ಕದಲ್ಲಿದ್ದೇವೆ. ಅಂದಾಜು 19,000 ಭಾರತೀಯ ಪ್ರಜೆಗಳಿದ್ದಾರೆ ಅದರಲ್ಲಿ ಸುಮಾರು 9000 ವಿದ್ಯಾರ್ಥಿಗಳು ಇದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಜುಲೈನಲ್ಲಿ ಮರಳಿದ್ದಾರೆ ಎಂದು ಅವರು ಇಂದು ಸಂಸತ್ತಿನಲ್ಲಿ ಹೇಳಿದರು. .
ಬಾಂಗ್ಲಾದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ನಾವು ಅಲ್ಪಸಂಖ್ಯಾತರ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅವರ ರಕ್ಷಣೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪ ತಾಳಿದ್ದು, ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ಪ್ರಾಣಭಯದಿಂದ ಭಾರತಕ್ಕೆ ಆಗಮಿಸಿ ಆಶ್ರಯ ಪಡೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್, ಯಾವ ಮುಸ್ಲಿಂ ರಾಷ್ಟ್ರವೂ ಸುರಕ್ಷಿತವಲ್ಲ ಎಂದಿದ್ದಾರೆ.
ನೆರೆಯ ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಚರ್ಚಿಸಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು ಸರ್ವಪಕ್ಷ ಕರೆದು ಮಾತನಾಡಿದರು ಜೈಶಂಕರ್ ಅವರು ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದರು. ಸಭೆಯಲ್ಲಿ ಗೃಹ ಮಂತ್ರಿ ಅಮಿತ್ ಶಾ ಅವರೂ ಭಾಗಿಯಾಗಿದ್ದರು. ಶೇಖ್ ಹಸೀನಾ ನೇತೃತ್ವದ ಸರ್ಕಾರದ ವಿರುದ್ಧದ ಪ್ರತಿಭಟನೆ ಹಿಂಸಾಚಾರದ ರೂಪ ತಾಳಿದ ಬಳಿಕ, ಅವರು ನಿನ್ನೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದರು. ಅವರು ಭಾರತದಲ್ಲಿ ಬಂದು ಇಳಿದಿದ್ದಾರೆ.
ಹಸೀನಾ ರಾಜೀನಾಮೆ ನೀಡಿದ ಸ್ವಲ್ಪ ಸಮಯದ ನಂತರ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವೇಕರ್-ಉಜ್-ಜಮಾನ್ ಅವರು “ಮಧ್ಯಂತರ ಸರ್ಕಾರವನ್ನು” ರಚಿಸಲಿದ್ದೇವೆ ಎಂದು ಹೇಳಿದ್ದಾರೆ. ಪ್ರತಿಭಟನೆಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಶೇಖ್ ಹಸೀನಾ ಅವರು ದೆಹಲಿಯಿಂದ 30 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿರುವ ಹಿಂಡನ್ ವಾಯುಪಡೆಯ ನೆಲೆಗೆ ಹಸೀನಾ ನಿನ್ನೆ ಸಂಜೆ ಬಂದಿಳಿದಿದ್ದರು. ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸ್ವಾಗತಿಸಿದ್ದರು.
ನೆರೆಯ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಸ್ ಜೈಶಂಕರ್ ಅವರೊಂದಿಗೆ ಮಾತನಾಡಿದ್ದಾರೆ. ಘಟನೆಯಲ್ಲಿ ಈವರೆಗೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೋದಿ ಅವರು ಹಸೀನಾ ಅವರನ್ನು ಭೇಟಿಯಾಗುತ್ತಾರೆಯೇ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.