ನವದೆಹಲಿ: ದೇಶದ ಕರ್ನಾಟಕ ಸೇರಿ ಹಲವು ರಾಜ್ಯಗಳ ಬ್ಯಾಂಕ್‌ಗಳಲ್ಲಿ ಹಿಂದಿ ಭಾಷಿಕರ ಹಾವಳಿ ಜಾಸ್ತಿಯಾಗಿದೆ, ಇದರಿಂದ ಸ್ಥಳೀಯರು ಬ್ಯಾಂಕ್‌ಗಳಲ್ಲಿ ವ್ಯವಹರಿಸುವುದು ಕಷ್ಟವಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ “ಬ್ಯಾಂಕುಗಳು ಸ್ಥಳೀಯ ಭಾಷೆ ಮಾತನಾಡುವವರನ್ನೇ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬೇಕು” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ.
ಮುಂಬೈನಲ್ಲಿ ನಡೆದ ಭಾರತೀಯ ಬ್ಯಾಂಕ್‌ಗಳ ಅಸೋಸಿಯೇಷನ್‌ನ ೭೫ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, “ನೀವು (ಬ್ಯಾಂಕ್‌ಗಳು) ಯಾವುದೇ ರಾಜ್ಯದಲ್ಲಿ ಬ್ಯುಸಿನೆಸ್ ಮಾಡಲು ಹೋಗಿರುತ್ತೀರಿ. ನೀವು ಯಾವುದೇ ಕಾರಣಕ್ಕೂ ಅಲ್ಲಿಗೆ ನಾಗರಿಕರಲ್ಲಿ ಮೌಲ್ಯಗಳನ್ನು, ಸಂಸ್ಕೃತಿಯನ್ನು ಬಿತ್ತಲು ಹೋಗಿರುವುದಿಲ್ಲ. ಹಾಗಾಗಿ, ನೇಮಕಾತಿ ವೇಳೆ ಸ್ಥಳೀಯ ಭಾಷೆ ಮಾತನಾಡುವವರನ್ನೇ ನೇಮಿಸಿಕೊಳ್ಳಿ” ಎಂದು ಹೇಳಿದ್ದಾರೆ.
“ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆ ಹೊಂದಿದೆ. ನಿಮ್ಮ ಬ್ಯಾಂಕ್ ಬ್ರ್ಯಾಂಚ್‌ಗಳಲ್ಲಿ ಹಿಂದಿ ಮಾತನಾಡುವವರೇ ಇದ್ದರೆ, ಸ್ಥಳೀಯರು ಸಿಬ್ಬಂದಿಗೆ ಭಾರತೀಯರೇ ಅಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಸ್ಥಳೀಯರಿಗೂ ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸಲು ತೊಂದರೆಯಾಗುತ್ತದೆ. ಇದರಿಂದ ಜನರಿಗೂ ಅನನುಕೂಲ ಹಾಗೂ ಬ್ಯಾಂಕ್‌ಗಳ ಉದ್ಯಮಕ್ಕೂ ತೊಂದರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Crypto Regulation | ಕ್ರಿಪ್ಟೊ ನಿಯಂತ್ರಣಕ್ಕೆ ಐಎಂಎಫ್‌ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಾಯ