ನವ ದೆಹಲಿ: ಹಿಂಡೆನ್ಬರ್ಗ್ ವರದಿ ಬಳಿಕ ಅದಾನಿ ಗ್ರೂಪ್ನ ಉದ್ಯಮಗಳ ಷೇರುಗಳಲ್ಲಿ ತೀವ್ರ ಕುಸಿತ ಉಂಟಾಗಿರುವ ಹೊರತಾಗಿಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಲ್‌ಐಸಿಗೆ ನಷ್ಟವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಶುಕ್ರವಾರ (ಫೆಬ್ರವರಿ 3ರಂದು) ಭರವಸೆ ನೀಡಿದೆ. ಭಾರತದ ಬ್ಯಾಂಕ್ಗಳು ಚೇತರಿಕೆಯ ಹಾದಿಯಲ್ಲಿವೆ ಹಾಗೂ ಸುಸ್ಥಿರವಾಗಿ ಎಂದು ಆರ್ಬಿಐ ಉಲ್ಲೇಖಿಸಿದೆ.
ಬ್ಯಾಂಕ್ಗಳು ನೀಡುವ ದೊಡ್ಡ ಸಾಲದ ಬಗ್ಗೆ ನಿಗಾ ವಹಿಸಲು ಆರ್ಬಿಐ ಡೇಟಾಬೇಸ್ ಅನ್ನು ಹೊಂದಿದೆ. (Central Repository of Information on Large Credits -CRILC) ಮೂಲಕ 5 ಕೋಟಿ ರೂಪಾಯಿಗಿಂತ ಹೆಚ್ಚುವರಿ ಸಾಲದ ಮೇಲೆ ಆರ್ಬಿಐ ಗಮನ ವಹಿಸುತ್ತದೆ. ಈ ವ್ಯವಸ್ಥೆಯ ವರದಿ ಪ್ರಕಾರ, ಭಾರತದ ಬ್ಯಾಕಿಂಗ್ ಕ್ಷೇತ್ರ ಪ್ರಗತಿಯ ಹಾದಿಯಲ್ಲಿದೆ ಹಾಗೂ ಸುಸ್ಥಿರವಾಗಿದೆ. ಬಂಡವಾಳದ ಸಮರ್ಪಕತೆ, ಆಸ್ತಿ ಗುಣಮಟ್ಟ, ದ್ರವ್ಯತೆ, ನಿಬಂಧನೆ ವ್ಯಾಪ್ತಿ ಮತ್ತು ಲಾಭದಾಯಕತೆಗೆ ಸಂಬಂಧಿಸಿದ ವಿವಿಧ ನಿಯತಾಂಕಗಳು ಸ್ಥಿರವಾಗಿವೆ. ಆರ್ಬಿಐ ನಿಗದಿ ಮಾಡಿರುವ ಮಿತಿ ಮೀರಿದ ಸಾಲದ ಕುರಿತ ನಿಬಂಧನೆಗಳನ್ನು ಎಲ್ಲ ಬ್ಯಾಂಕ್ಗಳು ಪಾಲಿಸುತ್ತಿವೆ.
ಹಿಂಡೆನ್ ಬರ್ಗ್ ವರದಿ ಬಂದ ಬಳಿಕ ಗೌತಮ ಅದಾನಿ ಗ್ರೂಪ್ನ ನಾನಾ ಉದ್ಯಮಗಳ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿದಿತ್ತು. ಅದಾನಿ ಗ್ರೂಪ್ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಎಲ್ಐಸಿ ಮಿತಿ ಮೀರಿ ಹೂಡಿಕೆ ಮಾಡಿರುವ ಕಾರಣ ಅವುಗಳೂ ನಷ್ಟ ಅನುಭವಿಸುತ್ತವೆ ಎಂಬ ಸುದ್ದಿ ಇದೇ ವೇಳೆ ಪಸರಿಸಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಹಣಕಾಸು ಸಂಸ್ಥೆಗಳು ಈ ಕುರಿತು ತಮ್ಮ ವರದಿ ಬಿಡುಗಡೆ ಮಾಡಿ ಅದಾನಿ ಕಂಪನಿಗೆ ಮಿತಿ ಮೀರಿ ಸಾಲ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ : Adani Group shares : ಅದಾನಿ ಷೇರುಗಳಲ್ಲಿ ಹೂಡಿಕೆಯಿಂದ ಎಸ್‌ಬಿಐ, ಎಲ್‌ಐಸಿಗೆ ಈಗಲೂ ಲಾಭ : ನಿರ್ಮಲಾ ಸೀತಾರಾಮನ್
ಎಸ್‌ಬಿಐ ದಿನೇಶ್ ಖಾರಾ ಅವರು ಈ ಕುರಿತು ಪ್ರಕಟಣೆ ಹೊರಡಿಸಿ, ಭಾರತೀಯ ಸ್ಟೇಟ್ ಬ್ಯಾಂಕ್ ಅದಾನಿ ಗುಂಪಿಗೆ 27 ಸಾವಿರ ಕೋಟಿ ರೂಪಾಯಿ ಸಾಲ ನೀಡಿದೆ. ಆದರೆ, ಅದಕ್ಕಾಗಿ ಅದಾನಿ ಗುಂಪಿನ ಲಾಭದಾಯಕ ಕಂಪನಿಗಳು ಹಾಗೂ ಸಂಪತ್ತಿನ ಖಾತರಿ ಪಡೆಯಲಾಗಿದೆ. ಹೀಗಾಗಿ ಎಸ್ಬಿಐಗೆ ಯಾವುದೇ ನಷ್ಟವಿಲ್ಲ ಎಂದು ಹೇಳಿದ್ದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಎಲ್ಐಸಿಯಿಂದ ಅದಾನಿ ಗುಂಪಿಗೆ ಮಿತಿ ಮೀರಿ ಸಾಲ ಕೊಟ್ಟಿಲ್ಲ. ಎಲ್‌ಐಸಿಗೆ ನಷ್ಟವಿಲ್ಲ ಹಾಗೂ ಲಾಭದ ಹಾದಿಯಲ್ಲೇ ಇದೆ ಎಂಬುದಾಗಿ ಹೇಳಿದ್ದರು.