ಲಕ್ನೋ, ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ (Samajwadi Party) ಕಚೇರಿಯ ಮುಂದೆ ‘ಅಖಿಲೇಶ್ ಯಾದವ್ (Akhilesh Yadav) ಭವಿಷ್ಯದ ಪ್ರಧಾನಿ’ ಎಂಬ ಬ್ಯಾನರ್ ಪ್ರಕಟವಾದ ಬೆನ್ನಲ್ಲೇ, ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ (Uttar Pradesh Congress Party) ಕಚೇರಿಯ ಮುಂದೆಯೂ, ರಾಹುಲ್ ಗಾಂಧಿ (Rahul Gandhi) 2024ರ ಪ್ರಧಾನಿ ಎಂಬ ಬ್ಯಾನರ್ ಅಳವಡಿಸಲಾಗಿದೆ. ಅಲ್ಲದೇ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ 2027ರಲ್ಲಿ ಮುಖ್ಯಮಂತ್ರಿಯಾಗುತ್ತಾರೆಂದು ಬರೆಯಲಾಗಿದೆ. ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆ ಸೀಟು ಹಂಚಿಕೆ ವೇಳೆ ಇಂಡಿಯಾ ಕೂಟದ (India Bloc) ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.
ಪೋಸ್ಟರ್‌ಗಳಿಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ರಾಜ್ಯ ವಕ್ತಾರ ಫಖ್ರುಲ್ ಹಸನ್ ಅವರು, ನಮ್ಮ ಪಕ್ಷವೇ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ, ಕಾಂಗ್ರೆಸ್ ಎಷ್ಟೇ ಪೋಸ್ಟರ್‌ಗಳನ್ನು ಹಾಕಿದ್ರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಜನರು ಅಖಿಲೇಶ್ ಯಾದವ್ ಅವರು ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್-ಎಸ್‌ಪಿ ಪೋಸ್ಟರ್ ವಾರ್ ಮಧ್ಯೆ ಬಿಜೆಪಿ ಕೂಡ ತೂರಿ ಬಂದಿದ್ದು, “ಮುಂಗೇರಿ ಲಾಲ್ ಕೆ ಹಸೀನ್ ಸಪ್ನೆ (ತಿರುಕನ ಕನಸು)” ಎಂದು ಬಣ್ಣಿಸಿದೆ. ಇದು ಇಂಡಿಯಾ ಕೂಟದ ಇತರ ಸದಸ್ಯರ ಮೇಲೆ ಒತ್ತಡ ಹೇರುವ ತಂತ್ರವಾಗಿದೆ.
ಪಕ್ಷದ ಕಾರ್ಯಕರ್ತ ನಿತಂತ್ ಸಿಂಗ್ ನಿತಿನ್ ಅವರು ಹಾಕಿರುವ ಕಾಂಗ್ರೆಸ್ ಹೋರ್ಡಿಂಗ್‌ನಲ್ಲಿ ರಾಹುಲ್ ಗಾಂಧಿ ಮತ್ತು ಅಜಯ್ ರೈ ಅವರ ಚಿತ್ರಗಳಿದ್ದು, “2024 ಮೇ ರಾಹುಲ್, 2027 ಮೇ ರಾಯ್, ದೇಶ್-ಪ್ರದೇಶ ಬೋಲ್ ರಹಾ ಹೈ, ಹಾಥ್ ಕೆ ಸಾಥ್ ಆಯೇನ್” ಎಂದು ಬರೆಯಲಾಗಿದೆ.
ಈ ಸುದ್ದಿಯನ್ನೂ ಓದಿ: INDIA Block: ಹಿಂಗಾದ್ರೆ… ಇಂಡಿಯಾ ಕೂಟದ ಕತೆ ಅಷ್ಟೇ! ಕಾಂಗ್ರೆಸ್ ವಿರುದ್ದ ಮತ್ತೆ ಕಿಡಿ ಕಾರಿದ ಅಖಿಲೇಶ್
ಹೋರ್ಡಿಂಗ್ ಕುರಿತು ಪ್ರತಿಕ್ರಿಯಿಸಿರುವ ನಿತಿನ್ ಅವರು, ಇದು ಪಕ್ಷದ ಕಾರ್ಯಕರ್ತರ ಅನಿಸಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಸಾಮಾನ್ಯ ಜನರು ಕಾಂಗ್ರೆಸ್ ಜತೆಗೆ ಬರಲು ಸಿದ್ಧರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಇರಲಿದೆ. ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲಿದ್ದಾರೆ ಮತ್ತು ಅಜಯ್ ರಾಯ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ. ಪಕ್ಷದೆಡೆಗೆ ಜನರ ವಿಶ್ವಾಸ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ನಡೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ವಕ್ತಾರ ಹಸನ್ ಅವರು, ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಒಂದೇ ರೀತಿಯ ಪಕ್ಷಗಳಾಗಿವೆ. ಬಹಳ ದಿನಗಳಿಂದಲೂ ನಾವು ಇದನ್ನು ಹೇಳುತ್ತಾ ಬಂದಿದ್ದೇವೆ. ಯಾವುದೇ ಪಕ್ಷದ ತಮ್ಮ ಭಾವನೆಗಳಿಗೆ ತಕ್ಕಂತೆ ಪೋಸ್ಟರ್‌ಗಳನ್ನು ಹಾಕಬಹುದು ಎಂದು ಹೇಳಿದ್ದಾರೆ.