ನವ ದೆಹಲಿ: ರಾಜಕಾರಣದಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ (Bansuri Swaraj) ಈಗ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ದೆಹಲಿಯ ಬಿಜೆಪಿ ಕಾನೂನು ಘಟಕದ ಸಹ-ಸಂಚಾಲಕಿ (co-convener)ಯನ್ನಾಗಿ ಅವರನ್ನು ನೇಮಕ ಮಾಡಲಾಗಿದೆ. ಬಾನ್ಸುರಿ ಸ್ವರಾಜ್ ವಕೀಲೆಯಾಗಿದ್ದು, ಅವರು ಸುಪ್ರೀಂಕೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಅವರನ್ನು ಬಿಜೆಪಿಯ ದೆಹಲಿ ಅಧ್ಯಕ್ಷ ವೀರೇಂದ್ರ ಸಚ್ದೇವಾ ಅವರು ಕಾನೂನು ಘಟಕದ ಸಹ ಸಂಚಾಲಕಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ವೀರೇಂದ್ರ ಸಚ್ದೇವಾ ಕೂಡ ಇತ್ತೀಚೆಗಷ್ಟೇ ದೆಹಲಿಯ ಪೂರ್ಣಕಾಲಿಕ ಅಧ್ಯಕ್ಷರಾಗಿ ಹೊಸದಾಗಿ ನೇಮಕಗೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಅವರು ಮಾಡಿದ ಮೊದಲ ನೇಮಕಾತಿ ಇದು.
ತಮ್ಮ ನೇಮಕಾತಿ ಪತ್ರವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡ ಬಾನ್ಸುರಿ ಸ್ವರಾಜ್ ಅವರು ‘ಭಾರತೀಯ ಜನತಾ ಪಾರ್ಟಿ ದೆಹಲಿಯ ರಾಜ್ಯ ಕಾನೂನು ಘಟಕದ ಸಹ-ಸಂಚಾಲಕಿಯಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಬಿಎಲ್ ಸಂತೋಷ್, ವಿರೇಂದ್ರ ಸಚ್ದೇವಾ ಅವರಿಗೆ ಧನ್ಯವಾದಗಳು ಮತ್ತು ಇಡೀ ಪಕ್ಷಕ್ಕೆ ನನ್ನ ಕೃತಜ್ಞತೆಗಳು ಎಂದು ಹೇಳಿದ್ದಾರೆ. ಹಾಗೇ, ಪಿಟಿಐ ಮಾಧ್ಯಮದೊಂದಿಗೆ ಮಾತನಾಡಿ ‘ದೆಹಲಿ ಕಾನೂನು ಘಟಕದ ಸಹ ಸಂಚಾಲಕಿಯನ್ನಾಗಿ ನನ್ನನ್ನು ನೇಮಕ ಮಾಡುವ ಮೂಲಕ, ಬಿಜೆಪಿ ಪಕ್ಷಕ್ಕೆ ಸಕ್ರಿಯವಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಲಾಗಿದೆ’ ಎಂದು ಹೇಳಿದರು.
ಬಾನ್ಸುರಿ ಸ್ವರಾಜ್ ಅವರು ಇಂಗ್ಲೆಂಡ್ನ ವಾರ್ವಿಕ್ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಲಂಡನ್ನ ಬಿಬಿಪಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. 2007ರಲ್ಲಿ ಬಾನ್ಸುರಿಯವರು ದೆಹಲಿ ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಿಕೊಂಡಿದ್ದು, ಕಾನೂನು ವೃತ್ತಿಯಲ್ಲಿ ಅವರಿಗೆ 16ವರ್ಷಗಳ ಅನುಭವ ಇದೆ. ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಕೆಲವು ಹೈಪ್ರೊಫೈಲ್ ಕೇಸ್ಗೂ ಇವರು ನ್ಯಾಯವಾದಿಯಾಗಿದ್ದರು. ಈ ಹಿಂದೆಯೂ ಕಾನೂನು ವಿಚಾರದಲ್ಲಿ ಬಿಜೆಪಿ ಪಕ್ಷಕ್ಕೆ ಕೆಲವು ಸಲಹೆ ನೀಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಇದೀಗ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದಂತಾಗಿದೆ.