ನವದೆಹಲಿ: 2008ರ ಬಾಟ್ಲಾ ಹೌಸ್ ಎನ್‌ಕೌಂಟರ್(Batla House Encounter) ಪ್ರಕರಣದ ಅಪರಾಧಿ, ಇಂಡಿಯನ್ ಮುಜಾಹಿದೀನ್ (Indian Mujahideen) ಉಗ್ರ ಆರಿಜ್ ಖಾನ್‌ನ (Terrorist Ariz Khan) ಮರಣ ದಂಡನೆ ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್ (Delhi High Court) ಜೀವಾವಧಿ ಶಿಕ್ಷೆಗೆ ಇಳಿಕೆ ಮಾಡಿದೆ. 15 ವರ್ಷಗಳ ಹಿಂದೆ ದಿಲ್ಲಿ ಬಾಟ್ಲಾ ಹೌಸ್‌ನ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಾಂದ್ ಶರ್ಮಾ ಅವರು ಹತರಾಗಿದ್ದರು.
ಆರಿಜ್ ಖಾನ್ ಅಲಿಯಾಸ್ ಜುನೈದ್‌ನನ್ನು ದಿಲ್ಲಿ ಪೊಲೀಸ್‌ನ ಸ್ಪೆಷಲ್ ಸೆಲ್ ಅಧಿಕಾರಿಗಳು 2018ರಂದು ಬಂಧಿಸಿದ್ದರು. ಆಲ್ಮೋಸ್ಟ್ ಹತ್ತು ವರ್ಷಗಳ ಕಾಲ ಈತ ಪೊಲೀಸರಿಂದ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ. ಅಂತಿಮವಾಗಿ ಈತನನ್ನ ಬಂಧಿಸಿದ್ದ ಪೊಲೀಸರು, ಕೋರ್ಟ್ ಕಟಕಟೆಗೆ ತರಲು ಯಶಸ್ವಿಯಾಗಿದ್ದರು.
ಜಸ್ಟೀಸ್ ಸಿದ್ಧಾರ್ಥ್ ಮೃದುಲ್ ಮತ್ತು ಅಮಿತ್ ಶರ್ಮಾ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಶರ್ಮಾ ಹತ್ಯೆಗೆ ಸಂಬಂಧಿಸಿದಂತೆ ಆರಿಜ್ ಖಾನ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಈ ಕುರಿತು ಆರಿಜ್ ಖಾನ್ ದಿಲ್ಲಿ ಹೈಕೋರ್ಟ್ ಮನವಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಅಂತಿಮವಾಗಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಕೆ ಮಾಡಿ ಆದೇಶ ನೀಡಿದೆ.
ಈ ಸುದ್ದಿಯನ್ನೂ ಓದಿ: Shivamogga terror | ಉಗ್ರ ಯಾಸಿನ್ ಭಟ್ಕಳ್ ಅಡಗುತಾಣವಾಗಿತ್ತು ಮಲೆನಾಡು, ಬಾಂಬ್ ತಯಾರಿ ಅಡ್ಡೆ?
ಗಲ್ಲು ಶಿಕ್ಷೆ ವಿಧಿಸಿದ್ದ ಸಾಕೇತ್ ಕೋರ್ಟ್
2021ರ ಮೇ ತಿಂಗಳಲ್ಲಿ ದೆಹಲಿಯ ಸಾಕೇತ್ ನ್ಯಾಯಾಲಯವು ಆಗ್ನೇಯ ದೆಹಲಿಯ ಬಾಟ್ಲಾ ಹೌಸ್‌ನಲ್ಲಿ ಪೊಲೀಸರು ಮತ್ತು ಭಯೋತ್ಪಾದಕರ ನಡುವಿನ ಎನ್‌ಕೌಂಟರ್‌ನಲ್ಲಿ ಶರ್ಮಾ ಹತ್ಯೆಗೆ ಖಾನ್‌ನನ್ನು ದೋಷಿ ಎಂದು ಘೋಷಿಸಿತು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಯಾದವ್ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 186, 333, 353, 302, 397 ಮತ್ತು ಆರ್ಮ್ಸ್ ಆಕ್ಟ್ ಸೆಕ್ಷನ್ 27 ರ ಅಡಿಯಲ್ಲಿ ಖಾನ್ ಅವರನ್ನು ಅಪರಾಧಿ ಎಂದು ತೀರ್ಪು ನೀಡಿದ್ದರು. ಅಂತಿಮವಾಗಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.