ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿಯಾಗಿ ಚಿತ್ರಿಸಿರುವ ಬಿಬಿಸಿ ಡಾಕ್ಯುಮೆಂಟರಿಯು (BBC Documentary) ಏಕಪಕ್ಷೀಯವಾಗಿದೆ ಎಂದು ಹಲವು ರಾಷ್ಟ್ರಗಳು ದೂರಿರುವ ಬೆನ್ನಲ್ಲೇ, ರಾಜ್ಯಸಭೆ ಬಿಜೆಪಿ ಸದಸ್ಯ ಮಹೇಶ್ ಜೇಠ್ಮಲಾನಿ ಅವರು ಡಾಕ್ಯುಮೆಂಟರಿಗೆ ಚೀನಾ ನಂಟಿದೆ ಎಂದು ಆರೋಪಿಸಿದ್ದಾರೆ. ಆ ಮೂಲಕ ಸಾಕ್ಷ್ಯಚಿತ್ರದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಂತಾಗಿದೆ.
“ಬಿಬಿಸಿಯು ಭಾರತ ವಿರೋಧಿ ಏಕಿದೆ? ಏಕೆಂದರೆ, ಬಿಬಿಸಿಗೆ ಹಣದ ಅನಿವಾರ್ಯತೆ ಇದೆ. ಹಾಗಾಗಿ, ಅದು ಚೀನಾದ ಅಜೆಂಡಾ ರೀತಿ ಕಾರ್ಯನಿರ್ವಹಿಸುತ್ತಿದೆ. ನಿರ್ಬಂಧದ ಹೊರತಾಗಿಯೂ ಚೀನಾದ ತಂತ್ರಜ್ಞಾನ ದೈತ್ಯ ಹುವೇಯಿ ಕಂಪನಿಯಿಂದ ಬಿಬಿಸಿ ಹಣ ಪಡೆದಿದೆ. ದುಡ್ಡಿಗಾಗಿ ತನ್ನನ್ನು ತಾನು ಮಾರಿಕೊಂಡಿದೆ. ಹಾಗಾಗಿ, ಭಾರತದ ಪ್ರಧಾನಿ ವಿರುದ್ಧ ಸಾಕ್ಷ್ಯಚಿತ್ರ ನಿರ್ಮಿಸಿದೆ” ಎಂದು ಮಾಧ್ಯಮ ವರದಿಯ ಲಿಂಕ್ ಜತೆ ಟ್ವೀಟ್ ಮಾಡಿದ್ದಾರೆ.
“ಮೊದಲಿನಿಂದಲೂ ಚೀನಾ ಭಾರತವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸಿದೆ. 2021ರವರೆಗೆ ಭಾರತದ ಮ್ಯಾಪ್‌ಅನ್ನು ವಿರೂಪಗೊಳಿಸುತ್ತಿತ್ತು. ಜಮ್ಮು-ಕಾಶ್ಮೀರ ಇಲ್ಲದ ಮ್ಯಾಪ್ ಬಿಡುಗಡೆ ಮಾಡುತ್ತಿತ್ತು. ಕೊನೆಗೆ ಭಾರತದ ಕ್ಷಮೆ ಕೇಳಿತು. ಈಗಲೂ ದೇಶದ ವಿರುದ್ಧ ಕುತಂತ್ರ ಮಾಡುವ ದೃಷ್ಟಿಯಿಂದಲೇ ಸಾಕ್ಷ್ಯ ಚಿತ್ರ ನಿರ್ಮಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: BBC Documentary: ‘ಸ್ವತಂತ್ರ ನೀತಿ ವಿರುದ್ಧ ಮಾಹಿತಿ ಸಮರ’, ಬಿಬಿಸಿ ಡಾಕ್ಯುಮೆಂಟರಿ ವಿರುದ್ಧ ರಷ್ಯಾ ಆಕ್ರೋಶ