ನವದೆಹಲಿ: 2002ರಲ್ಲಿ ನಡೆದಿದ್ದ ಗೋದ್ರಾ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿಯವರು ತಪ್ಪಿತಸ್ಥರು ಎಂಬಂತೆ ಬಿಂಬಿಸಿ ಚಿತ್ರಿಸಿರುವ ಬಿಬಿಸಿ ಡಾಕ್ಯುಮೆಂಟರಿ(BBC Documentary) ಪ್ರಸಾರಕ್ಕೆ ಕೇಂದ್ರ ಸರ್ಕಾರ ವಿಧಿಸಿರುವ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ. ತನ್ನ ಆದೇಶಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ, ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು ಎಂದಿರುವ ಸುಪ್ರೀಂಕೋರ್ಟ್, 2023ರ ಏಪ್ರಿಲ್‌ನಲ್ಲಿ ಮುಂದಿನ ವಿಚಾರಣೆ ನಡೆಸಲಿದೆ.
ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರದ ಲಿಂಕ್ಗಳನ್ನು ತೆಗೆದು ಹಾಕಲು ಕೇಂದ್ರ ಸರ್ಕಾರ ಯೂಟ್ಯೂಬ್, ಟ್ವಿಟರ್ ಸೇರಿ ಮತ್ತಿತರ ಸಾಮಾಜಿಕ ಮಾಧ್ಯಮಗಳಿಗೂ ಸೂಚನೆ ನೀಡಿತ್ತು. ಆದರೆ ಮತ್ತೊಂದು ಕಡೆ, ವಿವಿಧ ಯೂನಿವರ್ಸಿಟಿಗಳಲ್ಲಿ ಬಿಬಿಸಿಯ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಡಾಕ್ಯುಮೆಂಟರಿ ಪ್ರದರ್ಶನ ನಡೆದಿದೆ. ಸಾಕ್ಷ್ಯಚಿತ್ರವನ್ನು ನಿಷೇಧಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಪತ್ರಕರ್ತ ಎನ್.ರಾಮ್, ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಎಂ.ಎಲ್.ಶರ್ಮಾ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ.ಎಂ.ಸುಂದರೇಶ್ ಅವರನ್ನೊಳಗೊಂಡ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಈ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿರುವುದು ಅಸಾಂವಿಧಾನಿಕ ಮತ್ತು ದುರುದ್ದೇಶಪೂರಿತ ನಿರ್ಧಾರ. ಕೇಂದ್ರದ ನಿರಂಕುಶ ಆಡಳಿತಕ್ಕೆ ಇದು ಸಾಕ್ಷಿ. ಯಾವುದೇ ಕಾರಣಕ್ಕೂ ನಿರ್ಬಂಧಿಸಬಾರದು ಎಂದು ವಕೀಲರಾದ ಎಂ.ಎಲ್.ಶರ್ಮಾ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಗೇ, ‘ಟ್ವಿಟರ್, ಯೂಟ್ಯೂಬ್ಗಳಿಂದ ಸಾಕ್ಷ್ಯಚಿತ್ರದ ಲಿಂಕ್ ತೆಗೆಸಿದ್ದನ್ನು ಪ್ರಶ್ನಿಸಿ ವಕೀಲ ಪ್ರಶಾಂತ್ ಭೂಷಣ್ ಮತ್ತು ಹಿರಿಯ ಪತ್ರಕರ್ತ ಎನ್.ರಾಮ್ ಅರ್ಜಿ ಸಲ್ಲಿಸಿದ್ದರು.
ಎನ್. ರಾಮ್ ಮತ್ತಿತರರ ಪರ ಶುಕ್ರವಾರ ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ವಾದಿಸಿದರು. ಕೇಂದ್ರ ಸರ್ಕಾರ ಐಟಿ ಕಾಯಿದೆ 2021 ಅಡಿಯಲ್ಲಿ ಡಾಕ್ಯುಮೆಂಟರಿಯನ್ನು ಬ್ಲಾಕ್ ಮಾಡಲು ಆದೇಶ ಹೊರಡಿಸಿರುವುದು ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸುವ ಅಧಿಕಾರಕ್ಕೆ ಸಮನಾಗಿದೆ ಎಂದರು. ನೀವೇಕೆ ಮೊದಲು ಹೈಕೋರ್ಟ್ ಅನ್ನು ಸಂಪರ್ಕಿಸಿಲ್ಲ ಎಂಬ ನ್ಯಾಯಮೂರ್ತಿ ಸಂಜೀವ್ ಖನ್ನಾ ಪ್ರಶ್ನೆಗೆ ಉದಯ್ ಸಿಂಗ್, ಐಟಿ ಕಾಯಿದೆಯ ಅಡಿಯಲ್ಲಿ ಬರುವ ಇಂಥ ಪ್ರಕರಣಗಳ ವಿಚಾರಣೆಗಳಿಂದ ಹೈಕೋರ್ಟ್ ದೂರ ಉಳಿದಿವೆ ಎಂದರು. ಬ್ಲಾಕಿಂಗ್ ಇದೇ ಕಾಯಿದೆಯ ಅಡಿಯಲ್ಲಿ ಬರುತ್ತದೆಯೇ ಎಂಬ ಪೀಠದ ಪ್ರಶ್ನೆಗೆ, ಹೌದು ಎಂದು ಸಿಂಗ್ ಪ್ರತಿಪಾದಿಸಿದರು.
ಬಿಬಿಸಿಯ ಇಂಡಿಯಾ; ದಿ ಮೋದಿ ಕ್ವಶ್ಚನ್ ಡಾಕ್ಯುಮೆಂಟರಿಯಲ್ಲಿ ಎರಡು ಭಾಗಗಳಿದ್ದು, ಮೊದಲ ಬಾರಿ ಬಿಡುಗಡೆಯಾದಾಗಿನಿಂದಲೂ ವಿವಾದ ಸೃಷ್ಟಿಯಾಗಿದೆ. ಗೋದ್ರಾ ಹತ್ಯಾಕಾಂಡ ನಡೆಯುವಾಗ ಗುಜರಾತ್ನಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೇ ಇದಕ್ಕೆ ಹೊಣೆ ಎಂದು ಸಾಕ್ಷ್ಯಚಿತ್ರದಲ್ಲಿ ಬಿಂಬಿಸಿದ್ದನ್ನು ಕೇಂದ್ರ ಸರ್ಕಾರ ಖಂಡಿಸಿದೆ. ಈ ಕೇಸ್ನಲ್ಲಿ ಸುಪ್ರೀಂಕೋರ್ಟ್ ಕೂಡ ನರೇಂದ್ರ ಮೋದಿಯವರಿಗೆ ಕ್ಲೀನ್ಚಿಟ್ ಕೊಟ್ಟಾದ ಮೇಲೆ ಬಿಬಿಸಿ ಇಂಥದ್ದೊಂದು ಡಾಕ್ಯುಮೆಂಟರಿ ನಿರ್ಮಿಸಿದ್ದು ತಪ್ಪು ಎಂದು ಹೇಳಿದೆ.