Site icon Vistara News

BBC Documentary On Modi: ಕೇಂದ್ರ ಬ್ಲಾಕ್‌ ಮಾಡಿದರೂ ಪ್ರತಿಪಕ್ಷಗಳಿಂದ ಬಿಬಿಸಿ ಸಾಕ್ಷ್ಯಚಿತ್ರ ಶೇರ್‌, ಬಿಜೆಪಿ ಆಕ್ರೋಶ

Supreme Court agrees to hear plea challenging Centre's decision to ban BBC documentary on modi

ನವದೆಹಲಿ: ಗೋದ್ರಾ ಹತ್ಯಾಕಾಂಡಕ್ಕೆ ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ (Narendra Modi) ಅವರೇ ಕಾರಣ ಎಂಬುದಾಗಿ ಚಿತ್ರಿಸಿರುವ ಬಿಬಿಸಿಯ ಇಂಡಿಯಾ: ದಿ ಮೋದಿ ಕ್ವಶ್ಚನ್‌ (India: The Modi Question) ಡಾಕ್ಯುಮೆಂಟರಿಯು (BBC Documentary On Modi) ದೇಶದಲ್ಲಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಡಾಕ್ಯುಮೆಂಟರಿ ಕುರಿತ ವಿಡಿಯೊ, ಪೋಸ್ಟ್‌ ಹಾಗೂ ಲಿಂಕ್‌ಗಳನ್ನು ಡಿಲೀಟ್‌ ಮಾಡಬೇಕು ಎಂದು ಟ್ವಿಟರ್‌ ಹಾಗೂ ಯುಟ್ಯೂಬ್‌ಗೆ ಕೇಂದ್ರ ಸರ್ಕಾರ ಸೂಚಿಸಿದರೂ ಪ್ರತಿಪಕ್ಷಗಳ ನಾಯಕರು ಲಿಂಕ್‌ಗಳನ್ನು ಶೇರ್‌ ಮಾಡಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಲಿಂಕ್‌ ಶೇರ್‌ ಮಾಡಿದವರು ಯಾರು?

ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಟಿಎಂಸಿ ಸಂಸದರಾದ ಮಹುವಾ ಮೊಯಿತ್ರಾ ಹಾಗೂ ಡೆರೆಕ್‌ ಒಬ್ರಾಯನ್‌ ಸೇರಿ ಹಲವು ನಾಯಕರು ಬಿಬಿಸಿ ಡಾಕ್ಯುಮೆಂಟರಿಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿದ್ದಾರೆ. ಅದರಲ್ಲೂ, ಸಂಸದೆ ಮಹುವಾ ಮೊಯಿತ್ರಾ ಅವರಂತೂ ಡಾಕ್ಯುಮೆಂಟರಿಯ ಲಿಂಕ್‌ಅನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಆದರೆ, ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಪ್ರತಿಪಕ್ಷಗಳಿಗೆ ಕಿರಣ್‌ ರಿಜಿಜು ತರಾಟೆ

ನರೇಂದ್ರ ಮೋದಿ ಅವರ ಕುರಿತ ಸಾಕ್ಷ್ಯಚಿತ್ರವನ್ನು ಬೆಂಬಲಿಸುವವರನ್ನು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಟುಕ್ಡೆ ಟುಕ್ಡೆ ಗ್ಯಾಂಗ್‌ ಎಂದು ಜರಿದಿದ್ದಾರೆ. “ಭಾರತದಲ್ಲಿರುವ ಕೆಲವರು ಇನ್ನೂ ವಸಾಹತುಶಾಹಿ ನಶೆಯಿಂದ ಹೊರಬಂದಿಲ್ಲ. ಅವರು, ಬಿಬಿಸಿಯನ್ನು ಭಾರತದ ಸುಪ್ರೀಂ ಕೋರ್ಟ್‌ಗಿಂತ ಮಿಗಿಲು ಎಂದು ಭಾವಿಸಿದ್ದಾರೆ. ಇಂತಹವರು ಭಾರತದ ಘನತೆಯನ್ನು ಕುಂದಿಸಲು ಯಾವ ಹಂತಕ್ಕೂ ಹೋಗುತ್ತಾರೆ” ಎಂದು ಟೀಕಿಸಿದ್ದಾರೆ.

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರೂ ಮೋದಿ ಕುರಿತ ಬಿಬಿಸಿ ಡಾಕ್ಯುಮೆಂಟರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬ್ರಿಟನ್‌ನ ಹಲವು ಸಂಸದರು ಡಾಕ್ಯುಮೆಂಟರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ನಿವೃತ್ತ ನ್ಯಾಯಮೂರ್ತಿಗಳು, ಸೇನೆಯ ನಿವೃತ್ತ ಹಿರಿಯ ಅಧಿಕಾರಿಗಳು ಸೇರಿ 300ಕ್ಕೂ ಅಧಿಕ ಗಣ್ಯರು ಬಿಬಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.

ಇದನ್ನೂ ಓದಿ | ಮೋದಿ ಕುರಿತು ಬಿಬಿಸಿ ಡಾಕ್ಯುಮೆಂಟರಿ ಖಂಡಿಸಿ ದೇಶದ ನಿವೃತ್ತ ಜಡ್ಜ್‌ಗಳು, ಕನ್ನಡಿಗರು ಸೇರಿ 300 ಗಣ್ಯರಿಂದ ಪತ್ರ

Exit mobile version