ನವದೆಹಲಿ: ಗುಜರಾತ್ ದಂಗೆ ಕುರಿತು ಬಿಬಿಸಿ ಸಾಕ್ಷ್ಯ ಚಿತ್ರವು (BBC Documentary) ಪೂರ್ವಗ್ರಹ ಪೀಡಿತವಾಗಿದೆ ಎಂದು ಹೇಳಿದ್ದ ಕೇರಳ ಕಾಂಗ್ರೆಸ್‌ನ ಯುವ ನಾಯಕ ಹಾಗೂ ಹಿರಿಯ ನಾಯಕ ಎ ಕೆ ಆ್ಯಂಟನಿ ಅವರ ಪುತ್ರ ಅನಿಲ್ ಕೆ ಆ್ಯಂಟನಿ (Anil K Antony) ಅವರು ಪಕ್ಷವನ್ನು ತೊರೆದಿದ್ದಾರೆ. ತಾವು ಮಾಡಿದ್ದ ಟ್ವೀಟ್ ವಾಪಸ್ ಪಡೆಯಲು ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದ್ದು, ಈ ಕಾರಣಕ್ಕಾಗಿಯೇ ಪಕ್ಷ ತೊರೆಯುತ್ತಿರುವುದಾಗಿ ಹೇಳಿದ್ದಾರೆ.
ಗುಜರಾತ್ ದಂಗೆ ಕುರಿತು ಬಿಬಿಸಿಯ ಸಾಕ್ಷ್ಯ ಚಿತ್ರವು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಋಣಾತ್ಮಕವಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಏತನ್ಮಧ್ಯೆ, ಅನಿಲ್ ಕೆ ಆ್ಯಂಟನಿ ಅವರು, ಬಿಬಿಸಿಯು ಮೊದಲಿನಿಂದಲೂ ಭಾರತದ ವಿರುದ್ಧ ಪೂರ್ವಗ್ರಹದ ಇತಿಹಾಸವನ್ನು ಹೊಂದಿದೆ. ಪ್ರಧಾನಿ ಮೋದಿ ಮತ್ತು ಗುಜರಾತ್ ದಂಗೆ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವುದನ್ನು ಅವರು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.
ಆದರೆ, ಆ್ಯಂಟನಿ ಪುತ್ರ ಮಾಡಿರುವ ಟ್ವೀಟ್ ಕಾಂಗ್ರೆಸ್ ಪಕ್ಷದೊಳಗೆ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅಲ್ಲದೇ, ಹಲವರು ಅನಿಲ್‌ಗೆ ಕರೆ ಮಾಡಿ, ಟ್ವೀಟ್ ಹಿಂಪಡೆಯುವಂತೆ ಸಾಕಷ್ಟು ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆಯ ದೀರ್ಘ ಪತ್ರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ನನಗೆ ರಾತ್ರಿಯಿಡೀ ಬೆದರಿಕೆ ಕರೆಗಳು ಮತ್ತು ದ್ವೇಷದ ಸಂದೇಶಗಳ ಬಂದಿವೆ. ಕಳೆದ 24 ಗಂಟೆಗಳಲ್ಲಿ ಬಹಳಷ್ಟು ಸಂಗತಿಗಳು ಸಂಭವಿಸಿವೆ. ವಿಶೇಷವಾಗಿ ಕಾಂಗ್ರೆಸ್‌ನಿಂದಲೇ ನನಗೆ ಸಾಕಷ್ಟು ನೋವುಂಟಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಭಾರತ್ ಜೋಡೋ ಯಾತ್ರೆ ಮೂಲಕ ಪ್ರೀತಿಯ ಸಂದೇಶವನ್ನು ಬೆಂಬಲಿಸುವವರಿಂದಲೇ ನನಗೆ ದ್ವೇಷದ ಸಂದೇಶಗಳು ಬಂದಿವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : BBC Documentary On Modi: ಜೆಎನ್‌ಯುನಲ್ಲಿ ಬಿಬಿಸಿ ಡಾಕ್ಯುಮೆಂಟರಿ ವೀಕ್ಷಣೆ ವೇಳೆ ಪವರ್ ಕಟ್, ಕಲ್ಲು ತೂರಿ ಗಲಾಟೆ
ಇದೇ ವೇಳೆ, ಕಾಂಗ್ರೆಸ್ ನಾಯಕತ್ವವನ್ನು ತೆಗಳಿದ್ದಾರೆ. ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಸುತ್ತ ಮುತ್ತ ಇರುವವರೆಲ್ಲರೂ ಚಮಚಾಗಳು. ಇಂಥವರೊಂದಿಗೆ ಮಾತ್ರವೇ ನೀವು ಕೆಲಸ ಮಾಡಲು ಉತ್ಸುಕರಾಗಿದ್ದೀರಿ ಎಂಬುದು ನನಗೆ ಈಗ ಗೊತ್ತಾಗಿದೆ ಎಂದೂ ಟೀಕಿಸಿದ್ದಾರೆ.