Site icon Vistara News

Ram Temple: ರಾಮನ ಹೆಸರಲ್ಲಿ ಭಕ್ತರಿಗೆ ಮೋಸ; ಕ್ಯೂಆರ್‌ ಕೋಡ್ ಸ್ಕ್ಯಾಮ್ ಬಗ್ಗೆ ಇರಲಿ ಎಚ್ಚರ

Be aware of QR Code Scam about Ram temple in ayodhya

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ (Ram Temple) ಉದ್ಘಾಟನೆಗೆ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲೇ ಭಕ್ತಾದಿಗಳನ್ನು ವಂಚಿಸುವ ಸೈಬರ್ ಜಾಲವೊಂದು (Cyber Crime) ಸಕ್ರಿಯವಾಗಿದೆ. ಮಂದಿರ ನಿರ್ಮಾಣಕ್ಕೆ ಕಾಣಿಕೆಯನ್ನು ಬೇಡುವ ವಂಚಕ ಕ್ಯೂಆರ್‌ ಕೋಡ್ ಸ್ಕ್ಯಾಮ್ (QR Code Scam) ಬಗ್ಗೆ ಭಕ್ತರು ಎಚ್ಚರಿಕೆ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್(Vishwa Hindu Parishat- VHP) ವಕ್ತಾರ ವಿನೋದ್ ಬನ್ಸಾಲ್ ಅವರು ಹೇಳಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ (Shri Ram Janmabhoomi Teerth Kshetra) ಹೆಸರಿನಲ್ಲಿ ಫೇಕ್ ಐಡಿ ಸೃಷ್ಟಿಸಿ(Fake ID), ಭಕ್ತರಿಂದ ಕಾಣಿಕೆಯಾಗಿ (Ram Devotees) ಹಣವನ್ನು ಸುಲಿಗೆ ಮಾಡುತ್ತಿರುವ ಸೈಬರ್ ಜಾಲ ಸಕ್ರಿಯವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಪೊಲೀಸ್ ದೂರು ನೀಡಿರುವ ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಅವರು, ಅಭಿಷೇಕ್ ಕುಮಾರ್ ಎಂಬ ವಂಚಕ ಅಯೋಧ್ಯಾ ದೇಗುಲ ಅಭಿವೃದ್ದಿ ಹೆಸರಿನಲ್ಲಿ ಭಕ್ತಾದಿಗಳಿಂದ ಹಣವನ್ನು ಸುಲಿಗೆ ಮಾಡುತ್ತಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಕ್ಯೂಆರ್‌ ಕೋಡ್ ಷೇರ್ ಮಾಡುವ ಮೂಲಕ ಹಣವನ್ನು ಸುಲಿಯುತ್ತಿದ್ದಾರೆ. ಈ ಕ್ಯೂಆರ್‌ ಕೋಡ್ ಸ್ಕ್ಯಾನಿಂಗ್ ಮಾಡಿದರೆ ಯುಪಿಐ ಬಳಕೆದಾರರನ್ನು ಮನೀಶಾ ನಲ್ಲಬೆಲ್ಲಿ ಎಂಬ ಹೆಸರಿನ ಯುಪಿಐ ಐಡಿಗೆ ನಿರ್ದೇಶಿಸುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಮತ್ತು ದೆಹಲಿ, ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರಿಗೆ ಈ ವಿಷಯವನ್ನು ಗಮನಕ್ಕೆ ತಂದಿರುವ ಬನ್ಸಾಲ್ ಅವರು ತಮ್ಮ ದೂರಿನ ಪತ್ರದಲ್ಲಿ, ದೇಗುಲಕ್ಕೆ ಹಣವನ್ನು ಸಂಗ್ರಹಿಸಲು ಯಾವುದೇ ಖಾಸಗಿ ವ್ಯಕ್ತಿ ಅಥವಾ ಜನರಿಗೆ ಅಧಿಕಾರವಿಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಲವು ಬಾರಿ ಸ್ಪಷ್ಟಪಡಿಸಿದೆ. ರಾಮ ಮಂದಿರ ಉದ್ಘಾಟನೆಯ ಬಗ್ಗೆ ಇಡೀ ರಾಷ್ಟ್ರವು ಸಂತೋಷಪಡುತ್ತಿರುವ ಸಮಯದಲ್ಲಿ, ಇಂತಹ ಅಸಂಬದ್ಧ ಚಟುವಟಿಕೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು ಎಂದು ಅವರು ತಿಳಿಸಿದ್ದಾರೆ.

ಕೆಲವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಹೆಸರಿನಲ್ಲಿ ನಕಲಿ ಐಡಿ ಮಾಡಿ ಹಣ ವಂಚಿಸಲು ಯತ್ನಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವಾಲಯ, ದಿಲ್ಲಿ ಪೊಲೀಸ್, ಡಿಜಿಪಿ ಮತ್ತು ಉತ್ತರ ಪ್ರದೇಶ ಪೊಲೀಸ್ ಅಂಥವರ ವಿರುದ್ಧ ವಿಳಂಬ ಮಾಡದೇ ಕ್ರಮ ಕೈಗೊಳ್ಳಬೇಕು. ಈ ಸಂದರ್ಭಕ್ಕಾಗಿ ಹಣವನ್ನು ಸಂಗ್ರಹಿಸಲು ಟ್ರಸ್ಟ್ ಯಾವುದೇ ಸಂಸ್ಥೆಗೆ ಅಧಿಕಾರ ನೀಡಿಲ್ಲ ಎಂದು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭದ ವಿಧಿವಿಧಾನಗಳು ಜನವರಿ 16 ರಂದು ಪ್ರಾರಂಭವಾಗುತ್ತವೆ ಮತ್ತು ಜನವರಿ 22 ರವರೆಗೆ ಏಳು ದಿನಗಳ ಕಾಲ ಮುಂದುವರಿಯುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭವ್ಯ ಮಂದಿರದ ವಿಗ್ರಹ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಹಿನ್ನೆಲೆಯ ಗಣ್ಯರು ಮತ್ತು ವ್ಯಕ್ತಿಗಳನ್ನು ಆಕರ್ಷಿಸುವ ಸಮಾರಂಭಕ್ಕೆ ವ್ಯಾಪಕವಾದ ವ್ಯವಸ್ಥೆಗಳು ನಡೆಯುತ್ತಿವೆ.

ಜ.22ರಂದು ಪ್ರತಿ ಮನೆಯಲ್ಲಿ ‘ರಾಮಜ್ಯೋತಿ’ ಬೆಳಗಿಸಿ; ಮೋದಿ ಕರೆ

2024ರ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಬಳಿಕ, ಪೂಜಾ ವಿಧಿವಿಧಾನಗಳು ಪೂರ್ಣಗೊಂಡ ಮೇಲೆ ದೇಶದ ಪ್ರತಿಯೊಂದು ಮನೆಯಲ್ಲಿ ರಾಮಜ್ಯೋತಿ ಬೆಳಗಲಿ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದರು. ಅಯೋಧ್ಯೆ ವಿಮಾನ ನಿಲ್ದಾಣ ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ಜನವರಿ 22ರಂದು ದೇಶಕ್ಕೆ ದೇಶವೇ ರಾಮಮಯವಾಗಲಿ, ರಾಮನ ಜಪವೇ ಎಲ್ಲೆಡೆ ಜಗಮಗಿಸಲಿ ಎಂದು ಕರೆ ನೀಡಿದರು.

“ಅಯೋಧ್ಯೆ ರಾಮಮಂದಿರವು ದೇಶದ ಜನರ ದೇಗುಲವಾಗಿದೆ. ರಾಮಮಂದಿರದಿಂದ ದೇಶದ ರಾಮಭಕ್ತರು ಪುನೀತರಾಗುವ ಜತೆಗೆ ಉತ್ತರ ಪ್ರದೇಶದ ಅಭಿವೃದ್ಧಿಗೆ ರಾಮಮಂದಿರ ಸಂಕೇತವಾಗಲಿದೆ. ಭವ್ಯ ರಾಮಮಂದಿರದ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಯೋಧ್ಯೆಯ ರಾಮಮಂದಿರವು ಸಾವಿರಾರು ಜನರ ಪರಿಶ್ರಮದಿಂದ ನಿರ್ಮಾಣ ಮಾಡಲಾಗಿದೆ. ಹಾಗಾಗಿ, ಇದು ಎಲ್ಲ ರಾಮ ಭಕ್ತರಿಗೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು.

“ದೇಶದಲ್ಲಿರುವ ಎಲ್ಲ ರಾಮನ ಭಕ್ತರು ಅಯೋಧ್ಯೆಗೆ ಬರಬೇಕು, ರಾಮನ ದರ್ಶನ ಮಾಡಬೇಕು ಎಂದು ಬಯಸುತ್ತಿದ್ದಾರೆ. ಆದರೆ, ಜನವರಿ 22ರಂದು ಎಲ್ಲ ನಾಗರಿಕರು ಅಯೋಧ್ಯೆಗೆ ಬರದಿರಿ. ಭದ್ರತೆ, ಜನಜಂಗುಳಿಯನ್ನು ತಪ್ಪಿಸಲು ನಿಧಾನವಾಗಿ ಅಯೋಧ್ಯೆಯತ್ತ ಧಾವಿಸಿ. ರಾಮಮಂದಿರಕ್ಕಾಗಿ 550 ವರ್ಷ ಕಾದಿದ್ದೀರಿ. ಈಗ ರಾಮಮಂದಿರ ಕನಸು ನನಸಾಗುತ್ತಿದೆ. ಯಾರು ಕೂಡ ಅವಸರ ಮಾಡದೆ ಉದ್ಘಾಟನೆ ಬಳಿಕ ಸಮಯ ತೆಗೆದುಕೊಂಡು ಅಯೋಧ್ಯೆಗೆ ಬಂದು, ರಾಮನ ದರ್ಶನ ಮಾಡಿಕೊಳ್ಳಿ” ಎಂದು ಸಲಹೆ ನೀಡಿದರು.

“ಅಯೋಧ್ಯೆಯ ಜನರಿಗೆ ವಿಶೇಷವಾದ ಉಡುಗೊರೆ, ಅದೃಷ್ಟ ಲಭಿಸಿದೆ. ದೇಶದ ಕೋಟ್ಯಂತರ ಭಾರತೀಯರನ್ನು ಅಯೋಧ್ಯೆಗೆ ಸ್ವಾಗತಿಸುವ ಸೌಭಾಗ್ಯ ನಿಮ್ಮದಾಗಿದೆ. ಅಯೋಧ್ಯೆಗೆ ಆಗಮಿಸುವ ರಾಮನ ಭಕ್ತರನ್ನು ನೀವು ಚೆನ್ನಾಗಿ ಉಪಚರಿಸಿ. ಅಯೋಧ್ಯೆಯನ್ನು ಸ್ವಚ್ಛವಾಗಿಡಿ, ಸುಸಜ್ಜಿತವಾಗಿಡಿ. ಅಯೋಧ್ಯೆಗೆ ಆಗಮಿಸುವವರು ಕೂಡ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಿ. ಆ ಮೂಲಕ ರಾಮನ ನಗರಿಯನ್ನು ದೇಶದ ನಗರಿಯನ್ನಾಗಿ ಕಾಪಾಡಿಕೊಳ್ಳಿ” ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Ram Mandir: ಏನಿದು ಪ್ರಾಣ ಪ್ರತಿಷ್ಠೆ? ಈ ಸಂಗತಿ ನಮಗೇಕೆ ಗೊತ್ತಿರಬೇಕೆಂದರೆ…

Exit mobile version