ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ಕಾರಣ ಕೋರ್ಟ್ ಕಲಾಪಗಳು, ತೀರ್ಪುಗಳು ಜನರಿಗೆ ಲಭ್ಯವಾಗುವಿಕೆ ಸೇರಿ ಹಲವು ಬದಲಾವಣೆಗಳಾಗಿವೆ. ಅದರಲ್ಲೂ, ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ನ್ಯಾಯಾಲಯದ ವಿಚಾರಣೆಗಳು ಆನ್‌ಲೈನ್‌ನಲ್ಲಿಯೇ ನಡೆಯುತ್ತಿವೆ. ಹಾಗೆಯೇ, ಕೋರ್ಟ್ ಕಲಾಪಗಳ ನೇರಪ್ರಸಾರವೂ (Court Live Streaming) ಆಗುತ್ತಿದೆ. ಆದರೆ, ಕೋರ್ಟ್ ಕಲಾಪಗಳ ನೇರಪ್ರಸಾರದ ವೇಳೆ ನ್ಯಾಯಾಧೀಶರು ಬಳಕೆ ಮಾಡುವ ಭಾಷೆ, ನೀಡುವ ಹೇಳಿಕೆಗಳ ಮೇಲೆ ನಿಗಾ ಇರಲಿ ಎಂದು ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ನ್ಯಾಯಾಲಯದ ವಿಚಾರಣೆ ವೇಳೆ ನೀಡಿದ ಹೇಳಿಕೆಯ ಕುರಿತು ಕರ್ನಾಟಕ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಮಾಜಿ ಉಪ ಆಯುಕ್ತ ಜೆ. ಮಂಜುನಾಥ್ ಹಾಗೂ ಭ್ರಷ್ಟಾಚಾರ ನಿಗ್ರಹ ದಳ (ACB) ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಜಡ್ಜ್‌ಗಳಿಗೆ ಹಲವು ಸಲಹೆ ನೀಡಿದೆ. ಜಡ್ಜ್‌ಗಳು ಯಾವುದೇ ಕಾರಣಕ್ಕೂ ವ್ಯತಿರಿಕ್ತ ಹೇಳಿಕೆಗಳನ್ನು ನೀಡಬಾರದು ಎಂದಿದೆ.
ಕೋರ್ಟ್ ಕಲಾಪಗಳ ಲೈವ್ ಸ್ಟ್ರೀಮಿಂಗ್ ವೇಳೆ ನ್ಯಾಯಾಧೀಶರು ನೀಡುವ ಕೆಲವೊಂದು ವ್ಯತಿರಿಕ್ತ ಹೇಳಿಕೆಗಳು ಭಾರಿ ಪರಿಣಾಮ ಬೀರುತ್ತವೆ. ಇವುಗಳು ಹೆಚ್ಚಿನ ಜನರನ್ನು ತಲುಪುತ್ತವೆ. ಹಾಗೆಯೇ, ನ್ಯಾಯಾಲಯದ ಮೇಲಿನ ಗೌರವಕ್ಕೆ ಧಕ್ಕೆ ಬರುತ್ತದೆ. ಹಾಗಾಗಿ, ನ್ಯಾಯಾಧೀಶರು ನೇರ ಪ್ರಸಾರದ ವೇಳೆ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು. ಯಾವುದೇ ವ್ಯತಿರಿಕ್ತ ಹೇಳಿಕೆಗಳನ್ನು ನೀಡಬಾರದು. ಆ ಮೂಲಕ ನ್ಯಾಯಾಲಯಗಳ ಗೌರವವನ್ನು ಕಾಪಾಡಬೇಕು” ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಅಹ್ಸಾದುದ್ದೀನ್ ಅಮಾನುಲ್ಲಾ ಹೇಳಿದರು.
ಏನಿದು ಪ್ರಕರಣ? ಜಡ್ಜ್ ಹೇಳಿದ್ದೇನು?
ಕೆಲವು ತಿಂಗಳ ಹಿಂದೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಭ್ರಷ್ಟಾಚಾರ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಹಲವು ವಿಚಾರ ಪ್ರಸ್ತಾಪಿಸಿದ್ದರು. ತಮಗೆ ಬಂದ ಬೆದರಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇದೇ ವೇಳೆ ನ್ಯಾ.ಎಚ್.ಪಿ. ಸಂದೇಶ್ ಅವರು ನೀಡಿದ ಹೇಳಿಕೆಗಳು ಯುಟ್ಯೂಬ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
“ನಾನು ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ, ಜನರ ಒಳಿತಿಗಾಗಿ ವರ್ಗಾವಣೆಯಾಗಲೂ ಸಿದ್ಧನಿದ್ದೇನೆ. ನಿಮ್ಮ ಎಸಿಬಿ ಎಡಿಜಿಪಿ ತುಂಬಾ ಪವರ್‌ಫುಲ್ ಆಗಿದ್ದಾರಂತೆ, ಒಬ್ಬ ವ್ಯಕ್ತಿ ಹೀಗೆ ಹೇಳಿರುವುದನ್ನು ನ್ಯಾಯಮೂರ್ತಿಯೊಬ್ಬರು ತಮಗೆ ತಿಳಿಸಿದ್ದಾರೆ” ಎಂದು ಕಳೆದ ವರ್ಷ ನಡೆದ ನಡೆದ ಬೆಂಗಳೂರು ನಗರ ಡಿಸಿ ಲಂಚ ಪ್ರಕರಣದ ವಿಚಾರಣೆ ಸಮಯದಲ್ಲಿ ಎಸಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಕುರಿತು ಎಡಿಜಿಪಿ ಹಾಗೂ ಎಸಿಬಿಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ: Vistara Exclusive | ಹೈಕೋರ್ಟ್ ವಿಡಿಯೋ ಅಪ್‌ಲೋಡ್ ಮಾಡಿ ನಿಯಮ ಉಲ್ಲಂಘಿಸಿದ ರಾಹುಲ್ ಗಾಂಧಿ