ಭೋಪಾಲ್: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ ಎಂದು ಕರೆದಿದ್ದು ವಿವಾದ ಉಂಟಾಗಿದ್ದ ಬೆನ್ನಲ್ಲೇ, ಮೋದಿ ಅವರ ಕುರಿತು ಮಧ್ಯಪ್ರದೇಶ ಕಾಂಗ್ರೆಸ್‌ನ ಹಿರಿಯ ನಾಯಕ ರಾಜಾ ಪಟೇರಿಯಾ ನೀಡಿದ ಹೇಳಿಕೆ ಈಗ ಮತ್ತೊಂದು ವಿವಾದ ಸೃಷ್ಟಿಸಿದೆ. “ಸಂವಿಧಾನ ಉಳಿಸಲು ನರೇಂದ್ರ ಮೋದಿ ಅವರನ್ನು ಕೊಲ್ಲಲು (Be Ready To Kill Modi) ಸಿದ್ಧರಾಗಿರಿ” ಎಂದು ಸಭೆಯಲ್ಲಿ ಕರೆ ನೀಡಿದ್ದು, ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಹಾಗೆಯೇ, ರಾಜಾ ಪಟೇರಿಯಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
“ನರೇಂದ್ರ ಮೋದಿ ಅವರು ಚುನಾವಣೆಗಳನ್ನೇ ಕೊನೆಗಾಣಿಸುತ್ತಾರೆ. ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಜನರನ್ನು ಒಡೆಯುತ್ತಾರೆ. ದಲಿತರು, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರ ಜೀವನವು ಈಗಾಗಲೇ ಅಪಾಯದಲ್ಲಿದೆ. ಹಾಗಾಗಿ, ಸಂವಿಧಾನವನ್ನು ಉಳಿಸಲು ಮೋದಿ ಅವರನ್ನು ಹತ್ಯೆ ಮಾಡಲು ಎಲ್ಲರೂ ಸಿದ್ಧರಾಗಿರಬೇಕು” ಎಂದು ಕರೆ ನೀಡಿದ್ದಾರೆ.
ನಾನು ಗಾಂಧಿವಾದಿ ಎಂದು ಪಟೇರಿಯಾ ಸ್ಪಷ್ಟನೆ
“ನರೇಂದ್ರ ಮೋದಿ ಅವರನ್ನು ಕೊಲ್ಲಲು ಸಿದ್ಧರಾಗಿರಿ” ಎಂದು ನೀಡಿದ ಹೇಳಿಕೆಯು ವಿವಾದ ಸೃಷ್ಟಿಸಿದ ಬೆನ್ನಲ್ಲೇ ರಾಜಾ ಪಟೇರಿಯಾ ಅವರು ಸ್ಪಷ್ಟನೆ ನೀಡಿದ್ದು, “ನಾನು ಗಾಂಧಿವಾದಿ” ಎಂದು ಹೇಳಿದ್ದಾರೆ. “ನಾನು ಮಹಾತ್ಮ ಗಾಂಧೀಜಿಯವರ ಅನುಯಾಯಿಯಾಗಿದ್ದೇನೆ. ದಲಿತರು, ಅಲ್ಪಸಂಖ್ಯಾತರನ್ನು ಉಳಿಸಲು ಮೋದಿ ಅವರನ್ನು ಸೋಲಿಸಬೇಕು ಎಂಬುದು ನನ್ನ ಮಾತಿನ ತಾತ್ಪರ್ಯ” ಎಂದಿದ್ದಾರೆ.
ಬಂಧನಕ್ಕೆ ಬಿಜೆಪಿ ಆಗ್ರಹ
ರಾಜಾ ಪಟೇರಿಯಾ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇನ್ನು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. “ನರೇಂದ್ರ ಮೋದಿ ಅವರ ಕುರಿತು ಕಾಂಗ್ರೆಸ್ ಎಂತಹ ಅಭಿಪ್ರಾಯ ಹೊಂದಿದೆ ಎಂಬುದಕ್ಕೆ ರಾಜಾ ಪಟೇರಿಯಾ ನೀಡಿದ ಹೇಳಿಕೆಯೇ ಸಾಕ್ಷಿಯಾಗಿದೆ. ಮೋದಿ ಅವರು ಉತ್ತಮ ಆಡಳಿತ ನೀಡಿ ಜನರ ಹೃದಯ ಗೆದ್ದಿದ್ದಾರೆ. ಇದನ್ನು ಸಹಿಸದೆ ಕಾಂಗ್ರೆಸ್ ಇಂತಹ ಹುನ್ನಾರ ಮಾಡುತ್ತಿದೆ. ಸದ್ಯ, ಪಟೇರಿಯಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾನೂನಿನ ಅನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ. ಇನ್ನೂ ಕೆಲವು ನಾಯಕರು “ಭಾರತ್ ಜೋಡೋ ಯಾತ್ರೆಯ ನಿಜವಾದ ಉದ್ದೇಶ ಈಗ ಹೊರ ಬರುತ್ತಿದೆ” ಎಂದು ಹೇಳಿದ್ದಾರೆ.