ವಾರಾಣಸಿ: ಲೋಕಸಭೆ ಚುನಾವಣೆಯ (Lok Sabha Election 2024) 5 ಹಂತದ ಮತದಾನ ಮುಕ್ತಾಯವಾಗಿದೆ. ಇದರೊಂದಿಗೆ ದೇಶಾದ್ಯಂತ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯವಾದಂತಾಗಿದೆ. ಇನ್ನೂ ಎರಡು ಹಂತದ ಮತದಾನ ಬಾಕಿ ಇರುವ ಕಾರಣ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ಎಲ್ಲ ಪಕ್ಷಗಳ ಪ್ರಮುಖ ನಾಯಕರು, ಅಭ್ಯರ್ಥಿಗಳು ಪ್ರಚಾರ ಕೈಗೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ, ಮತದಾನ ಪ್ರಮಾಣ ಹೆಚ್ಚಿಸಲು ಮಹಿಳೆಯರಿಗೆ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. “ಡ್ರಮ್ ಹಾಗೂ ತಟ್ಟೆಗಳನ್ನು ಬಾರಿಸುವ ಮೂಲಕ ಮತದಾನ ಹೆಚ್ಚಿಸಿ” ಎಂದು ವಾರಾಣಸಿ (Varanasi) ಮಹಿಳೆಯರಿಗೆ ಮೋದಿ ಸಲಹೆ ನೀಡಿದ್ದಾರೆ.
“ವಾರಾಣಸಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು. ಇದಕ್ಕಾಗಿ ಮಹಿಳೆಯರು ಕೈಜೋಡಿಸಬೇಕು. ಮತದಾನ ನಡೆಯುವ ದಿನ ಸುಮಾರು 20-25 ಮಹಿಳೆಯರು ಒಗ್ಗೂಡಿ ಮತಗಟ್ಟೆಗಳ ಬಳಿ ತೆರಳಿ. ಡ್ರಮ್ ಹಾಗೂ ತಟ್ಟೆಗಳನ್ನು ಬಾರಿಸಿ, ಹಾಡು ಹಾಡಿ. ಬೆಳಗ್ಗೆ 10 ಗಂಟೆಯೊಳಗೆ ಮತಗಟ್ಟೆಯ ಬಳಿ ಹೀಗೆ ಮಾಡಿದರೆ ಖಂಡಿತವಾಗಿಯೂ ಹೆಚ್ಚಿನ ಪ್ರಮಾಣದ ಮತದಾನ ದಾಖಲಾಗುತ್ತದೆ. ಪ್ರತಿಯೊಂದು ಮತಗಟ್ಟೆಗಳಲ್ಲೂ ಹೆಣ್ಣುಮಕ್ಕಳು ಹೀಗೆ ಮಾಡುವ ಮೂಲಕ ಮತದಾನದ ಜಾಗೃತಿ ಮೂಡಿಸಬೇಕು” ಎಂದು ವಾರಾಣಸಿಯಲ್ಲಿ ಮಹಿಳೆಯರಿಗೆ ಮೋದಿ ಕರೆ ನೀಡಿದ್ದಾರೆ.
PM Shri @narendramodi addresses Nari Shakti Sammelan in Varanasi. https://t.co/27fOye1ecS
— BJP (@BJP4India) May 21, 2024
ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ
ವಾರಾಣಸಿಯಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ನರೇಂದ್ರ ಮೋದಿ ಅವರು ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. “ಇಂಡಿಯಾ ಒಕ್ಕೂಟವು ಎಂದಿಗೂ ಮಹಿಳಾ ವಿರೋಧಿ ಮನಸ್ಥಿತಿ ಹೊಂದಿದೆ. ಅವರು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿದರು. ಇಂಡಿಯಾ ಒಕ್ಕೂಟದ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೇ ಹೆಚ್ಚು ತೊಂದರೆಯಾಗುತ್ತದೆ. ಹೆಣ್ಣುಮಕ್ಕಳಿಗೆ ತೊಂದರೆಯಾದರೆ, ಹುಡುಗರು ಎಂದ ಮೇಲೆ ತಪ್ಪು ಮಾಡುತ್ತಾರೆ ಎಂದು ಹೇಳುತ್ತಾರೆ. ಆದರೆ, ಯೋಗಿ ಆದಿತ್ಯನಾಥ್ ಅವರು ಸಿಎಂ ಆದ ಮೇಲೆ ತಪ್ಪು ಮಾಡುವ ಹುಡುಗರಿಗೆ ತಕ್ಕ ಪಾಠ ಕಲಿಸಿದ್ದಾರೆ. ಇದರಿಂದ ನಮ್ಮ ಸಹೋದರ-ಸಹೋದರಿಯರು ಸುರಕ್ಷಿತವಾಗಿದ್ದಾರೆ” ಎಂದರು.
ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್ ಅಜಯ್ ರಾಯ್ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್ ಮಹಾಮಂಡಲೇಶ್ವರ್ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಯು ಅಥರ್ ಜಮಾಲ್ ಲರಿ ಅವರಿಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.
ಇದನ್ನೂ ಓದಿ: Narendra Modi: ಅಂಬೇಡ್ಕರ್ ಇರದಿದ್ದರೆ ಮೀಸಲಾತಿ ಜಾರಿಗೆ ನೆಹರು ಬಿಡುತ್ತಿರಲಿಲ್ಲ ಎಂದ ಮೋದಿ!