ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರೇ ಇರಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ಇರಲಿ. ಅವರು ಬೇರೆ ರಾಜ್ಯಗಳಲ್ಲಿ ಭಾಷಣ ಮಾಡುವ ವೇಳೆ ಸ್ಥಳೀಯರಿಗೆ ಅರ್ಥವಾಗಲಿ ಎಂದು ಅನುವಾದಕರನ್ನು (ದುಭಾಷಿ) ನೇಮಿಸಿರುತ್ತಾರೆ ಹಾಗೂ ತುಂಬ ಸಲ ಅನುವಾದಕರು ತಪ್ಪಾಗಿ ಅನುವಾದ ಮಾಡಿಯೋ, ಅನುವಾದ ಮಾಡಲು ತಡಕಾಡಿಯೋ ಹಾಸ್ಯ, ಮುಜುಗರಕ್ಕೆ ಕಾರಣರಾಗುತ್ತಾರೆ. ಈ ಕುರಿತು ರಾಹುಲ್ ಗಾಂಧಿ ಅವರು ಮುಕ್ತವಾಗಿ ಮಾತನಾಡಿದ್ದು, “ನನ್ನ ಭಾಷಣದ ಅನುವಾದಕರಾಗಿ ಕಾರ್ಯನಿರ್ವಹಿಸುವುದು ಕಷ್ಟದ ಕೆಲಸ” ಎಂದಿದ್ದಾರೆ.
ಕೇರಳದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಕುರಿತು ರಾಹುಲ್ ಗಾಂಧಿ ಮಾತನಾಡಿದರು. “ನನ್ನ ಭಾಷಣವನ್ನು ಅನುವಾದ ಮಾಡುವುದು, ಅನುವಾದಕರಾಗಿ ಕೆಲಸ ಮಾಡುವುದು ತುಂಬ ಕಷ್ಟ. ತೆಲಂಗಾಣದಲ್ಲಿ ಇದು ನನ್ನ ಅನುಭವಕ್ಕೆ ಬಂತು. ನಾನು ಹಿಂದಿಯಲ್ಲಿ ಐದು ಶಬ್ದ ಹೇಳಿದರೆ, ತೆಲುಗಿನಲ್ಲಿ ಆರೇಳು ಶಬ್ದ ಆಗುತ್ತವೆ ಎಂದು ಭಾವಿಸಿದ್ದೆ. ಆದರೆ, ಅನುವಾದಕರಾದವರು 20, 25, 30 ಪದ ಮಾತನಾಡಿದರು. ಇದರಿಂದಾಗಿ ನನ್ನ ಭಾಷಣವನ್ನು ಅನುವಾದ ಮಾಡುವುದು ಕಷ್ಟ ಎಂಬುದಾಗಿ ಅನಿಸಿತು” ಎಂದು ತಿಳಿಸಿದರು.
Being my translator can be a
— Congress for Telangana (@Congress4TS) November 29, 2023
dangerous job.😂
— Rahul Gandhi
నా అనువాదకుడిగా ఉండటం ఒక ప్రమాదకరమైన ఉద్యోగం.😂
— రాహుల్ గాంధీ#RahulGandhi #Kerala pic.twitter.com/bdF7MzZa64
“ನಾನು ಬೇಜಾರು ತರಿಸುವ ಯಾವುದೇ ಅಂಶವನ್ನು ಹಿಂದಿಯಲ್ಲಿ ಹೇಳಿದರೆ, ಅದನ್ನು ಅನುವಾದಕರಾದವರು ಅನುವಾದಿಸಿ ಮಾತನಾಡಿದರೆ, ಜನ ತುಂಬ ಖುಷಿ ಪಡುತ್ತಾರೆ. ಅವರಲ್ಲಿ ಉತ್ಸಾಹ ಕಾಣುತ್ತದೆ. ಅವರು ಕುಣಿದಾಡುತ್ತಾರೆ, ಜಿಗಿಯುತ್ತಾರೆ. ಆದರೆ, ನಾನು ತುಂಬ ಖುಷಿ ಅಥವಾ ಕುತೂಹಲ ಹೆಚ್ಚಿಸುವ ವಿಷಯ ಮಾತನಾಡಿದರೆ, ಅದನ್ನು ಅನುವಾದಕ ಸ್ಥಳೀಯ ಭಾಷೆಯಲ್ಲಿ ಹೇಳಿದರೆ ಜನ ಸುಮ್ಮನೆ ಕುಳಿತಿರುತ್ತಾರೆ. ಅವರಿಂದ ಯಾವುದೇ ಭಾವನೆಗಳು ವ್ಯಕ್ತವಾಗುವುದಿಲ್ಲ” ಎಂದು ಅನುವಾದದ ಕುರಿತು ಹೇಳಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ತಯಾರಿಸಿದ್ದ ಮೇಜುಗಳು ವಿಶೇಷ ಚೇತನರ ಶಾಲೆಗೆ ಕೊಡುಗೆ; ಮಾನವೀಯ ನಡೆ
ನನ್ನ ಗೆಳೆಯ ಸಾಮದಾನಿ ಎಂಬುವರು ಇದ್ದಾರೆ. ಅವರು ತುಂಬ ಚೆನ್ನಾಗಿ ಅನುವಾದ ಮಾಡುತ್ತಾರೆ ಎಂದು ಕೂಡ ಪ್ರಶಂಸೆ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ಅವರು ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಭಾಷಣ ಮಾಡುವಾಗ ಅನುವಾದಕರು ಮಾಡಿದ ಎಡವಟ್ಟಿನಿಂದ ಮುಜುಗರ ಅನುಭವಿಸಿದ್ದರು. ಅಮಿತ್ ಶಾ ಅವರಂತೂ ಅನುವಾದಕರ ಎಡವಟ್ಟಿನ ಕುರಿತು ವೇದಿಕೆ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ನರೇಂದ್ರ ಮೋದಿ ಅವರಿಗೂ ಅನುವಾದಕರು ಮಾಡುವ ಎಡವಟ್ಟಿನ ಅನುಭವವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ