Site icon Vistara News

Supreme Court | ಬೇನಾಮಿ ಕಾಯಿದೆ ಅಸಾಂವಿಧಾನಿಕ, ಜೈಲು ಶಿಕ್ಷೆ ಇಲ್ಲ! ಸುಪ್ರೀಂ ಕೋರ್ಟ್ ಹೇಳಿದ್ದೇನು?

Supreme Court directed the Maharashtra to videograph the Hindu Jan Aakrosh Sabha

ನವ ದೆಹಲಿ: 1988ರ ಬೇನಾಮಿ ವ್ಯವಹಾರಗಳು(ನಿಷೇಧ) ಕಾಯ್ದೆಯ 3(2) ಸೆಕ್ಷನ್ ಅಸಾಂವಿಧಾನಿಕವಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಜತೆಗೆ ಇದೇ ಕಾಯಿದೆಗೆ 2016ರಲ್ಲಿ ತಿದ್ದುಪಡಿ ತರಲಾಗಿದ್ದು, ಆ ತಿದ್ದಪಡಿಗಳು ಪೂರ್ವಾನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

2016ರ ಬೇನಾಮಿ ವ್ಯವಹಾರಗಳ ತಿದ್ದುಪಡಿಯ ಕಾಯಿದೆಯ 3(2) ಸೆಕ್ಷನ್ ಕೂಡ ಅಸಾಂವಿಧಾನಿಕವಾಗಿದೆ. ಇದು ಸಂವಿಧಾನದ ಆರ್ಟಿಕಲ್ 20(1) ಅನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ವಿವಾದಿತ 3(2) ಸೆಕ್ಷನ್ ಏನು ಹೇಳತ್ತದೆ ಎಂದರೆ- ಯಾರು ಬೇನಾಮಿ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರೋ ಅಂಥವರ ಆರೋಪ ಸಾಬೀತಾದರೆ ಅವರಿಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಈ ಶಿಕ್ಷೆಯನ್ನು ದಂಡದೊಂದಿಗೆ ಅಥವಾ ದಂಡ ರಹಿತವಾಗಿ ಮೂರು ವರ್ಷಗಳವರೆಗೂ ವಿಸ್ತರಿಸಲು ಅವಕಾಶವನ್ನು ನೀಡುತ್ತಿತ್ತು. ಇದೀಗ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ಇನ್ನು ಮುಂದೆ ಪೂರ್ವಾನ್ವಯವಾಗಿ ಬೇನಾಮಿ ಆಸ್ತಿ ಹೊಂದಿದವರನ್ನು ಈ ಕಾಯಿದೆಯಡಿ ಶಿಕ್ಷಿಸಲು ಅವಕಾಶವಿರುವುದಿಲ್ಲ.

ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಹಾಗೂ ನ್ಯಾ. ಕೃಷ್ಣ ಮರಾರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವರು ಈ ತೀರ್ಪು ನೀಡಿದೆ. ಈ ಕಾಯಿದೆಗೆ 2016ರಲ್ಲಿ ತರಲಾದ ತಿದ್ದುಪಡಿಗೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸೆಕ್ಷನ್ 3(2) ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ ಕೇಂದ್ರಕ್ಕೆ ಹಿನ್ನಡೆಯಾಗಿರುವ ಹಾಗಿದೆ.

2016ರ ನಂತರದಿಂದ ಮಾತ್ರವೇ ಈ ಕಾಯಿದೆ ಅನ್ವಯವಾಗುತ್ತದೆ. ಹಾಗಾಗಿ, ಕಾನೂನಿಗೆ ತಿದ್ದುಪಡಿ ತರುವುದಕ್ಕಿಂತಲೂ ಮುಂಚಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಎಲ್ಲ ಕ್ರಮಗಳು ತನ್ನಿಂದತಾನೇ ರದ್ದಾಗುತ್ತವೆ. ಈ ಸೆಕ್ಷನ್‌ಗೆ ಪೂರ್ವಾನ್ವಯದಂತೆ ಕ್ರಮಕೈಗೊಳ್ಳುವ ಸ್ವರೂಪಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠವು ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರವು 2016ರಲ್ಲಿ ಬೇನಾಮಿ ವ್ಯವಹಾರಗಳು(ನಿಷೇಧ) ಕಾಯಿದೆಗೆ ತಿದ್ದುಪಡಿ ತಂದಿತ್ತು ಮತ್ತು ಈ ತಿದ್ದುಪಡಿ ಕಾಯಿದೆಯು 2016ರ ನವೆಂಬರ್ 1ರಿಂದ ಜಾರಿಯಾಗಿತ್ತು. ಈ ಕಾಯಿದೆಯ ಅನುಸಾರ ಯಾವುದೆಲ್ಲ ಬೇನಮಿಯಾಗುತ್ತದೆ ಎಂದು ತಿಳಿಸಲಾಗಿತ್ತು. ಅದರಂತೆ, ನಕಲಿ ಹೆಸರಿನಲ್ಲಿ ಮಾಡಲಾದ ವ್ಯವಹಾರಗಳು, ಆಸ್ತಿಯ ಮೇಲಿನ ಒಡೆತನ ಹೊಂದಿರುವ ಬಗ್ಗೆ ಅರಿವು ಇಲ್ಲದಿರುವುದು ಎಂದು ಹೇಳುವುದು ಅಥವಾ ಆಸ್ತಿಯನ್ನು ಪತ್ತೆ ಹಚ್ಚಲಾಗುವುದಿಲ್ಲ ಎಂಬುದಕ್ಕೆ ವ್ಯಕ್ತಿಯು ಒಪ್ಪಿಗೆ ನೀಡುವುದು ಸೇರಿದಂತೆ ಇನ್ನಿತರ ಸಂಗತಿಗಳನ್ನು ಇದು ಹೊಂದಿತ್ತು.

ಇದನ್ನು ಓದಿ | Baba Ramdev | ವೈದ್ಯರು, ಅಲೋಪಥಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಹುಷಾರ್ ಎಂದ ಸುಪ್ರೀಂ ಕೋರ್ಟ್

Exit mobile version