Site icon Vistara News

ಪತ್ನಿಯ ಕತ್ತು ಸೀಳಿ ಕೊಂದ ಪತಿ; ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ‘ಫ್ರೆಂಡ್ಸ್‌’ ಇದ್ದಿದ್ದೇ ಕಾರಣ!

Social Media

Bengal Man Slits Wife's Throat, He Didn't Like Her Having Online Friends

ಕೋಲ್ಕೊತಾ: ಇದೇನಿದ್ದರೂ ಸಾಮಾಜಿಕ ಜಾಲತಾಣಗಳ (Social Media) ಯುಗ. ಅದರಲ್ಲೂ, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮೂಲಕ ಹೊಸ ಹೊಸ ಫ್ರೆಂಡ್ಸ್‌ ಹುಡುಕುವುದು, ಅಪರಿಚಿತರನ್ನು ಪರಿಚಯ ಮಾಡಿಕೊಳ್ಳುವುದು, ಪೋಸ್ಟ್‌, ರೀಲ್ಸ್‌ ಮೂಲಕ ಖ್ಯಾತಿ ಗಳಿಸುವುದು ಬಹುತೇಕರ ಜೀವನ ವಿಧಾನವೇ ಆಗಿದೆ. ಇದೇ ರೀತಿ ಯಾವಾಗಲೂ ‘ಆನ್‌ಲೈನ್‌ ಫ್ರೆಂಡ್ಸ್‌’ (Social Media Friends) ಜತೆಗೇ ಚಾಟ್‌ ಮಾಡುತ್ತಿದ್ದ, ಹೆಚ್ಚು ಫ್ರೆಂಡ್ಸ್‌ ಹೊಂದಿದ ಕಾರಣಕ್ಕಾಗಿ ಪಶ್ಚಿ ಮ ಬಂಗಾಳದಲ್ಲಿ (West Bengal) ಮಹಿಳೆಯೊಬ್ಬರು ಹತ್ಯೆಗೀಡಾಗಿದ್ದಾರೆ. ಪತಿಯೇ ಮಹಿಳೆಯ ಕತ್ತು ಸೀಳಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.

ಹೌದು, ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಹರಿನಾರಾಯಣಪುರದಲ್ಲಿ ಪತಿಯೇ ಪತ್ನಿಯ ಕತ್ತು ಸೀಳಿ ಕೊಂದಿದ್ದಾನೆ. ಪರಿಮಾಲ್‌ ಎಂಬ ವ್ಯಕ್ತಿಯು ತನ್ನ ಪತ್ನಿ ಅಪರ್ಣಾ ಬೈದ್ಯ ಅವರ ಕತ್ತು ಸೀಳಿ ಕೊಂದಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇತ್ತೀಚೆಗೆ, ಅಪರ್ಣಾ ಬೈದ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಯಾವಾಗಲೂ ಫೇಸ್‌ಬುಕ್‌ನಲ್ಲಿ ಮುಳುಗಿರಬೇಡ ಎಂದು ಪರಿಮಾಲ್‌ ಗದರಿದ್ದರು. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಕುಪಿತಗೊಂಡ ಪರಿಮಾಲ್‌, ಪತ್ನಿಯ ಕತ್ತು ಸೀಳಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.

ಪತ್ನಿಯನ್ನು ಕೊಂದ ಪರಿಮಾಲ್‌ ಪರಾರಿಯಾಗಿದ್ದಾನೆ. ಇವರಿಗೆ ಒಬ್ಬ ಪುತ್ರನಿದ್ದು, ಆತ ಮನೆಗೆ ಬಂದು ನೋಡಿದಾಗ ತಾಯಿಯು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ್ದಾನೆ. ಇದಾದ ಬಳಿಕ ಆತ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. “ನನ್ನ ತಂದೆ-ತಾಯಿ ಯಾವಾಗಲೂ ಜಗಳ ಆಡುತ್ತಿದ್ದರು. ನಾನು ಮನೆಗೆ ಬಂದು ನೋಡಿದಾಗ ನನ್ನ ತಾಯಿ ನೆಲದ ಮೇಲೆ ಬಿದ್ದಿದ್ದರು” ಎಂದು ಪುಟ್ಟ ಬಾಲಕನು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ: ಡೇಟಿಂಗ್‌ ಆ್ಯಪ್‌ನಲ್ಲಿ ಪ್ರಿಯತಮೆಯ ಹುಡುಕಿದ ‘ದುಷ್ಯಂತ’; ಸಿಗಲಿಲ್ಲ ಶಕುಂತಲೆ, ಆಗಿದ್ದು ಆತನ ಕೊಲೆ!

“ಕೆಲ ದಿನಗಳಿಂದ 32 ವರ್ಷದ ಅಪರ್ಣಾ ಬೈದ್ಯ ಅವರು ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುತ್ತಿದ್ದರು. ಅವರು ಆನ್‌ಲೈನ್‌ನಲ್ಲಿ ಅಪರಿಚಿತರನ್ನು ಪರಿಚಯ ಮಾಡಿಕೊಂಡಿದ್ದರು. ಇದು ಪರಿಮಾಲ್‌ಗೆ ಸಹ್ಯ ಎನಿಸಿಲ್ಲ. ಇದರಿಂದ ಇಬ್ಬರ ಮಧ್ಯೆ ಜಗಳ ನಡೆದಿದೆ. ಕೋಪಗೊಂಡಿದ್ದ ಪರಿಮಾಲ್‌, ಹೆಂಡತಿಯ ಕತ್ತು ಸೀಳಿ ಕೊಂದಿರುವ ಶಂಕೆ ಇದೆ” ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪರಾರಿಯಾಗಿರುವ ಪರಿಮಾಲ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಸಂಗತಿ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್‌ ಮೂಲಕ ತಿಳಿಸಿ

Exit mobile version