ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ, ಕೊಲೆ ಮಧ್ಯೆಯೇ ಸ್ಥಳೀಯ ಸಂಸ್ಥೆ ಚುನಾವಣೆ (Bengal Panchayat Polls) ಮುಗಿದಿದೆ. 63,229 ಒಟ್ಟು ಸೀಟುಗಳ ಪೈಕಿ ತೃಣಮೂಲ ಕಾಂಗ್ರೆಸ್ ಒಟ್ಟು 34,901 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಭಾರತೀಯ ಜನತಾ ಪಾರ್ಟಿ (BJP) 9,719 ಕ್ಷೇತ್ರ ಗೆದ್ದಿದೆ. ಫಲಿತಾಂಶದ ಬಳಿಕವೂ ಹಿಂಸಾಚಾರ ನಡೆದಿದ್ದು, ಮೂವರ ಹತ್ಯೆಯಾಗಿದೆ. ಇದರ ಬೆನ್ನಲ್ಲೇ, ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶಕ್ಕೆ ಹೊಸ ತಿರುವು ಸಿಕ್ಕಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 344 ಕ್ಷೇತ್ರಗಳ ಫಲಿತಾಂಶವು ಟಾಸ್ ಮೂಲಕವೇ ನಿರ್ಧಾರವಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹೌದು, “ಚುನಾವಣೆ ಮೂಲಗಳ ಪ್ರಕಾರ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದ ವೇಳೆ ಹೆಚ್ಚಿನ ಅಭ್ಯರ್ಥಿಗಳ ಮತಗಳು ಸಮ ಆಗಿವೆ. ಆಗ, ಅಭ್ಯರ್ಥಿಗಳ ಗೆಲುವನ್ನು ನಿರ್ಧರಿಸಲು ಟಾಸ್ ಮಾಡಲಾಗಿದೆ. ಟಾಸ್ ಗೆದ್ದವರು ಗೆಲುವು ಸಾಧಿಸಿದ ಅಭ್ಯರ್ಥಿ ಎಂಬುದಾಗಿ ಘೋಷಿಸಲಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದಾಗ್ಯೂ, ಪಶ್ಚಿಮ ಬಂಗಾಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಫಲಿತಾಂಶವನ್ನು ಇನ್ನೂ ಚುನಾವಣೆ ಆಯೋಗ ಪ್ರಕಟಿಸಿಲ್ಲ.
ಚುನಾವಣೆ ಫಲಿತಾಂಶವನ್ನು ಟಾಸ್ ಮೂಲಕ ನಿರ್ಧರಿಸಿರುವ ಕುರಿತು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಚುನಾವಣೆಯಲ್ಲಿ ಇಂತಹ ಮಾರ್ಗದಿಂದ ಟಿಎಂಸಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಿಂಸಾಚಾರ, ಮೋಸ, ಪೊಲೀಸರನ್ನು ಬಳಸಿಕೊಂಡು ಗೆಲುವು ಸಾಧಿಸಿದೆ. ಚುನಾವಣೆ ಅಧಿಕಾರಿಯ ಮೇಲೆ ಒತ್ತಡ ಹೇರಿ, ಅನ್ಯ ಮಾರ್ಗದಿಂದ ಮುನ್ನಡೆ ಪಡೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಪಂಚಾಯ್ತಿ ಎಲೆಕ್ಷನ್‌ನಲ್ಲಿ ಟಿಎಂಸಿಗೆ ಭರ್ಜರಿ ಜಯ! ಆದ್ರೆ ಕಂಡಿಷನ್ಸ್ ಅಪ್ಲೈ ಎಂದ ಹೈಕೋರ್ಟ್
ಕಾನೂನು ಹೇಳುವುದೇನು?
1975ರ ಪಶ್ಚಿಮ ಬಂಗಾಳ ಕಾಯ್ದೆ ನಿಯಮ 3, ಉಪ ನಿಯಮ 7ರ ಪ್ರಕಾರ, ಪಂಚಾಯಿತಿ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಪಡೆದ ಮತಗಳ ಸಂಖ್ಯೆ ಒಂದೇ ಆದರೆ, ಚುನಾವಣೆ ಅಧಿಕಾರಿಯು ಸಮಂಜಸ ತೀರ್ಮಾನ ತೆಗೆದುಕೊಂಡು ವಿಜೇತರನ್ನು ಘೋಷಣೆ ಮಾಡಬಹುದು ಎಂದು ತಿಳಿದುಬಂದಿದೆ. ಹಾಗಾಗಿ, ಚುನಾವಣೆ ಅಧಿಕಾರಿಯು ನಾಣ್ಯ ಎಸೆದು, ಟಾಸ್ ಮೂಲಕ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ (ಪ್ರಧಾನ್) ಹಾಗೂ ಉಪಾಧ್ಯಕ್ಷ (ಉಪ ಪ್ರಧಾನ್)ರನ್ನು ಕೂಡ ಇದೇ ಮಾರ್ಗದಿಂದ ಆಯ್ಕೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.