Site icon Vistara News

ಬಫೆಟ್ ಮಾರ್ಕೆಟಿಂಗ್ ಮಂತ್ರ, ಬೆಂಗಳೂರಿನ ತಳ್ಳುವ ಗಾಡಿಯ ಕಡಲೆಕಾಯಿ ಮಾರಾಟಗಾರನಿಗೂ ತಂತ್ರ!

Bengaluru Peanut vendor inspired by warren Buffett marking mantra

ಬೆಂಗಳೂರು: ಅಮೆರಿಕದ (American Investor) ಖ್ಯಾತ ಹೂಡಿಕೆದಾರ ವಾರೆನ್‌ ಬಫೆಟ್ (Warren Buffett) ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಾಪಾರಿಗೆ ಹೇಗೆಲ್ಲ ಸ್ಫೂರ್ತಿಯಾಗುತ್ತಾರೆಂದು ಹೇಳಲಾಗುವುದು. ಬೆಂಗಳೂರಿನ ಬೀದಿಯಲ್ಲಿ ತಳ್ಳುವ ಗಾಡಿಯಲ್ಲಿ ಕಡಲೆಕಾಯಿ ಮಾರಾಟ ಮಾಡುವ ವ್ಯಕ್ತಿಗೂ (Bengaluru Peanut vendor) ಬಫೆಟ್ ಹೇಳುವ ಮಾತುಗಳು ಸ್ಫೂರ್ತಿ ತುಂಬುತ್ತವೆ ಎಂದರೆ ನಂಬಲೇಬೇಕು. ಬೆಂಗಳೂರು ನಗರವು ಅದರ ತಾಂತ್ರಿಕ ಜ್ಞಾನ ಮತ್ತು ವಿವಿಧ ವಿಷಯಗಳಿಗೆ ಚಮತ್ಕಾರಿ ವಿಧಾನಕ್ಕೆ ಹೆಸರುವಾಸಿ. ಇಲ್ಲಿನ ನೆಟಿಜನ್‌ಗಳು ಸಾಮಾನ್ಯವಾಗಿ ನಗರದಲ್ಲಿ ತಾವು ಕಂಡ ವಿಶಿಷ್ಟವಾದದ್ದನ್ನು ಹಂಚಿಕೊಳ್ಳುತ್ತಾರೆ. ಈಗ ಅಂಥದ್ದೇ ಸಾಲಿನಲ್ಲಿ ಈ ಕಡಲೆಕಾಯಿ ಮಾರಾಟಗಾರ ಕೂಡ ಬೆಳಕಿಗೆ ಬಂದಿದ್ದಾನೆ.

ಒಬ್ಬ ಎಕ್ಸ್ ಬಳಕೆದಾರ (@vishnubogi) ಬೀದಿಬದಿ ವ್ಯಾಪಾರಿಯೊಬ್ಬ ಕಡಲೆಕಾಯಿ ಮಾರುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾನೆ. ಈ ಕಡಲೆಕಾಯಿ ಮಾರಾಟಗಾರ ಮಾರ್ಕೆಟಿಂಗ್ ಕೌಶಲ್ಯವೇ ಈ ಫೋಸ್ಟ್ ಹಂಚಿಕೊಳ್ಳಲು ಕಾರಣವಾಗಿದೆ. ಬಹಳಷ್ಟು ಬೀದಿ ಮಾರಾಟಗಾರರು ಗ್ರಾಹಕರನ್ನು ಆಕರ್ಷಿಸಲು ಕೆಲವು ಹಾಸ್ಯದ ಸಾಲುಗಳನ್ನು ಮಾತನಾಡುವಂತಹ ವಿಭಿನ್ನ ಮಾರ್ಗಗಳನ್ನು ಅಳವಡಿಸಿಕೊಂಡರೆ, ಈ ಮಾರಾಟಗಾರ ಸ್ವಲ್ಪ ಅತ್ಯಾಧುನಿಕ ಮಾರ್ಗವನ್ನು ಅನುಸರಿಸಿದ್ದಾರೆ.

ಕಡಲೆಕಾಯಿ ಮಾರಾಟಗಾರನು ತನ್ನ ತಳ್ಳುವ ಗಾಡಿಯಲ್ಲಿ ಎರಡು ಪೋಸ್ಟರ್‌ಗಳನ್ನು ಹಾಕಿಕೊಂಡಿದ್ದಾರೆ. ಅದರಲ್ಲಿ ಒಂದು ಅಮೆರಿಕನ್ ಉದ್ಯಮಿ ಮತ್ತು ಹೂಡಿಕೆದಾರ ವಾರೆನ್ ಬಫೆಟ್‌ನ ಪ್ರಸಿದ್ಧ ಉಲ್ಲೇಖವನ್ನು ಕಾಣಬಹುದು. ಅವರು ಬಫೆಟ್ ಅವರ ಎರಡು ನಿಯಮಗಳನ್ನು ಬರೆದುಕೊಂಡು ಅಂಟಿಸಿದ್ದಾರೆ. ಮೊದಲನೆಯದು “ಗ್ರಾಹಕರನ್ನು ಎಂದಿಗೂ ಕಳೆದುಕೊಳ್ಳಬೇಡಿ”. ಎರಡನೆಯ ನಿಯಮವೆಂದರೆ, ಮೊದಲನೆ ನಿಯಮವನ್ನು ಎಂದಿಗೂ ಮರೆಯಬೇಡಿ!

ಇನ್ನೊಂದು ಪೋಸ್ಟರ್‌ನಲ್ಲಿ, ಕಡಲೆಕಾಯಿಯ ಪೌಷ್ಟಿಕಾಂಶದ ಮೌಲ್ಯ, ಪ್ರೋಟೀನ್, ಕೊಬ್ಬುಗಳು, ಫೈಬರ್, ವಿಟಮಿನ್ ಇ ಮತ್ತು ಬಿ, ಖನಿಜಗಳು ಮತ್ತು ಹೃದ್ರೋಗಗಳನ್ನು ತಡೆಗಟ್ಟುವ ಪ್ರಯೋಜನಗಳನ್ನು ಅವರು ಪಟ್ಟಿ ಮಾಡಿದ್ದಾರೆ.

ಇದೇ ರೀತಿಯ ಮತ್ತೊಂದು ಘಟನೆಯನ್ನು ನೆಟ್ಟಿಗರೊಬ್ಬರು ಸೋಷಿಯಲ್ ಮೀಡಿಯಾ ಹಂಚಿಕೊಂಡಿದ್ದರು. ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಆಟೋರಿಕ್ಷಾವನ್ನು ಬಾಡಿಗೆ ಪಡೆದುಕೊಂಡಿದ್ದರು. ಈ ವೇಳೆ, ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಹೊಸ ದಾರಿಯನ್ನು ಕಂಡುಕೊಂಡಿದ್ದರು. ಆಟೋ ಚಾಲಕ, ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಆಟೋ ಮೇಲೆ ಬರೆಯಿಸಿದ್ದರು. ಚಾಲಕನ ಈ ಮಾರ್ಕೆಟಿಂಗ್ ತಂತ್ರವನ್ನು ಕಂಡು ನೆಟ್ಟಿಗ ಪ್ರಭಾವಿತರಾಗಿದ್ದರು.

ಗ್ರೋತ್‌ಎಕ್ಸ್‌ನ ಸಂಸ್ಥಾಪಕ ಉದಯನ್, ಆಟೋರಿಕ್ಷಾದ ಒಳಗಿನಿಂದ ಚಾಲಕನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ಮುಂಭಾಗದಲ್ಲಿ ಮುದ್ರಿಸಿದ ಫೋಟೋವನ್ನು ಹಂಚಿಕೊಂಡಿದ್ದರು. ರಿಕ್ಷಾ ಚಾಲಕನು ತನ್ನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಮತ್ತು ಅವನನ್ನು ಟ್ಯಾಗ್ ಮಾಡಲು ಬಯಸುತ್ತಾನೆ ಎಂದು ಅವರು ತಿಳಿಸಿದ್ದರು. ಜನರು ಕೆಲಸಕ್ಕೆ ಹೋಗುವಾಗ ರಿಕ್ಷಾ ಸವಾರಿಯ ಫೋಟೋಗಳನ್ನು ಪೋಸ್ಟ್ ಮಾಡುವುದು ಸಹಜ ಎಂದು ಚಾಲಕ ಹೇಳಿಕೊಂಡಿದ್ದಾನೆ. ಸಿಲಿಕಾನ್ ಸಿಟಿಯಲ್ಲಿ ಹೇಗೆ ಜನರು ಹೊಸ ಹೊಸ ಮಾರ್ಕೆಟಿಂಗ್ ತಂತ್ರಗಳನ್ನು ಕಂಡುಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆಗಳು ಸಾಕ್ಷಿಯಾಗಿವೆ.

ಈ ಸುದ್ದಿಯನ್ನೂ ಓದಿ: Warren Buffet : ಹೂಡಿಕೆದಾರರು ದೀರ್ಘಕಾಲೀನ ಭವಿಷ್ಯದ ಬಗ್ಗೆ ಭರವಸೆ ಇಡಬೇಕು: ವಾರೆನ್‌ ಬಫೆಟ್‌ ಸಲಹೆ

Exit mobile version