ನವ ದೆಹಲಿ: ಮುಂಬರುವ ಸಾರ್ವತ್ರಿಕ ಚುನಾವಣೆ ಹಾಗೂ ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನವರಿ 15-25 ರ ನಡುವೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುವ (Union cabinet reshuffle ) ನಿರೀಕ್ಷೆ ಇದೆ.
ಗುಜರಾತ್, ಹಿಮಾಚಲಪ್ರದೇಶ, ದಿಲ್ಲಿ ಪಾಲಿಕೆ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಕೆಲವು ಹಿರಿಯ ಸಚಿವರನ್ನು ಬದಲಿಸುವ ಸಾಧ್ಯತೆ ಇದೆ. ದಿಲ್ಲಿ ಪಾಲಿಕೆ ಚುನಾವಣೆಯ ಫಲಿತಾಂಶ ಹೈಕಮಾಂಡ್‌ಗೆ ತೃಪ್ತಿ ತಂದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ವರ್ಷ 9 ರಾಜ್ಯಗಳು ಚುನಾವಣೆ ಎದುರಿಸುತ್ತಿವೆ. ಅವುಗಳೆಂದರೆ ಕರ್ನಾಟಕ, ಛತ್ತೀಸ್‌ಗಢ, ತ್ರಿಪುರಾ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ.
ರಾಜಕೀಯ ಲೆಕ್ಕಾಚಾರದಂತೆ, ಚುನಾವಣೆಯ ಹೊಸ್ತಿಲಿನಲ್ಲಿರುವ ರಾಜ್ಯಗಳಿಗೆ ಆದ್ಯತೆ ಸಿಗುವ ಸಾಧ್ಯತೆ ಇದೆ. ಸಂಪುಟ ಪುನಾರಚನೆ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಕೆಲ ಸಚಿವರಿಗೆ ರೋಟೇಶನ್ ಆಧಾರದಲ್ಲಿ ಬೇರೆ ಖಾತೆಗಳ ಹಂಚಿಕೆ ಆಗುವ ಸಾಧ್ಯತೆಗಳಿವೆ. ಈಗಾಗಲೇ ಹಲವು ಸಚಿವರ ಮೌಲ್ಯಮಾಪನ ಮಾಡಲಾಗಿದ್ದು, ಒಂದಿಷ್ಟು ಬದಲಾವಣೆ ಸಾಧ್ಯ. ಕರ್ನಾಟಕದ ಕೆಲ ಹೊಸ ಮುಖಗಳಿಗೆ ಅವಕಾಶ ನೀಡಬಹುದು ಎನ್ನಲಾಗಿದೆ
ಸದ್ಯ ರಾಜ್ಯದಿಂದ ಆಯ್ಕೆಯಾಗಿರುವ ಭಗವಂತ ಖುಬಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸೇರಿ 6 ಮಂದಿ ಕೇಂದ್ರ ಸಚಿವರಾಗಿದ್ದಾರೆ. ಚುನಾವಣೆಯ ಸ್ಟಾರ್ ಪ್ರಚಾರಕರು, ಉತ್ತಮ ಸಾಧನೆ ದಾಖಲಿಸಿರುವ ಸಂಸದರು ಮೋದಿ ಕ್ಯಾಬಿನೆಟ್‌ಗೆ ಸೇರುವ ಸಾಧ್ಯತೆ ಇದೆ. ಮಹಿಳೆಯರಿಗೂ ಹೆಚ್ಚಿನ ಪ್ರಾತಿನಿಧ್ಯ ನೀಡಲು ಚಿಂತನೆ ನಡೆದಿದೆ ಎನ್ನಲಾಗಿದೆ.