Site icon Vistara News

ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ್ದೂ ‘ಜಿಹಾದ್​’; ವಿವಾದ ಹುಟ್ಟುಹಾಕಿದ ಕಾಂಗ್ರೆಸ್​ ಹಿರಿಯ ನಾಯಕ

Shivaraj Patil

ನವ ದೆಹಲಿ: ಲಕ್ಷ್ಮೀದೇವಿಯನ್ನು ಪೂಜಿಸಿದರೆ ಮಾತ್ರ ಶ್ರೀಮಂತರಾಗುತ್ತಾರೆ, ಸರಸ್ವತಿಯನ್ನು ಆರಾಧಿಸಿದರೆ ಮಾತ್ರ ವಿದ್ಯೆ ಒಲಿಯುತ್ತದೆ ಎಂದಾಗಿದ್ದರೆ, ಮುಸ್ಲಿಮರು ಹೇಗೆ ಶ್ರೀಮಂತರಾಗುತ್ತಿದ್ದರು? ವಿದ್ವಾಂಸರಾಗುತ್ತಿದ್ದರು? ಮುಸ್ಲಿಮರು ಯಾರೂ ಲಕ್ಷ್ಮೀ, ಸರಸ್ವತಿ ಪೂಜೆ ಮಾಡುವುದಿಲ್ಲ. ಹಾಗಿದ್ದರೂ ಅವರಲ್ಲಿ ಸಿರಿವಂತರು, ಪಂಡಿತರು ಇಲ್ಲವೇ? ಎಂದು ಬಿಜೆಪಿ ಶಾಸಕ ಲಲನ್​ ಪಾಸ್ವಾನ್​ ಪ್ರಶ್ನೆ ಮಾಡಿ ವಿವಾದ ಸೃಷ್ಟಿಸಿದ್ದರು.

ಈಗ ಕಾಂಗ್ರೆಸ್​ ಹಿರಿಯ ನಾಯಕ ಶಿವರಾಜ್​ ಪಾಟೀಲ್​ ಕೂಡ ಅಂಥದ್ದೆ ಒಂದು ವಿತಂಡವಾದ ಮುಂದಿಟ್ಟಿದ್ದಾರೆ. ‘ಜಿಹಾದ್​’ ಪರಿಕಲ್ಪನೆ ಇರುವುದು ಕೇವಲ ಇಸ್ಲಾಂನಲ್ಲಷ್ಟೇ ಅಲ್ಲ. ಹಿಂದುಗಳ ಭಗವದ್ಗೀತೆ, ಕ್ರಿಶ್ಚಿಯನ್​​​ರಲ್ಲೂ ಇದೆ. ಆಗ ಮಹಾಭಾರತದಲ್ಲಿ ಅರ್ಜುನನಿಗೆ ಕೃಷ್ಣಪರಮಾತ್ಮ ಬೋಧನೆ ಮಾಡಿದ್ದೂ ಕೂಡ ‘ಜಿಹಾದ್​’ ಅಲ್ಲವೇ? ಎಂದು ಕೇಳಿದ್ದಾರೆ.

ಕಾಂಗ್ರೆಸ್​ ನಾಯಕ, ಮಾಜಿ ಕೇಂದ್ರ ಸಚಿವ ಮೋಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆಯನ್ನೊಳಗೊಂಡ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಿವರಾಜ್​ ಪಾಟೀಲ್, ‘ಮುಸ್ಲಿಮರ ಜಿಹಾದ್​​ ಬಗ್ಗೆ ಅನೇಕರೀತಿಯ ಚರ್ಚೆಗಳು ನಡೆಯುತ್ತಿವೆ. ಆದರೆ ಜಿಹಾದ್​ ಎಲ್ಲ ಕಡೆಗಳಲ್ಲೂ ಇದೆ. ಕೇವಲ ಇಸ್ಲಾಂನಲ್ಲಿ ಮಾತ್ರವಲ್ಲ. ಯಾವಾಗ ನಮ್ಮ ಆಶಯ, ಕಾಯಕಗಳು ಎಲ್ಲ ಸರಿಯಾಗಿಯೇ ಇದ್ದರೂ ಅದನ್ನು ಯಾರೂ ಅರ್ಥ ಮಾಡಿಕೊಳ್ಳದೆ, ನಮಗೆ ಸಹಕಾರ ನೀಡುವುದಿಲ್ಲವೋ, ಆಗ ಸಹಜವಾಗಿಯೇ ಅಲ್ಲಿ ಬಲಪ್ರದರ್ಶನ ಆಗುತ್ತದೆ. ಅದೇ ಹೋರಾಟ, ಜಿಹಾದ್​ ಎನ್ನಿಸಿಕೊಳ್ಳುತ್ತದೆ. ಹಾಗಾಗಿ ಜಿಹಾದ್​ ಇಸ್ಲಾಂನಲ್ಲಿ ಮಾತ್ರವಿದೆ ಎಂದುಕೊಳ್ಳಬಾರದು. ಭಗವದ್ಗೀತೆಯಲ್ಲೂ ಹೇಳಿದ್ದು ಜಿಹಾದ್​..ಕ್ರಿಶ್ಚಿಯನ್ ಧರ್ಮದಲ್ಲೂ ಜಿಹಾದ್​ ಇದೆ’ ಎಂದು ಶಿವರಾಜ್​ ಪಾಟೀಲ್​ ತಿಳಿಸಿದ್ದಾರೆ.

ಶಿವರಾಜ್​ ಪಾಟೀಲ್ ಈ ಮಾತಿಗೆ ಬಿಜೆಪಿ ತಿರುಗೇಟು ಕೊಟ್ಟಿದೆ. ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಶೆಹಜಾದ್​ ಪೂನಾವಾಲಾ, ‘ಕಾಂಗ್ರೆಸ್​​ನದ್ದು ಹಿಂದು ವಿರೋಧಿ ಮತ್ತು ಮತಬ್ಯಾಂಕ್​ ರಾಜಕಾರಣ’ ಎಂದು ಹೇಳಿದ್ದಾರೆ. ಹಾಗೇ, ‘ಕಾಂಗ್ರೆಸ್ ಹಿಂದು/ಕೇಸರಿ ಭಯೋತ್ಪಾದನೆ ಸೃಷ್ಟಿಸಿತು. ರಾಮಮಂದಿರ ನಿರ್ಮಾಣವನ್ನು ವಿರೋಧಿಸಿತು. ಭಗವಂತ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿತು. ಹಿಂದುತ್ವವನ್ನು ಐಸಿಸ್​ಗೆ ಹೋಲಿಸಿತು ಎಂದು ಅವರು ಆಕ್ರೋಶಭರಿತರಾಗಿ ಟ್ವೀಟ್ ಮಾಡಿದ್ದಾರೆ.

ಪಾಟೀಲ್ ಸಮರ್ಥನೆ !
ತಮ್ಮ ಮಾತುಗಳಿಂದ ವಿವಾದ ಸೃಷ್ಟಿಯಾಗುತ್ತಿದೆ ಎಂಬುದನ್ನು ಅರಿತ ಶಿವರಾಜ್​ ಪಾಟೀಲ್​ ಸಮರ್ಥನೆ ನೀಡಲು ಮುಂದಾಗಿದ್ದಾರೆ. ‘ಕೃಷ್ಣ ಅರ್ಜುನನಿಗೆ ಬೋಧಿಸಿದ್ದು ಜಿಹಾದ್ ಎಂದು ನಾನು ಹೇಳಿಲ್ಲ. ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಬೋಧಿಸಿದ ವಿಚಾರಗಳನ್ನು ಜಿಹಾದ್​ ಎಂದು ಕರೆಯಲು ಸಾಧ್ಯವಿಲ್ಲ ಎಂದೇ ನಾನು ಹೇಳಿದ್ದೆ. ಅದನ್ನು ನೀವು ತಿರುಚಿದ್ದೀರಿ’ ಎಂದು ಮಾಧ್ಯಮದವರಿಗೇ ತಿರುಗಿ ಹೇಳಿದ್ದಾರೆ.

ಇದನ್ನೂ ಓದಿ: ಲಕ್ಷ್ಮಿ ದೇವಿಯನ್ನು ಪೂಜಿಸದ ಮುಸ್ಲಿಮರಲ್ಲೂ ಶ್ರೀಮಂತರಿದ್ದಾರೆ; ಹಿಂದುಗಳ ನಂಬಿಕೆಗೆ ಬಿಜೆಪಿ ಶಾಸಕನಿಂದ ಅಪಮಾನ

Exit mobile version