ನವದೆಹಲಿ: “ಭಾರತವು 5 ಸಾವಿರ ವರ್ಷಗಳಿಂದಲೂ ಜಾತ್ಯತೀತ ದೇಶವಾಗಿದೆ. ಇದೇ ಒಗ್ಗಟ್ಟನ್ನು ನಾವು ಮುಂದೆಯೂ ಪ್ರದರ್ಶಿಸಬೇಕಿದೆ. ಆ ಮೂಲಕ ಜಗತ್ತಿಗೆ ಭಾರತ ಮಾದರಿಯಾಗಬೇಕಿದೆ” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಕರೆ ನೀಡಿದ್ದಾರೆ. ಆರ್‌ಎಸ್‌ಎಸ್ ನಾಯಕ ರಂಗ ಹರಿ ಬರೆದಿರುವ “ಪೃಥ್ವಿ ಸೂಕ್ತ-ಆ್ಯನ್ ಓಡ್ ಟು ಮದರ್ ಅರ್ತ್” (Prithvi Sookta – An Ode To Mother Earth) ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು. ಇದೇ ವೇಳೆ ಅವರು ಜಾತ್ಯತೀತ ರಾಷ್ಟ್ರದ ಬಗ್ಗೆಯೂ ಮಾತನಾಡಿದರು. ಹಾಗೆಯೇ, “ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿಲ್ಲ. ಏಕತೆಯಲ್ಲೂ ವಿವಿಧತೆ ಹೊಂದಿದೆ” ಎಂದರು.
“ಭಾರತವು ಕಳೆದ 5 ಸಾವಿರ ವರ್ಷದಿಂದ ಒಗ್ಗಟ್ಟಿನಿಂದ ಇದೆ. ಜಗತ್ತಿಗೆ ಏಕತೆಯ ಸಂದೇಶವನ್ನು ರವಾನಿಸಿದೆ. ಜಾತ್ಯತೀತ ಮನೋಭಾವನೆಯೇ 5 ಸಾವಿರ ವರ್ಷದ ನಮ್ಮ ಸಂಸ್ಕೃತಿಯಾಗಿದೆ. ಜಗತ್ತೇ ಒಂದು ಕುಟುಂಬ ಎಂಬುದು ನಮ್ಮ ತತ್ವಜ್ಞಾನದ ಸಾರವಾಗಿದೆ. ಇದು ಕೇವಲ ಸಿದ್ಧಾಂತವಲ್ಲ. ನಾವು ಪ್ರಾಯೋಗಿಕವಾಗಿ ಅನುಸರಿಸಿಕೊಂಡು ಬಂದಿರುವ, ಜಗತ್ತಿಗೆ ಒಗ್ಗಟ್ಟಿನ ಸಂದೇಶ ಸಾರಿರುವ ದೇಶವಾಗಿದೆ” ಎಂದು ಹೇಳಿದರು.
#WATCH | Delhi: RSS chief Mohan Bhagwat says, "…Bharat ko duniya ko batana hoga ki vividhata mein ekta nahi, ekta ki he vividhata hai…" pic.twitter.com/IFTGCsku4H
— ANI (@ANI) October 11, 2023
“ದೇಶದಲ್ಲಿ ತುಂಬ ವೈವಿಧ್ಯತೆ ಇದೆ. ಹಾಗಾಗಿ, ಯಾರೂ ಕೂಡ ಪರಸ್ಪರ ಸಂಘರ್ಷಕ್ಕೆ ಇಳಿಯಬಾರದು. ನಮ್ಮ ದೇಶವು ಜಗತ್ತಿಗೇ ಬೋಧನೆ ಮಾಡುವ, ಪ್ರಬುದ್ಧತೆಯ ಸಂದೇಶ ರವಾನಿಸುವ ದೇಶವಾಗಬೇಕು. ಇದೇ ಭಾರತದ ಅಸ್ತಿತ್ವದ ಮೂಲ ಸತ್ವವಾಗಿದೆ. ಭಾರತದ ಸನ್ಯಾಸಿಗಳು, ಸಂತರು ಕೂಡ ಇದನ್ನೇ ಬೋಧಿಸಿದ್ದಾರೆ. ಜಗತ್ತು ಜ್ಞಾನದ ಮೂಲಕ ಬೆಳಗಬೇಕು ಹಾಗೂ ದೇಶದ ಕೊನೆಯ ಪ್ರಜೆಗೂ ಶಿಕ್ಷಣ ದೊರೆಯಬೇಕು ಎಂಬುದು ಅವರ ಮಹೋನ್ನತ ಉದ್ದೇಶವಾಗಿತ್ತು” ಎಂದು ತಿಳಿಸಿದರು.
ಮೀಸಲಾತಿ ಬೆಂಬಲಿಸಿದ್ದ ಭಾಗವತ್
ಮೋಹನ್ ಭಾಗವತ್ ಅವರು ಕೆಲ ದಿನಗಳ ಹಿಂದಷ್ಟೇ ಮೀಸಲಾತಿ ಪರ ಮಾತನಾಡಿದ್ದರು. “ಸಮಾಜದಲ್ಲಿ ತಾರತಮ್ಯ ಇರುವವರೆಗೆ ಮೀಸಲಾತಿ ಮುಂದುವರಿಯಬೇಕು. ಅಲ್ಲಿಯವರೆಗೆ ಸಂವಿಧಾನ ನೀಡಿರುವ ಮೀಸಲಾತಿಯನ್ನು ನಾವು ಬೆಂಬಲಿಸುತ್ತೇವೆ” ಎಂದು ಅವರು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ಇದನ್ನೂ ಓದಿ: Mohan Bhagwat: ಮೀಸಲಾತಿಯನ್ನು ಬೆಂಬಲಿಸಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್; ಅವರು ಹೇಳಿದ್ದಿಷ್ಟು
“ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮವರನ್ನೇ ನಾವು ಹಿಂದೆ ತಳ್ಳಿದ್ದೇವೆ. ನಾವು ಅವರ ಬಗ್ಗೆ ಕಾಳಜಿ, ಮಾನವೀಯತೆ ತೋರಲಿಲ್ಲ. ಇದನ್ನೇ ನಾವು 2 ಸಾವಿರ ವರ್ಷಗಳವರೆಗೆ ಮಾಡಿದೆವು. ನಾವು ಅವರಿಗೆ ಸಮಾನತೆ ನೀಡುವವರೆಗೆ, ತಾರತಮ್ಯ ತೊಲಗುವವರೆಗೆ ಮೀಸಲಾತಿ ಮುಂದುವರಿಯಬೇಕು. ಅವರಿಗೆ ಸಮಾನತೆ ಸಿಗುವವರೆಗೆ ಆರ್‌ಎಸ್‌ಎಸ್ ಮೀಸಲಾತಿಯನ್ನು ಬೆಂಬಲಿಸುತ್ತದೆ” ಎಂದಿದ್ದರು.