Site icon Vistara News

Bharat Jodo Nayay Yatra: ರಾಹುಲ್‌ ಗಾಂಧಿ ಸುರಕ್ಷತೆ ಬಗ್ಗೆ ಖರ್ಗೆ ಕಳವಳ; ಅಮಿತ್‌ ಶಾಗೆ ಬರೆದ ಪತ್ರದಲ್ಲಿ ಏನಿದೆ?

kharge

ಗುವಾಹಟಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ (Bharat Jodo Nayay Yatra) ಪ್ರಸ್ತುತ ಅಸ್ಸಾಂಗೆ ಪ್ರವೇಶಿಸಿದೆ. ಈ ವೇಳೆ ರಾಹುಲ್ ಗಾಂಧಿ ಎದುರಿಸುತ್ತಿರುವ ಭದ್ರತಾ ಲೋಪಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?

ಜನವರಿ 22ರಂದು ನಡೆದ ಘಟನೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಉಲ್ಲೇಖಿಸಿದ್ದಾರೆ. ʼಅಂದು ನಾಗಾಂವ್‌ ಜಿಲ್ಲೆಯ ನಡೆದ ಯಾತ್ರೆಯ ವೇಳೆ ಬಿಜೆಪಿ ಕಾರ್ಯಕರ್ತರು ರಾಹುಲ್‌ ಗಾಂಧಿ ಅವರ ಬೆಂಗಾವಲು ಪಡೆ ವಾಹನಕ್ಕೆ ಅಡ್ಡಿ ಪಡಿಸಿದರು. ರಾಹುಲ್‌ ಗಾಂಧಿ ಸಮೀಪಕ್ಕೆ ಬಂದು ಘೋಷಣೆ ಕೂಗಿದರುʼ ಎಂದು ಖರ್ಗೆ ತಿಳಿಸಿದ್ದಾರೆ. ʼಈ ವೇಳೆ ಅಸ್ಸಾಂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ನಿಂತಿದ್ದರು. ಅಲ್ಲದೆ ಕೆಲವು ಬಾರಿ ಬಿಜೆಪಿ ಕಾರ್ಯಕರ್ತರು ಬೆಂಗಾವಲು ಪಡೆ ಸಮೀಪಕ್ಕೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೂಲಕ ಭದ್ರತೆಗೆ ಅಪಾಯವನ್ನುಂಟು ಮಾಡಿದ್ದಾರೆʼ ಎಂದು ಖರ್ಗೆ ಆರೋಪಿಸಿದ್ದಾರೆ.

ʼಸಾಕಷ್ಟು ಪುರಾವೆಗಳಿದ್ದರೂ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಅಥವಾ ಅನೇಕ ಸಂದರ್ಭಗಳಲ್ಲಿ ತನಿಖೆಯನ್ನೂ ನಡೆಸಿಲ್ಲʼ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ʼಅಪಾಯ ಹೆಚ್ಚಾದಂತೆ ಮತ್ತು ಯಾತ್ರೆಯು ಮುಂದುವರಿಯುತ್ತಿದ್ದಂತೆ ಅಸ್ಸಾಂ ಮುಖ್ಯಮಂತ್ರಿ ಸಿಎಂ ಹಿಮಂತ್ ಬಿಸ್ವ ಶರ್ಮಾ ಮತ್ತು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರು ರಾಹುಲ್ ಗಾಂಧಿ ಮತ್ತು ಅವರ ತಂಡದ ಸುರಕ್ಷತೆ ಖಚಿತ ಪಡಿಸಿಕೊಳ್ಳಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ರ ಕ್ರಮ ಕೈಗೊಳ್ಳಲು ನಿಮ್ಮ ಮಧ್ಯಪ್ರವೇಶಕ್ಕಾಗಿ ಮನವಿ ಮಾಡುತ್ತಿದ್ದೇವೆʼ ಎಂದು ಪತ್ರದಲ್ಲಿ ಬರೆಯಲಾಗಿದೆ.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ ಕೈಗೊಂಡ ಮಹತ್ವದ ರಾಜಕೀಯ ಯೋಜನೆ ಎಂದೇ ಪರಿಗಣಿಸಲಾಗಿದೆ. ಮಣಿಪುರದಲ್ಲಿ ಆರಂಭವಾದ ಈ ಯಾತ್ರೆ ಮಾರ್ಚ್ 20 ಅಥವಾ 21ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳುವ ಮೊದಲು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳ ಮೂಲಕ ಸಂಚರಿಸಲಿದೆ. ಮಣಿಪುರದ ಜತೆಗೆ, ಯಾತ್ರೆಯು ನಾಲ್ಕು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ (ಎರಡು ದಿನಗಳಲ್ಲಿ 257 ಕಿ.ಮೀ.), ಅರುಣಾಚಲ ಪ್ರದೇಶ (55 ಕಿ.ಮೀ. ಒಂದು ದಿನ), ಮೇಘಾಲಯ (ಒಂದು ದಿನದಲ್ಲಿ ಐದು ಕಿ.ಮೀ.) ಮತ್ತು ಅಸ್ಸಾಂ (ಎಂಟು ದಿನಗಳಲ್ಲಿ 833 ಕಿ.ಮೀ.) ಕ್ರಮಿಸಲಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ನೆಲ ಸ್ಪರ್ಶಿಸಿದಲ್ಲೆಲ್ಲ ಕಾಂಗ್ರೆಸ್‌ ಅವನತಿ; ನ್ಯಾಯವಲ್ಲ, ಡೋಂಗಿ ಯಾತ್ರೆ ಎಂದ ಅಶೋಕ್

ಬಳಿಕ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಒಟ್ಟು 100 ಲೋಕಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದೆ. ಈ ಮಧ್ಯೆ ಭದ್ರತಾ ಸಿಬ್ಬಂದಿ ಮೇಲೆ ದಾಳಿಗೆ ರಾಹುಲ್ ಗಾಂಧಿ ಅವರು ಪ್ರಚೋದನೆ ನೀಡುತ್ತಿದ್ದಾರೆ ಆರೋಪಿಸಿರುವ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವ ಶರ್ಮಾ ಅವರು, ಲೋಕಸಭೆ ಎಲೆಕ್ಷನ್ ಮುಗಿದ ಬಳಿಕ ಬಂಧಿಸುವ ಬೆದರಿಕೆಯನ್ನು ಹಾಕಿದ್ದಾರೆ. ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version