Site icon Vistara News

ರಾಹುಲ್‌ ಗಾಂಧಿ ಯಾತ್ರೆಗೆ ಬಂಗಾಳದಲ್ಲಿ ದೀದಿ ಅಡ್ಡಿ; ನ್ಯಾಯ ಯಾತ್ರೆಗೆ ಇದೆಂಥ ಅನ್ಯಾಯ?

Mamata Banerjee And Rahul Gandhi

Bharat Jodo Nyay Yatra facing problems in getting permission for rallies in West Bengal

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ದೃಷ್ಟಿಯಿಂದ ಪ್ರಾಮುಖ್ಯ ಪಡೆದಿರುವ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಹೊಸ ವರ್ಚಸ್ಸು ನೀಡಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಗೆ (Bharat Jodo Nyay Yatra) ಪಶ್ಚಿಮ ಬಂಗಾಳದಲ್ಲೂ ರಾಜ್ಯ ಸರ್ಕಾರದಿಂದ ಅಡ್ಡಿಯಾಗಿದೆ. ಪಶ್ಚಿಮ ಬಂಗಾಳದ (West Bengal) ಹಲವೆಡೆ ಭಾರತ್‌ ಜೋಡೋ ನ್ಯಾಯ ಯಾತ್ರೆ ಕೈಗೊಳ್ಳಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವು ಅನುಮತಿ ನೀಡುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಆರೋಪಿಸಿದ್ದಾರೆ.

“ಭಾರತ್‌ ಜೋಡೋ ಯಾತ್ರೆ ಕೈಗೊಳ್ಳುವ ಹಿನ್ನೆಲೆಯಲ್ಲಿ ತುಂಬ ದಿನಗಳ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹೀಗಿದ್ದರೂ, ಪರೀಕ್ಷೆಯ ಕಾರಣದಿಂದಾಗಿ ನಮಗೆ ಪಶ್ಚಿಮ ಬಂಗಾಳದ ಹಲವೆಡೆ ಭಾರತ್‌ ಜೋಡೋ ನ್ಯಾಯ ಯಾತ್ರೆಯ ಸಾರ್ವಜನಿಕ ಸಭೆ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡುತ್ತಿಲ್ಲ. ಪಶ್ಚಿಮ ಬಂಗಾಳ ಸರ್ಕಾರವು ನಮಗೆ ಸಹಕಾರ ನೀಡುತ್ತದೆ ಎಂದು ಬಯಸಿದ್ದೆವು. ಈಗ ಸಿಲಿಗುರಿಯಲ್ಲಿ ಸಾರ್ವಜನಿಕ ಸಭೆ ಆಯೋಜಿಸಲು ಅನುಮತಿ ನೀಡುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆಯ ಕಾರಣದಿಂದಾಗಿ ಎಲ್ಲ ಕಡೆಯೂ ಭಾರತ್‌ ಜೋಡೋ ನ್ಯಾಯ ಯಾತ್ರೆ ಕೈಗೊಳ್ಳಲು ಅನುಮತಿ ನೀಡಿರಲಿಲ್ಲ. ಇನ್ನು ಅಸ್ಸಾಂನಲ್ಲೂ ಬಿಜೆಪಿ ಸರ್ಕಾರವು ಕೆಲವೆಡೆ ರಾಹುಲ್‌ ಗಾಂಧಿ ಯಾತ್ರೆ ನಿಷೇಧಿಸಿದತ್ತು. ಈಗ ಇಂಡಿಯಾ ಒಕ್ಕೂಟದಲ್ಲೇ ಇದ್ದ ಮಮತಾ ಬ್ಯಾನರ್ಜಿ ಸರ್ಕಾರವು ಅನುಮತಿ ನಿರಾಕರಿಸಿದೆ. ಇಂಡಿಯಾ ಒಕ್ಕೂಟದ ಭಾಗವಾಗಿರಲು ಇಚ್ಛಿಸದ ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ.

ಇದನ್ನೂ ಓದಿ: ನ್ಯಾಯಯಾತ್ರೆಗೆ ತಡೆ; ಅಸ್ಸಾಂ ಸರ್ಕಾರದ ಕರ್ತವ್ಯಲೋಪ ಎಂದು ಸಿದ್ದರಾಮಯ್ಯ ಕಿಡಿ

ಅಸ್ಸಾಂನ ದೇವಾಲಯವೊಂದಕ್ಕೆ ರಾಹುಲ್‌ ಗಾಂಧಿ ಹಾಗೂ ಬೆಂಬಲಿಗರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಅದಕ್ಕೂ ಹಿಂದಿನ ದಿನ ನಾಗಾಂವ್‌ನ ರಸ್ತೆಬದಿಯ ಉಪಾಹಾರ ಗೃಹದಲ್ಲಿ ರಾಹುಲ್‌ ಗಾಂಧಿ ಇದ್ದಾಗ ವಿರೋಧಿ ಗುಂಪೊಂದು ಅವರ ವಿರುದ್ಧ ಘೋಷಣೆಗಳನ್ನು ಕೂಗಿತ್ತು. ಅಲ್ಲದೆ, ಗುವಾಹಟಿ ಗಡಿಯಲ್ಲಿ ಯಾತ್ರೆಯನ್ನು ತಡೆದಿದ್ದು, ಕಾರ್ಯಕರ್ತರನ್ನು ಇನ್ನಷ್ಟು ಕೆರಳಿಸಿತ್ತು. ಅಸ್ಸಾಂ ಸರ್ಕಾರ ನ್ಯಾಯ ಯಾತ್ರೆಯನ್ನು ಹಳಿ ತಪ್ಪಿಸಲು ಯತ್ನಿಸುತ್ತಿದ್ದು, ಕೇಂದ್ರ ಸರ್ಕಾರದ ಪ್ರಚೋದನೆಯಂತೆ ನಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಇನ್ನು ರಾಹುಲ್‌ ಗಾಂಧಿ ವಿರುದ್ಧ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕ್ರಮಕ್ಕೆ ಆದೇಶಿಸಿದ್ದರು. ಜೈಲಿಗೆ ಕಳುಹಿಸುವುದಾಗಿ ಎಚ್ಚರಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version