Site icon Vistara News

Bharat Jodo Nyay Yatra: ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಇಂದು ಮಣಿಪುರದಲ್ಲಿ ಚಾಲನೆ

Bharat Jodo Nyay Yatra enter bihar today

ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದವರೆಗೂ (Kanyakumari to Srinagar) ಪಾದಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು ಈಗ ಮಣಿಪುರದಿಂದ ಮಹಾರಾಷ್ಟ್ರದ (Manipur to Maharashtra) ಮುಂಬೈವರೆಗೆ ಭಾರತ ಐಕ್ಯತಾ ನ್ಯಾಯ ಯಾತ್ರೆಯನ್ನು (Bharat Jodo Nyay Yatra) ಭಾನುವಾರ ಮಧ್ಯಾಹ್ನ 12 ಗಂಟೆಗೆ ಆರಂಭಿಸಲಿದ್ದಾರೆ. ಮಣಿಪುರದ ಇಂಫಾಲ್ ಸಮೀಪದ ತೌಬಲ್ ಜಿಲ್ಲೆಯಿಂದ ಈ ಯಾತ್ರೆಗೆ ಚಾಲನೆ ಸಿಗಲಿದೆ. ಈ ಯಾತ್ರೆ ಕೈಗೊಳ್ಳಲು ಮಣಿಪುರ ಸರ್ಕಾರ ಷರತ್ತು ವಿಧಿಸಿದ್ದು, 3000ಕ್ಕಿಂತಲೂ ಹೆಚ್ಚಿನ ಜನರು ಸೇರಬಾರದು ಎಂದು ತಿಳಿಸಿದೆ.

ಕಾರ್ಯಕ್ರಮಕ್ಕೆ ಸಮಯದ ಮಿತಿಯನ್ನು ಹೇರಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮ ನಡೆಯುವ ಸಮಯದಲ್ಲಿ ಸಂಚಾರವನ್ನು ಪರ್ಯಾಯ ಮಾರ್ಗಗಳಲ್ಲಿ ತಿರುಗಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷವು ಆರಂಭದಲ್ಲಿ ಯಾತ್ರೆಯನ್ನು ಇಂಫಾಲ್‌ನಿಂದಲೇ ಶುರು ಮಾಡಲು ಮುಂದಾಗಿತ್ತು. ಆದರೆ, ಬಿಜೆಪಿ ನೇತೃತ್ವದ ಎನ್ ಬಿರೇನ್ ಸಿಂಗ್ ಸರ್ಕಾರವು ಕೇವಲ ಸಾವಿರ ಮಂದಿಗೆ ಅವಕಾಶ ಕಲ್ಪಿಸುವುದಾಗಿ ಹೇಳಿತು. ಹಾಗಾಗಿ, ಆರಂಭಿಕ ಕಾರ್ಯಕ್ರಮವನ್ನು ತೌಬಲ್‌ಗೆ ಬದಲಾಯಿಸಲಾಯಿತು.

ಯಾತ್ರೆಯ ವೇಳೆ ದೇಶ ವಿರೋಧಿ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡದಂತೆ ಸೂಚಿಸಲಾಗಿದೆ. ಈಗಾಗಲೇ ಅಶಾಂತಿಯಿಂದ ಬಳಲುತ್ತಿರುವ ಮಣಿಪುರದಲ್ಲಿ ಶಾಂತಿಯನ್ನು ಕಾಪಾಡುವುದಕ್ಕಾಗಿ ಸಂಘಟಕರು ಅಧಿಕಾರಿಗಳ ಜತೆಗೆ ಸಂಪೂರ್ಣವಾಗಿ ಕೈ ಜೋಡಿಸಬೇಕು ಎಂದು ತಿಳಿಸಲಾಗಿದೆ.

ಯಾತ್ರೆಯು ತೌಬಲ್ ಜಿಲ್ಲೆಯ ಖೋಂಗ್‌ಜೋಮ್ ಪ್ರದೇಶದ ಖಾಸಗಿ ಮೈದಾನದಿಂದ ಪ್ರಾರಂಭವಾಗಲಿದ್ದು, ಕಳೆದ ಸುತ್ತಿನ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ನಂತರ ಪಕ್ಷದ ಚುನಾವಣಾ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಪ್ರಮುಖ ನಾಯಕರು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಚುನಾವಣಾ ಉದ್ದೇಶದಿಂದ ಕೈಗೊಳ್ಳುತ್ತಿಲ್ಲ. ಸಂಸತ್ತಿನಲ್ಲಿ ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಸರ್ಕಾರ ಅವಕಾಶ ನೀಡದ ಕಾರಣ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಿದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ತತ್ವಗಳನ್ನು ಮರುಸ್ಥಾಪಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳುವ ಮೊದಲು ಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳ ಮೂಲಕ ಸಂಚರಿಸಲಿದೆ. ಮಣಿಪುರದ ಜೊತೆಗೆ, ಯಾತ್ರೆಯು ನಾಲ್ಕು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ (ಎರಡು ದಿನಗಳಲ್ಲಿ 257 ಕಿಮೀ), ಅರುಣಾಚಲ ಪ್ರದೇಶ (55 ಕಿ.ಮೀ. ಒಂದು ದಿನ), ಮೇಘಾಲಯ (ಒಂದು ದಿನದಲ್ಲಿ ಐದು ಕಿಮೀ) ಮತ್ತು ಅಸ್ಸಾಂ (ಎಂಟು ದಿನಗಳಲ್ಲಿ 833 ಕಿಮೀ)ಗಳನ್ನು ಕವರ್ ಮಾಡಲಿದೆ.

ಬಳಿಕ ಭಾರತ್ ಜೋಡೋ ನ್ಯಾಯ ಯಾತ್ರೆಯು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆಯಲಿದೆ. ಒಟ್ಟು100 ಲೋಕಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದ್ದು, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಯಾತ್ರೆಯು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತ್ ಜೋಡೋ ಮೂಲಕ ಕಾಂಗ್ರೆಸ್ ಬಲಪಡಿಸುವ ರಾಹುಲ್ ಗಾಂಧಿ ಪ್ರಯತ್ನ ಪ್ರಶಂಸಾರ್ಹ

Exit mobile version