ನವ ದೆಹಲಿ: ಭಾರತ್ ಜೋಡೋ ಯಾತ್ರೆ (Bharat Jodo Yatra) ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಮುಂಜಾನೆ ಕಾಂಗ್ರೆಸ್ ನಾಯಕರು ಕನ್ಯಾಕುಮಾರಿಯ ಅಗಸ್ತೀಶ್ವರಮ್ನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭ ಮಾಡಿದ್ದಾರೆ. ಅದರ ಬೆನ್ನಲ್ಲೇ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿದ್ದು, ‘ಶತಮಾನಗಳ ಇತಿಹಾಸ ಇರುವ ಬಹುದೊಡ್ಡ ಪಕ್ಷ ಕಾಂಗ್ರೆಸ್ನ ಪುನರುಜ್ಜೀವನದಲ್ಲಿ ಈ ಸಾಮೂಹಿಕ ಸಂಪರ್ಕ ಕಾರ್ಯಕ್ರಮ ಭಾರತ್ ಜೋಡೋ ಯಾತ್ರೆ ಬಹುಮುಖ್ಯ ಪಾತ್ರ ವಹಿಸಲಿದೆ’ ಎಂದು ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಎಂಬುದು ಕಾಂಗ್ರೆಸ್ ಪಾಲಿಗೆ ಐತಿಹಾಸಿಕ ಸಮಾವೇಶ. ಭಾರತದ ರಾಜಕೀಯ ಇತಿಹಾಸದಲ್ಲೇ ಒಂದು ಪರಿವರ್ತನಾ ಕ್ಷಣವಾಗಲಿದೆ. ಈ ಯಾತ್ರೆಯಲ್ಲಿ ಯಾರಿಗೆಲ್ಲ ಭೌತಿಕವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲವೋ ಅವರು ಮಾನಸಿಕವಾಗಿ ಭಾಗವಹಿಸಲಿದ್ದಾರೆ’ ಎಂದು ಸೋನಿಯಾ ಗಾಂಧಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸೋನಿಯಾ ಗಾಂಧಿ ಸದ್ಯ ಭಾರತದಲ್ಲಿ ಇಲ್ಲ. ಚಿಕಿತ್ಸೆಗಾಗಿ ಆಗಸ್ಟ್ 24ರಂದು ವಿದೇಶಕ್ಕೆ ತೆರಳಿದ್ದಾರೆ. ಈ ಮಧ್ಯೆ ಇಟಲಿಯಲ್ಲಿದ್ದ ಅವರ ತಾಯಿ ಆಗಸ್ಟ್ 27ರಂದು ಮೃತಪಟ್ಟಿದ್ದಾರೆ. ಪ್ರಿಯಾಂಕಾ ಗಾಂಧಿ ಕೂಡ ಭಾರತದಲ್ಲಿ ಇಲ್ಲ. ತಾಯಿ ಹಾಗೂ ಸಹೋದರಿಯೊಂದಿಗೆ ರಾಹುಲ್ ಗಾಂಧಿಯವರೂ ತೆರಳಿದ್ದರು, ಆದರೆ ಅವರು ಈಗ ವಾಪಸ್ ಬಂದು, ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯರಾಗಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ, ಜಿಎಸ್ಟಿ ಹೆಚ್ಚಳ, ಕೋಮು ಗಲಭೆ ಮತ್ತಿತರ ವಿಷಯಗಳನ್ನು ವಿರೋಧಿಸಿ, ಜನರನ್ನು ನೇರವಾಗಿ ಸಂಪರ್ಕಿಸಿ ಅವರಿಂದ ಕುಂದು-ಕೊರತೆ ಆಲಿಸುವ ಸಲುವಾಗಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿದೆ. ಇದು 3700 ಕಿಮೀ ದೂರದ ಪಾದಯಾತ್ರೆಯಾಗಿದ್ದು, ಐದು ತಿಂಗಳು (150 ದಿನ) ನಡೆಯಲಿದೆ. 12 ರಾಜ್ಯಗಳಲ್ಲಿ ಯಾತ್ರೆ ಸುತ್ತಲಿದೆ. ಸೆಪ್ಟೆಂಬರ್ ಕೊನೇ ವಾರದಲ್ಲಿ ಕರ್ನಾಟಕಕ್ಕೆ ಪ್ರವೇಶ ಮಾಡಲಿದ್ದು, ಇಲ್ಲಿ 21 ದಿನಗಳ ಕಾಲ ಇರಲಿದೆ.
ಇದನ್ನೂ ಓದಿ: Bharat Jodo Yatra | ಪಾದಯಾತ್ರೆ ಶುರು ಮಾಡಿದ ಕಾಂಗ್ರೆಸ್ ನಾಯಕರು; ಬಿಜೆಪಿ ವಿರುದ್ಧ ವಾಗ್ದಾಳಿ