ಶ್ರೀನಗರ: ದೇಶದ ಉದಾರ ಮತ್ತು ಜಾತ್ಯಾತೀತ ತತ್ವಗಳನ್ನು ಕಾಪಾಡುವುದೇ ಈ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಮುಖ್ಯ ಉದ್ದೇಶವಾಗಿತ್ತು ಎಂದು ರಾಹುಲ್ ಗಾಂಧಿ (Rahul Gandhi) ಅವರು ಹೇಳಿದ್ದಾರೆ. ಕಾಶ್ಮೀರದ ಶ್ರೀನಗರದಲ್ಲಿ ಯಾತ್ರೆಯ ಸಮಾರೋಪದ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು, ಯಾತ್ರೆಯುದ್ಧಕ್ಕೂ ತಮ್ಮ ಮೇಲೆ ಬಿಜೆಪಿ ಮತ್ತು ಆರೆಸ್ಸೆಸ್ ನಾನಾ ರೀತಿಯ ಪ್ರಹಾರ ನಡೆಸಿದವು ಎಂದು ಆರೋಪಿಸಿದರು.
ಭಾರತ್ ಜೋಡೋ ಯಾತ್ರೆಯನ್ನು ನಾನು ನನ್ನ ಸಲುವಾಗಿ ಇಲ್ಲವೇ ಕಾಂಗ್ರೆಸ್ ಪಕ್ಷದ ಸಲುವಾಗಿ ಮಾಡಿಲ್ಲ. ಈ ದೇಶದ ಜನರಿಗಾಗಿ ಈ ಯಾತ್ರೆಯನ್ನು ನಡೆಸಿದ್ದೇವೆ. ದೇಶದ ಮೂಲಭೂತ ತತ್ವಗಳನ್ನು ನಾಶ ಮಾಡುತ್ತಿರುವ ಸಿದ್ಧಾಂತದ ವಿರುದ್ಧ ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳಲಾಗಿತ್ತು ಎಂದು ರಾಹುಲ್ ಗಾಂಧಿ ಅವರು ಹೇಳಿದರು.
ಕಾಶ್ಮೀರದ ಶ್ರೀನಗರದಲ್ಲಿ ಸಿಕ್ಕಾಪಟ್ಟೆ ಹಿಮಪಾತವಾಗುತ್ತಿದೆ. ಹಾಗಿದ್ದೂ, ಭಾರತ್ ಜೋಡೋ ಯಾತ್ರೆ ಮುಂದುವರಿಯಿತು ಎಂದು ಹೇಳಿರುವ ರಾಹುಲ್ ಗಾಂಧಿ ಅವರು, ಹಿಂಸಾಚಾರಕ್ಕೆ ಪ್ರೋತ್ಸಾಹಿಸುವ ಮೂಲಕ ಬಿಜೆಪಿ ಮತ್ತು ಆರೆಸ್ಸೆಸ್ ಈ ದೇಶದ ಮೂಲ ತತ್ವಗಳಾದ ಜಾತ್ಯಾತೀತ ಮತ್ತು ಉದಾರತೆಗಳನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿದರು.
ಅವರಿಗೆ ನೋವು ಅರ್ಥವಾಗಲಾರದು
ತಮ್ಮ ಅಜ್ಜಿ ಇಂದಿರಾ ಗಾಂಧಿ ಮತ್ತು ಅಪ್ಪ ರಾಜೀವ್ ಗಾಂಧಿಯ ಹತ್ಯೆ ಕುರಿತಾದ ಮಾಹಿತಿಯನ್ನು ಫೋನ್ ಕಾಲ್ ಮೂಲಕ ಪಡೆದುಕೊಂಡಿದ್ದನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ ಅವರು, ಹಿಂಸೆಗೆ ಪ್ರಚೋದನೆ ನೀಡುವವರು ಎಂದಿಗೂ ಈ ನೋವನ್ನು ಅರ್ಥ ಮಾಡಿಕೊಳ್ಳಲಾರರು ಎಂದರು. ಹಿಂಸೆಗೆ ಪ್ರಚೋದನೆ ನೀಡುವ ಮೋದಿ, ಅಮಿ ಶಾ, ಆರೆಸ್ಸೆಸ್, ಬಿಜೆಪಿ ಎಂದಿಗೂ ನೋವು ಅರ್ಥ ಮಾಡಿಕೊಳ್ಳಲಾರರು. ಪುಲ್ವಾಮಾ ಉಗ್ರ ದಾಳಿಯಲ್ಲಿ ಮೃತಪಟ್ಟ ಸೇನೆಯ ಯೋಧನ ಕುಟುಂಬ, ಸಿಆರ್‌ಪಿಎಫ್ ಸಿಬ್ಬಂದಿ ಕುಟುಂಬದವರಿಗೆ ಈ ನೋವು ಅರ್ಥ ಮಾಡಿಕೊಳ್ಳಬಲ್ಲರು.
ಬಿಜೆಪಿಗೆ ಸವಾಲು ಹಾಕಿದ ರಾಹುಲ್
ಬಿಜೆಪಿಯವರು ಎಂದಿಗೂ ಯಾತ್ರೆಯನ್ನು ಕೈಗೊಳ್ಳಲಾರರು. ಅವರಿಗೆ ಧೈರ್ಯ ಇದ್ದರೆ, ಕಾಶ್ಮೀರದಲ್ಲಿ ನಮ್ಮ ಯಾತ್ರೆಯನ್ನು ಮಾಡಲಿ. ಅವರಿಗೆ ಹೆದರಿಕೆ ಇರುವುದರಿಂದ ಅವರು ಎಂದಿಗೂ ನಮ್ಮ ರೀತಿ ಪಾದಯಾತ್ರೆ ಮಾಡಲಾರರು ಎಂದು ರಾಹುಲ್ ಹೇಳಿದರು.
ಇದನ್ನೂ ಓದಿ: Bharat Jodo Yatra: ಸಹೋದರಿ ಪ್ರಿಯಾಂಕಾ, ಕಾರ್ಯಕರ್ತರ ಜತೆ ರಾಹುಲ್ ಗಾಂಧಿ ಹಿಮ ಎರಚಾಟ! Video Viral
ಕಾಶ್ಮೀರದಲ್ಲಿ ಯಾತ್ರೆ ಬೇಡ ಎಂದಿದ್ದರು
ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರೆ ಬೇಡ. ದಾಳಿಗಳು ನಡೆಯಬಹುದು ಎಂದು ಹೇಳಿದ್ದರು. ಆದರೆ, ನಾನು ನಿರ್ಧರಿಸಿದೆ. ನನ್ನ ಮನೆಗೆ ನಡೆದುಕೊಂಡೇ ನನ್ನ ಜನರೊಂದಿಗೆ ಹೋಗುವೆ. ನಾನೇಕೆ ಅವರಿಗೆ(ವೈರಿಗಳು) ನನ್ನ ಟಿ ಶರ್ಟ್ ಬಣ್ಣ ಬದಲಾಯಿಸಲು ಅವಕಾಶ ಮಾಡಿಕೊಡಬಾರದು ಎಂದುಕೊಂಡೆ, ಅವರು ಅದನ್ನು ಕೆಂಪು ಟಿ ಶರ್ಟ್ ಮಾಡಲಿ ಎಂದು ನಿರ್ಧರಿಸಿದೆ ಎಂದು ರಾಹುಲ್ ಹೇಳಿದರು. ಆದರೆ, ಕಾಶ್ಮೀರದ ಜನರು ನನಗೆ ಹ್ಯಾಂಡ್ ಗ್ರನೇಡ್ ನೀಡಲಿಲ್ಲ. ಬದಲಿಗೆ ಹೃದಯ ತುಂಬ ಸ್ವಾಗತ ನೀಡಿದರು ಎಂದು ರಾಹುಲ್ ಗಾಂಧಿ ಹೇಳಿದರು.