ನವದೆಹಲಿ: ಮಾಜಿ ಪ್ರಧಾನಿ, ರೈತ ಮಹಾ ನಾಯಕ ಚೌಧರಿ ಚರಣ್ ಸಿಂಗ್ (Chaudhary Charan Singh) ಅವರಿಗೆ ಭಾರತರತ್ನ ಘೋಷಿಸಿದ ಬೆನ್ನಲ್ಲೇ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ (Jayant Chaudhary) ಅವರು ಬಿಜೆಪಿ ಜತೆಗಿನ ಮೈತ್ರಿಯನ್ನು ಖಚಿತಪಡಿಸಿದ್ದಾರೆ. ಇದುವರೆಗೆ, ಜಯಂತ್ ಚೌಧರಿ ಅವರ ಆರ್‌ಎಲ್‌ಡಿಯು ಇಂಡಿಯಾ ಒಕ್ಕೂಟವನ್ನು ತೊರೆದು, ಬಿಜೆಪಿ ಮೈತ್ರಿಕೂಟ ಸೇರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ತಾತ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತರತ್ನ ಘೋಷಣೆಯಾಗುತ್ತಲೇ ಮೊಮ್ಮಗ ಜಯಂತ್ ಚೌಧರಿ ಅವರು ಬಿಜೆಪಿ ಜತೆಗಿನ ಮೈತ್ರಿ ದೃಢಪಡಿಸಿದ್ದಾರೆ.
ಪ್ರಶಸ್ತಿ ಘೋಷಣೆಯಾಗುತ್ತಲೇ ಸುದ್ದಿಗೋಷ್ಠಿ ನಡೆಸಿದ ಜಯಂತ್ ಚೌಧರಿ, “ಇದು ನನಗೆ ಅತ್ಯಂತ ಪ್ರಮುಖವಾದ ದಿನ. ನಾನು ತುಂಬ ಭಾವುಕನಾಗಿದ್ದೇನೆ. ರಾಷ್ಟ್ರಪತಿ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇದು ದೇಶದ ಜನರ ಭಾವನೆಗಳಿಗೆ ಸಂಬಂಧಿಸಿದೆ” ಎಂದು ಹೇಳಿದರು. ನೀವು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, “ಏನಾದರೂ ತೊಂದರೆ ಇದೆಯೇ? ನಿಮ್ಮ ಪ್ರಶ್ನೆಯನ್ನು ನಾನು ಹೇಗೆ ತಿರಸ್ಕರಿಸಲಿ” ಎಂದು ಹೇಳುವ ಮೂಲಕ ಮೈತ್ರಿ ಖಚಿತವಾಗಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದರು.
#WATCH | When asked if he is ready to join hands with BJP-NDA, RLD chief Jayant Chaudhary says, "Koi kasar rehti hai? Aaj main kis muh se inkaar karoon aapke sawalon ko." pic.twitter.com/6dTo21wzk6
— ANI (@ANI) February 9, 2024
ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಉತ್ತರ ಪ್ರದೇಶದ ಬಾಗ್ಪತ್ ಹಾಗೂ ಬಿಜ್ನೋರ್‌ನಲ್ಲಿ ಆರ್‌ಎಲ್‌ಡಿ ಸ್ಪರ್ಧಿಸಲಿದೆ. ಹಾಗೆಯೇ, ಪಕ್ಷದ ನಾಯಕರೊಬ್ಬರಿಗೆ ರಾಜ್ಯಸಭೆ ಸೀಟು ಕೊಡುವುದಾಗಿಯೂ ಬಿಜೆಪಿ ಭರವಸೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಉತ್ತರ ಪ್ರದೇಶದಲ್ಲಿ ಇಂಡಿಯಾ ಒಕ್ಕೂಟಕ್ಕೆ ಭಾರಿ ಹಿನ್ನಡೆಯಾದಂತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಜನವರಿಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಆರ್‌ಎಲ್‌ಡಿ ಮಧ್ಯೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆದಿತ್ತು. ಮೂಲಗಳ ಪ್ರಕಾರ, ಆರ್‌ಎಲ್‌ಡಿಗೆ ಲೋಕಸಭೆಯ ಏಳು ಕ್ಷೇತ್ರಗಳನ್ನು ಬಿಟ್ಟುಕೊಡಲು ಎಸ್‌ಪಿ ಒಪ್ಪಿಕೊಂಡಿತ್ತು ಎನ್ನಲಾಗಿದೆ. ಆದರೆ, ಈಗ ಆರ್‌ಎಲ್‌ಡಿಯು ಇಂಡಿಯಾ ಒಕ್ಕೂಟ ತೊರೆದಿದೆ. ಇನ್ನೂ 2-3 ದಿನದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಕುರಿತು ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Bharat Ratna: ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಘೋಷಣೆ; ಮೊಮ್ಮಗ ಜಯಂತ್ ಚೌಧರಿ ಹೇಳಿದ್ದೇನು?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆಯು ಉತ್ತರ ಪ್ರದೇಶ ಪ್ರವೇಶಿಸುವ ಮುನ್ನವೇ ಆರ್‌ಎಲ್‌ಡಿಯು ಇಂಡಿಯಾ ಒಕ್ಕೂಟಕ್ಕೆ ವಿದಾಯ ಹೇಳಿರುವುದು ಕೂಡ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಫೆಬ್ರವರಿ 14ರಂದು ಭಾರತ್ ಜೋಡೋ ನ್ಯಾಯ ಯಾತ್ರೆಯು ಉತ್ತರ ಪ್ರದೇಶ ಪ್ರವೇಶಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ