ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾಮ್ (PV Narasimha Rao) ಅವರಿಗೆ ಭಾರತ ರತ್ನ (Bharat Ratna) ಪ್ರಶಸ್ತಿ ಘೋಷಿಸಿದ ಬೆನ್ನಲ್ಲೇ, ರಾವ್ ಅವರ ಮೊಮ್ಮಗ ಎನ್ ವಿ ಸುಭಾಶ್ (NV Subhash) ಅವರು ಗಾಂಧಿ ಕುಟುಂಬದ (Gandhi Family) ವಿರುದ್ಧ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಪಕ್ಷದ ವೈಫಲ್ಯಗಳಿಗೆ ನರಸಿಂಹ ರಾಮ್ ಅವರನ್ನು ಬಲಿಪಶು ಮಾಡುವಲ್ಲಿ ಗಾಂಧಿ ಕುಟುಂಬ ನಿರತವಾಗಿತ್ತು ಎಂದು ಹೇಳಿದ್ದಾರೆ.
ಪಿ.ವಿ. ನರಸಿಂಹರಾವ್ ಅವರು ಕಾಂಗ್ರೆಸ್ ಪಕ್ಷದವರಾಗಿದ್ದರೂ ಪ್ರಧಾನಿ ಮೋದಿ ಗೌರವ ನೀಡಿದ್ದಾರೆ. ಈಗ ನಾನು ಯುಪಿಎ ಸರ್ಕಾರವನ್ನು ಅದರಲ್ಲೂ ಗಾಂಧಿ ಕುಟುಂಬವನ್ನು ದೂರುತ್ತೇನೆ. 2004 ರಿಂದ 2014 ರವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತ ರತ್ನ ಕೊಡುವುದ ಬಿಡಿ ಅಥವಾ ಇನ್ನಾವುದೇ ಪುರಸ್ಕಾರಗಳನ್ನು ಕೊಡುವುದನ್ನು ಬಿಡಿ, ಕೇವಲ ಕಾಂಗ್ರೆಸ್ ಪಕ್ಷದ ವೈಫಲ್ಯಗಳಿಗೆ ನರಸಿಂಹರಾವ್ ಅವರನ್ನು ಬಲಿಪಶುವನ್ನಾಗಿ ಮಾಡುವಲ್ಲಿ ಗಾಂಧಿ ಕುಟುಂಬವು ತುಂಬಾ ಪ್ರಮುಖ ಪಾತ್ರ ವಹಿಸಿದೆ ಎಂದು ಬಿಜೆಪಿ ಮುಖಂಡ ಎನ್ ವಿ ಸುಭಾಷ್ ಹೇಳಿದರು.
ನರೇಂದ್ರ ಮೋದಿ ಅವರು ರಾಷ್ಟ್ರೀಯ ನಾಯಕರಾಗುತ್ತಿರುವ ಈ ನಿರ್ಣಾಯಕ ಘಟ್ಟದಲ್ಲಿ ಮತ್ತು ಇಡೀ ಪ್ರಪಂಚದ ನಾಯಕರಾಗಿ ಅವರು ನಿರಂತರವಾಗಿ ಇತರ ನಾಯಕರನ್ನು ಗುರುತಿಸುತ್ತಿರುವ ಈ ಸಮಯದಲ್ಲಿ ಇದು ಹೆಮ್ಮೆ ವಿಷಯವಾಗಿದೆ. ಇದು ನಮಗೆ ಗೌರವವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಸಮಯವು ತುಂಬಾ ಭಾವನಾತ್ಮಕವಾಗಿದೆ. ಏಕೆಂದರೆ ಭಾರತ ರತ್ನ ವಿಳಂಬವಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು ಎಂದು ಅವರು ಹೇಳಿದರು.
15 ಭಾಷೆ ಬಲ್ಲ, ಆರ್ಥಿಕತೆ ಮೇಲೆತ್ತಿದ ಛಲದಂಕಮಲ್ಲ ನರಸಿಂಹರಾವ್!
ದೇಶದ ತ್ರಿವಳಿ ಸಾಧಕರಿಗೆ ಕೇಂದ್ರ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ (Bharat Ratna) ಪ್ರಶಸ್ತಿ ಘೋಷಿಸಿದೆ. ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್ (PV Narasimha Rao), ಚೌಧರಿ ಚರಣ್ ಸಿಂಗ್ (Charan singh chaudhary) ಹಾಗೂ ಹಸಿರು ಕ್ರಾಂತಿ ಪಿತಾಮಹ ಎಂ.ಎಸ್.ಸ್ವಾಮಿನಾಥನ್ (MS Swaminathan) ಅವರಿಗೆ ಭಾರತರತ್ನ ಘೋಷಿಸಿದೆ. ತ್ರಿವಳಿ ಸಾಧಕರಲ್ಲಿ ಪಿ.ವಿ.ನರಸಿಂಹ ರಾವ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಭಾರತರತ್ನ ಪಡೆದ ಹೊತ್ತಿನಲ್ಲಿಯೇ ಆಧುನಿಕ ಆರ್ಥಿಕತೆಯ ಹರಿಕಾರರಾದ ಪಿವಿಎನ್ ಅವರ ಸಾಧನೆ ಏನು? ದೇಶಕ್ಕೆ ಅವರ ಕೊಡುಗೆ ಏನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ರಾಜಕೀಯ ಏಳಿಗೆ
ಸ್ವಾತಂತ್ರ್ಯ ಹೋರಾಟದ ವೇಳೆಯೇ ಕಾಂಗ್ರೆಸ್ ನಾಯಕರಿಗೆ ಆಪ್ತರಾಗಿದ್ದ ಪಿ.ವಿ.ನರಸಿಂಹ ರಾವ್ ಅವರು ಸ್ವಾತಂತ್ರ್ಯದ ನಂತರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. 1957ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಆಂಧ್ರಪ್ರದೇಶ ವಿಧಾನಸಭೆ ಪ್ರವೇಶಿಸಿದ ಅವರು ಅಲ್ಲಿಂದ ಹಿಂತಿರುಗಿ ನೋಡಲಿಲ್ಲ. ಆಂಧ್ರಪ್ರದೇಶದ ಶಾಸಕರಾಗಿ, ಸಚಿವರಾಗಿ, ಹಲವು ಸುಧಾರಣೆಗಳಿಗೆ ನಾಂದಿ ಹಾಡಿದ ಅವರು, ಕ್ಷಿಪ್ರವಾಗಿ ಇಂದಿರಾ ಗಾಂಧಿ ಅವರ ಗಮನ ಸೆಳೆದರು. ಫಲವಾಗಿ ಅವರು ಲೋಕಸಭೆ ಪ್ರವೇಶಿಸುವ ಜತೆಗೆ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಸಂಪುಟದಲ್ಲಿ ಗೃಹ, ರಕ್ಷಣೆ, ವಿದೇಶಾಂಗ ಸೇರಿ ಹಲವು ಖಾತೆಗಳನ್ನು ನಿಭಾಯಿಸಿ ಸೈ ಎನಿಸಿಕೊಂಡರು.
ಪಿವಿಎನ್ ಬಾಲ್ಯದ ಮೆಲುಕು
ಪಿ.ವಿ.ನರಸಿಂಹ ರಾವ್ ಅವರು ಆಂಧ್ರಪ್ರದೇಶದ (ಈಗಿನ ತೆಲಂಗಾಣ) ಕರೀಂ ನಗರ ಜಿಲ್ಲೆಯ ವಂಗಾರ ಗ್ರಾಮದಲ್ಲಿ 1921ರ ಜೂನ್ 28ರಂದು ಜನಿಸಿದರು. ಉತ್ತರ ಮತ್ತು ದಕ್ಷಿಣ ಭಾರತದ ಗಡಿ ಗ್ರಾಮದಲ್ಲಿ ಜನಿಸಿದ ಪಿವಿಎನ್ ಅವರು ಹಿಂದಿ, ತೆಲುಗು, ಮರಾಠಿ, ಕನ್ನಡ ಸೇರಿ 15 ಭಾಷೆ ಮಾತನಾಡುತ್ತಿದ್ದರು. ಆಂಧ್ರಪ್ರದೇಶದಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಯುವಕರಾಗಿದ್ದ ಪಿವಿಎನ್, ವಕೀಲಿಕೆ ಆರಂಭಿಸುವ ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡರು ಎಂಬುದು ಗಮನಾರ್ಹವಾಗಿದೆ.
ಆಧುನಿಕ ಆರ್ಥಿಕತೆಯ ಹರಿಕಾರ
1991ರ ಮೇ ತಿಂಗಳಲ್ಲಿ ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರ ಹತ್ಯೆ ನಡೆಯಿತು. ಇದಾದ ಬಳಿಕ, ದೇಶದ 10ನೇ ಪ್ರಧಾನಿಯನ್ನಾಗಿ ಪಿ.ವಿ.ನರಸಿಂಹ ರಾವ್ ಅವರು ಅಧಿಕಾರ ವಹಿಸಿಕೊಂಡರು. ಆದರೆ, ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ, ಭಾರತದ ಆರ್ಥಿಕತೆಯು ಚಿಂತಾಜನಕ ಸ್ಥಿತಿಯಲ್ಲಿತ್ತು. 1990-91ರಲ್ಲಿ ನಡೆದ ಕೊಲ್ಲಿ ದೇಶಗಳ ಕಾಳಗದ ಪರಿಣಾಮವು ಭಾರತದ ಆರ್ಥಿಕತೆ ಮೇಲೂ ಬಿದ್ದಿತ್ತು. ಭಾರತವು ಚಿನ್ನ ಅಡ ಇಟ್ಟು ಸಾಲ ತಂದ ಪರಿಸ್ಥಿತಿ ಅದಾಗಿತ್ತು. ಭಾರತದ ವಿದೇಶಿ ವಿನಿಮಯ ಸಂಗ್ರಹ ಕೇವಲ ಎರಡೇ ವಾರಗಳ ಆಮದಿಗೆ ಆಗುವಷ್ಟಿತ್ತು. ದೇಶದ ಆರ್ಥಿಕತೆಯು ದಿವಾಳಿಯ ಅಂಚಿಗೆ ತಲುಪಿತ್ತು.
ಭಾರತದ ಆರ್ಥಿಕತೆಯನ್ನು ಉಳಿಸುವ ಪಣತೊಟ್ಟ ಪಿ.ವಿ. ನರಸಿಂಹ ರಾವ್ ಅವರು ಸಾಲು ಸಾಲು ಘೋಷಣೆ ಮಾಡಿದರು. ಆಮದು ನೀತಿಯನ್ನು ಬದಲಾಯಿಸಿದರು. ಖಾಸಗೀಕರಣಕ್ಕೆ ನಾಂದಿ ಹಾಡಿದರು. ಭಾರತದಲ್ಲಿ ವಿದೇಶಿ ಹೂಡಿಕೆಗೆ ಉತ್ತೇಜನ ನೀಡಿದರು. ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಿದರು. ಆರ್ಥಿಕ ಉದಾರೀಕರಣ ನೀತಿ ಜಾರಿಗೆ ತಂದರು. ಸರ್ಕಾರದ ಸಂಸ್ಥೆಗಳಲ್ಲೂ ಖಾಸಗಿಕರಣ ಅಳವಡಿಸಿಕೊಂಡರು. ಇದರಿಂದಾಗಿ ವಿದೇಶಗಳು, ಉದ್ಯಮಿಗಳ ಹಣವು ಹೂಡಿಕೆಯಾಗಿ ಬದಲಾಯಿತು. ಡಾ.ಮನಮೋಹನ್ ಸಿಂಗ್ ಅವರಂತಹ ಆರ್ಥಿಕ ಚಾಣಕ್ಯನನ್ನು ಸಂಪುಟಕ್ಕೆ ಸೇರಿಸಿಕೊಂಡು ಅವರಿಗೆ ಸ್ವಾತಂತ್ರ್ಯ ಕೊಟ್ಟರು. ಇದೆಲ್ಲದರ ಪರಿಣಾಮವು ಭಾರತದ ಆರ್ಥಿಕತೆಯು ಹೊಸ ರೂಪ ಪಡೆಯಿತು. ಅಪಾಯದಿಂದ ಪಾರಾಗುವ ಜತೆಗೆ ಬಲಿಷ್ಠವಾಯಿತು. ಇದೆಲ್ಲದರ ಶ್ರೇಯಸ್ಸು ಪಿವಿಎನ್ ಅವರಿಗೇ ಸಲ್ಲುತ್ತದೆ.
ಆರ್ಥಿಕ ಸುಧಾರಣೆ ಜತೆಗೆ ನರಸಿಂಹ ರಾವ್ ಅವರು ಪಂಜಾಬ್ ಬಂಡುಕೋರರು, ಕಾಶ್ಮೀರದಲ್ಲಿ ಉಗ್ರರನ್ನು ನಿಗ್ರಹಿಸಲು ಕ್ರಮ ತೆಗೆದುಕೊಂಡರು. ರಷ್ಯಾ ಜತೆಗಿನ ಸಂಬಂಧವನ್ನು ವೃದ್ಧಿಸಿಕೊಂಡು ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದರು. ಮೊದಲ ಅಣ್ವಸ್ತ್ರ ಪರೀಕ್ಷೆಗೂ ಭಾರತವನ್ನು ಸಜ್ಜುಗೊಳಿಸಿದರು. ನೆಹರು-ಗಾಂಧಿಯೇತರ ಕುಟುಂಬದ ಮೊದಲ ಪ್ರಧಾನಿಯಾಗಿ ಆಯ್ಕೆಯಾದ ಅವರು ಹೊಸ ಭಾಷ್ಯ ಬರೆದರು. ಇಂತಹ ಸಾಧಕನಿಗೆ ಈಗ ಮರಣೋತ್ತರ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಈ ಸುದ್ದಿಯನ್ನೂ ಓದಿ: Bharat Ratna: ಚೌಧರಿಗೆ ಭಾರತರತ್ನ ಘೋಷಣೆ ಬೆನ್ನಲ್ಲೇ ಬಿಜೆಪಿ ಜತೆ ಮೈತ್ರಿ ಎಂದ ಆರ್‌ಎಲ್‌ಡಿ!