ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಂದು (ಫೆಬ್ರವರಿ 9) ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಮೂವರು ಸಾಧಕರಿಗೆ ಘೋಷಿಸಿದ್ದಾರೆ. ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್ (PV Narasimha Rao), ಚೌಧರಿ ಚರಣ್ ಸಿಂಗ್ (Charan singh chaudhary) ಹಾಗೂ ಹಸಿರು ಕ್ರಾಂತಿ ಪಿತಾಮಹ ಎಂ.ಎಸ್.ಸ್ವಾಮಿನಾಥನ್ (MS Swaminathan) ಅವರಿಗೆ ಭಾರತರತ್ನ ಘೋಷಿಸಲಾಗಿದೆ. ಈ ನಿರ್ಧಾರವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಸ್ವಾಗತಿಸಿದ್ದಾರೆ.
ಸಂಸತ್ತಿನ ಹೊರಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼʼನಾನು ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಯಾಕೆ ಸ್ವಾಗತಿಸಬಾರದು?” ಎಂದು ಹೇಳಿದ್ದಾರೆ. ಈ ಮೂಲಕ ಕೇಂದ್ರದ ನಿರ್ಧಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ಪಿ.ವಿ.ನರಸಿಂಹ ರಾವ್ ಅವರ ಸಂಬಂಧಿಕರು ಕೂಡ ಸ್ವಾಗತಿಸಿದ್ದಾರೆ. 1991ರಿಂದ 1996 ರವರೆಗೆ ಪೂರ್ಣ ಐದು ವರ್ಷಗಳ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ತಮ್ಮ ನಾಯಕನನ್ನು ಕಡೆಗಣಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಿ.ವಿ.ನರಸಿಂಹ ರಾವ್ ಅವರ ಮೊಮ್ಮಗ ಎನ್.ವಿ.ಸುಭಾಷ್ ಅವರು ಯುಪಿಎ ಸರ್ಕಾರ ಮತ್ತು ಗಾಂಧಿ ಕುಟುಂಬವನ್ನು ಟೀಕಿಸಿದ್ದರು. ಕಾಂಗ್ರೆಸ್‌ನ ವೈಫಲ್ಯಗಳಿಗೆ ನರಸಿಂಹ ರಾವ್ ಅವರನ್ನು ಅನ್ಯಾಯವಾಗಿ ಬಲಿಪಶು ಮಾಡಲಾಗಿದೆ ಎಂದು ಹೇಳಿದ್ದರು.
5 ಮಂದಿ ಸಾಧಕರಿಗೆ ಭಾರತ ರತ್ನ
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ (ಮರಣೋತ್ತರ), ಬಿಜೆಪಿಯ ವರಿಷ್ಠ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಭಾರತರತ್ನ ಘೋಷಿಸಿತ್ತು. ಆ ಮೂಲಕ ಈ ಬಾರಿ ಭಾರತ ರತ್ನ ಪುರಸ್ಕೃತರ ಸಂಖ್ಯೆ ಐದಕ್ಕೇರಿದೆ.
ಭಾರತದ ಐದನೇ ಪ್ರಧಾನ ಮಂತ್ರಿಯಾಗಿದ್ದ ಚೌಧರಿ ಚರಣ್ ಸಿಂಗ್ ಅವರನ್ನು ʼರೈತ ಮಹಾನಾಯಕʼ ಎಂದೇ ಕರೆಯಲಾಗುತ್ತದೆ. ತಮ್ಮ ಜೀವನದುದ್ದಕ್ಕೂ ಅವರು ರೈತರು ಮತ್ತು ಅವರ ಕುಟುಂಬಗಳ ಉನ್ನತಿಗಾಗಿ ಶ್ರಮಿಸಿದರು. ಕಠಿಣ ಪರಿಶ್ರಮ, ಸ್ವತಂತ್ರ ನಿಲುವು ಮತ್ತು ರಾಜಿಯಾಗದ ಪ್ರಾಮಾಣಿಕತೆ ಅವರ ಮೌಲ್ಯಗಳಾಗಿದ್ದವು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರು ಹಲವಾರು ಬಾರಿ ಜೈಲಿಗೂ ಹೋಗಿದ್ದರು.
ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಆಗಸ್ಟ್ 7, 1925ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ್ದರು. ಎಂ.ಎಸ್.ಸ್ವಾಮಿನಾಥನ್ ಅವರು ಹೆಚ್ಚು ಇಳುವರಿ ನೀಡುವ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಭಾರತದ ಕಡಿಮೆ ಆದಾಯದ ರೈತರು ಹೆಚ್ಚಿನ ಇಳುವರಿಯನ್ನು ಉತ್ಪಾದಿಸಲು ಸಹಾಯ ಮಾಡಿದ್ದಲ್ಲದೆ, ಆ ದಿನಗಳ ಭಾರತದ ಜನಸಂಖ್ಯೆಯ ಬೆಳವಣಿಗೆಗೆ ತಕ್ಕಂತೆ ಸಾಕಷ್ಟು ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಇದನ್ನೂ ಓದಿ: Bharat Ratna: ರೈತ ಮಹಾನಾಯಕ, ಭೂಸುಧಾರಣೆಯ ರೂವಾರಿ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್
ಪಿ.ವಿ.ನರಸಿಂಹ ರಾವ್ ಅವರು ಆಂಧ್ರಪ್ರದೇಶದ (ಈಗಿನ ತೆಲಂಗಾಣ) ಕರೀಂ ನಗರ ಜಿಲ್ಲೆಯ ವಂಗಾರ ಗ್ರಾಮದಲ್ಲಿ 1921ರ ಜೂನ್ 28ರಂದು ಜನಿಸಿದರು. ಉತ್ತರ ಮತ್ತು ದಕ್ಷಿಣ ಭಾರತದ ಗಡಿ ಗ್ರಾಮದಲ್ಲಿ ಜನಿಸಿದ ಪಿವಿಎನ್ ಅವರು ಹಿಂದಿ, ತೆಲುಗು, ಮರಾಠಿ, ಕನ್ನಡ ಸೇರಿ 15 ಭಾಷೆ ಮಾತನಾಡುತ್ತಿದ್ದರು. ಆಂಧ್ರಪ್ರದೇಶದಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಯುವಕರಾಗಿದ್ದ ಪಿವಿಎನ್, ವಕೀಲಿಕೆ ಆರಂಭಿಸುವ ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ