ಬೆಂಗಳೂರು: ʼರೈತ ಮಹಾನಾಯಕʼ (Farmer leader) ಎಂದೇ ಕರೆಯಲ್ಪಡುವ ಭಾರತದ ಐದನೇ ಪ್ರಧಾನ ಮಂತ್ರಿಯಾಗಿದ್ದ (Prime minister) ಚೌಧರಿ ಚರಣ್ ಸಿಂಗ್ (Chaudhary Charan Singh) ಅವರಿಗೆ ‘ಭಾರತ ರತ್ನʼ (Bharat Ratna) ಪ್ರಶಸ್ತಿ ಘೋಷಿಸಲಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿ ನರೆಂದ್ರ ಮೋದಿ (Narendra Modi) ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ. ಚೌಧರಿ ಚರಣ್ ಸಿಂಗ್ ಅವರ ಅಪ್ರತಿಮ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಇದೀಗ ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ, ರಾಷ್ಟ್ರೀಯ ಲೋಕದಳ (Rashtriya Lok Dal) ಮುಖ್ಯಸ್ಥ ಜಯಂತ್ ಚೌಧರಿ ಸಂತಸ ವ್ಯಕ್ತಪಡಿಸಿದ್ದಾರೆ.
ಮೋದಿ ಹೇಳಿದ್ದೇನು?
ಎಕ್ಸ್ ಮೂಲಕ ಪೋಸ್ಟ್ ಮಾಡಿದ್ದ ಮೋದಿ ಅವರು, ʼʼಚೌಧರಿ ಚರಣ್ ಸಿಂಗ್ ಅವರು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ದೇಶದ ಗೃಹ ಸಚಿವರಾಗಿ ಮತ್ತು ಶಾಸಕರಾಗಿಯೂ ಅವರು ಯಾವಾಗಲೂ ರಾಷ್ಟ್ರ ನಿರ್ಮಾಣಕ್ಕೆ ಪ್ರಚೋದನೆ ನೀಡಿದ್ದರು. ಅವರು ತುರ್ತು ಪರಿಸ್ಥಿತಿಯ ವಿರುದ್ಧ ಧ್ವನಿ ಎತ್ತಿದ್ದರು ಮತ್ತು ನಮ್ಮ ರೈತ ಸಹೋದರ ಸಹೋದರಿಯರಿಗೆ ಅವರ ಸಮರ್ಪಣೆ ಸ್ಫೂರ್ತಿದಾಯಕ” ಎಂದು ಮೋದಿ ಹೇಳಿದ್ದಾರೆ.
हमारी सरकार का यह सौभाग्य है कि देश के पूर्व प्रधानमंत्री चौधरी चरण सिंह जी को भारत रत्न से सम्मानित किया जा रहा है। यह सम्मान देश के लिए उनके अतुलनीय योगदान को समर्पित है। उन्होंने किसानों के अधिकार और उनके कल्याण के लिए अपना पूरा जीवन समर्पित कर दिया था। उत्तर प्रदेश के… pic.twitter.com/gB5LhaRkIv
— Narendra Modi (@narendramodi) February 9, 2024
ಮೋದಿ ಅವರು ಪ್ರಶಸ್ತಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯಿಸಿದ ಜಯಂತ್ ಚೌಧರಿ, ʼʼಹೃದಯವನ್ನು ಗೆದ್ದಿದ್ದೀರಿʼʼ ಎಂದು ಹೇಳಿದ್ದಾರೆ. ಜಯಂತ್ ಚೌಧರಿ ಅವರು ಇಂಡಿಯಾ ಒಕ್ಕೂಟವನ್ನು ತೊರೆದು, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಸೀಟು ಹಂಚಿಕೆ ಒಪ್ಪಂದದಂತೆ ಜಯಂತ್ ಚೌಧರಿ ಅವರ ಪಕ್ಷವು ಆರ್‌ಎಲ್‌ಡಿ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಇಂಡಿಯಾ ಟುಡೇ ಕೆಲವೇ ತಾಸುಗಳ ಮೊದಲಷ್ಟೇ ವರದಿ ಮಾಡಿತ್ತು.
ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಉತ್ತರ ಪ್ರದೇಶದ ಬಾಗ್ಪತ್ ಹಾಗೂ ಬಿಜ್ನೋರ್‌ನಲ್ಲಿ ಆರ್‌ಎಲ್‌ಡಿ ಸ್ಪರ್ಧಿಸಲಿದೆ. ಹಾಗೆಯೇ, ಪಕ್ಷದ ನಾಯಕರೊಬ್ಬರಿಗೆ ರಾಜ್ಯಸಭೆ ಸೀಟು ಕೊಡುವುದಾಗಿಯೂ ಬಿಜೆಪಿ ಭರವಸೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಉತ್ತರ ಪ್ರದೇಶದಲ್ಲಿ ಇಂಡಿಯಾ ಒಕ್ಕೂಟಕ್ಕೆ ಭಾರಿ ಹಿನ್ನಡೆಯಾದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೂ 2-3 ದಿನದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಕುರಿತು ಆರ್‌ಎಲ್‌ಡಿ ಅಧಿಕೃತ ಘೋಷಣೆ ಮಾಡಲಿದೆ ಎನ್ನಲಾಗುತ್ತಿದೆ.
ಚೌಧರಿ ಚರಣ್ ಸಿಂಗ್ ಅವರು ಡಿಸೆಂಬರ್ 23ರಂದು ಜನಿಸಿದರು. ಪ್ರತಿ ವರ್ಷ ಅವರ ಜನ್ಮದಿನವನ್ನು ʼರಾಷ್ಟ್ರೀಯ ರೈತರ ದಿನʼವಾಗಿ ಆಚರಿಸಲಾಗುತ್ತದೆ. ಚರಣ್ ಸಿಂಗ್ ಉತ್ತರ ಪ್ರದೇಶದ ನೂರ್‌ಪುರದಲ್ಲಿ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದರು. 1979ರ ಜುಲೈ 28ರಿಂದ 1980ರ ಜನವರಿ 14ರವರೆಗೆ ಐದೂವರೆ ತಿಂಗಳು ಅವರು ಪ್ರಧಾನ ಮಂತ್ರಿಯಾಗಿದ್ದರು. ಅವರ ತಂದೆ ಮೀರ್ ಸಿಂಗ್, ಸಣ್ಣ ಕೃಷಿಯ ರೈತರಾಗಿದ್ದರು. ಅವರ ತಾಯಿ ನೇತ್ರಾ ಕೌರ್. ಐದು ಮಕ್ಕಳಲ್ಲಿ ಇವರು ಹಿರಿಯರಾಗಿದ್ದರು.
ಇದನ್ನೂ ಓದಿ: ಇಂಡಿಯಾ ಒಕ್ಕೂಟಕ್ಕೆ ಮತ್ತೊಂದು ಶಾಕ್; ಮೈತ್ರಿ ಬಿಟ್ಟು ಬಿಜೆಪಿ ಜತೆ ಸೇರಿದ ಆರ್‌ಎಲ್‌ಡಿ!