Site icon Vistara News

Bharat Ratna: ಕರ್ಪೂರಿ ಠಾಕೂರ್‌ಗೆ ಜ್ವರ ಬಂದಾಗ ಜೀಪನ್ನೂ ಕೊಟ್ಟಿರಲಿಲ್ಲ ಲಾಲು ಯಾದವ್!‌

karpoori thakur Lalu Yadav

ಹೊಸದಿಲ್ಲಿ: ಕೇಂದ್ರ ಸರ್ಕಾರ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ (Karpoori Thakur) ಅವರಿಗೆ ಭಾರತ ರತ್ನ ಪ್ರಶಸ್ತಿ (Bharat Ratna Award) ನೀಡಿ ಗೌರವಿಸಿದೆ. ರಾಷ್ಟ್ರೀಯ ಜನತಾ ದಳ (RJD) ಸೇರಿದಂತೆ ಬಿಹಾರದ ಎಲ್ಲ ಪಕ್ಷಗಳು ತಕ್ಷಣವೇ ಇದರ ಕ್ರೆಡಿಟ್ ಪಡೆಯಲು ಧಾವಿಸಿವೆ. ಆದರೆ ಆರ್‌ಜೆಡಿ ಅಧಿಪತಿ ಲಾಲು ಪ್ರಸಾದ್‌ ಯಾದವ್ (Lalu Prasad Yadav) ಒಮ್ಮೆ ಕರ್ಪೂರಿ ಠಾಕೂರ್‌ಗೆ ಅನಾರೋಗ್ಯವಾಗಿದ್ದಾಗ ತಮ್ಮ ಜೀಪ್ ನೀಡಲು ನಿರಾಕರಿಸಿದ್ದರು ಎಂಬುದು ನಿಮಗೆ ತಿಳಿದಿದೆಯೇ?

ಕರ್ಪೂರಿ ಠಾಕೂರ್ ಅವರ ಸಮಾಜವಾದಿ ರಾಜಕೀಯ ಪರಂಪರೆಯ ವಾರಸುದಾರರಲ್ಲಿ ಲಾಲು ಯಾದವ್‌ ಕೂಡ ಒಬ್ಬರು. ಆದರೆ ಲಾಲು ಯಾದವ್ ಅವರು ತಮ್ಮ ವಯೋವೃದ್ಧ ಮತ್ತು ಅನಾರೋಗ್ಯಪೀಡಿತ ಗುರುವಿಗೆ ಪ್ರತಿಫಲ ನೀಡಿದ್ದು ಹೀಗೆ!

ಕರ್ಪೂರಿ ಠಾಕೂರ್ ಅತ್ಯಂತ ಹಿಂದುಳಿದ ವರ್ಗಗಳಿಗೆ ಸ್ಥಾನಗಳನ್ನು ಮೀಸಲಿಡುವ ಮೂಲಕ ಅವರನ್ನು ಸಬಲೀಕರಣಗೊಳಿಸಿದ ಮೊದಲಿಗರು. ಮಹಿಳೆಯರಿಗೆ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಅವರು ತೆಗೆದುಕೊಂಡ ಕ್ರಮಗಳು 1990ರ ಮಂಡಲ್ ರಾಜಕೀಯಕ್ಕಿಂತ ಹಿಂದಿನದು.

“ಕರ್ಪೂರಿ ಠಾಕೂರ್‌ ಅವರಿಗೆ ಭಾರತ ರತ್ನ ಗೌರವ ಸಿಗಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು. ಇದರಿಂದ ವಂಚಿತ ಜನರ ಘನತೆ ಮತ್ತು ಸ್ವಾಭಿಮಾನಕ್ಕೆ ಉತ್ತೇಜನ ಸಿಗುತ್ತದೆ” ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಿದ ಬಳಿದ ʼಎಕ್ಸ್‌ʼನಲ್ಲಿ ಹೇಳಿದ್ದರು. ಕೇಂದ್ರದ ಘೋಷಣೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಪಕ್ಷವಾದ ಜನತಾ ದಳ (ಯುನೈಟೆಡ್) ಕೂಡ ಸ್ವಾಗತಿಸಿವೆ.

Posthumous award of Bharat Ratna to Karpoori Thakur

ಲಾಲು ಯಾದವ್, ನಿತೀಶ್ ಕುಮಾರ್, ಹಿಂದಿಯ ಹೃದಯಭಾಗದ ಇತರ ನಾಯಕರು ಕೂಡ ಸಮಾಜವಾದಿ ಧೀಮಂತ ಜನನಾಯಕ ಕರ್ಪೂರಿ ಠಾಕೂರ್ ಅವರ ಶಿಷ್ಯರಾಗಿದ್ದರು. ಈ ಪಕ್ಷಗಳು ವಾಸ್ತವವಾಗಿ 1970ರ ದಶಕದ ಸಮಾಜವಾದಿ ಚಳವಳಿಯ ಫಲಿತ. ಇವುಗಳು ಕರ್ಪೂರಿ ಠಾಕೂರ್ ಅವರಿಂದ ಎಚ್ಚರಿಕೆಯಿಂದ ಪೋಷಿಸಲ್ಪಟ್ಟಿದ್ದವು.

ಬಿಜೆಪಿ ಘೋಷಣೆಯನ್ನು ಆರ್‌ಜೆಡಿ “ಚುನಾವಣೆ ಗಿಮಿಕ್” ಎಂದು ಕರೆದಿದೆ. ಆದರೆ 1980ರ ದಶಕದ ಒಂದು ಘಟನೆಯು ಆರ್‌ಜೆಡಿ ಪಕ್ಷಕ್ಕೆ ಮತ್ತು ಲಾಲುಗೆ ಮುಜುಗರ ಉಂಟುಮಾಡುವಂಥದು. ಆಗ ಕರ್ಪೂರಿ ಠಾಕೂರ್ ಅವರು ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.

ಲೇಖಕ ಅನುರಂಜನ್ ಝಾ ಅವರು ತಮ್ಮ ಪುಸ್ತಕ, ʼಗಾಂಧಿ ಮೈದಾನ್ ಬ್ಲಫ್ ಆಫ್ ಸೋಶಿಯಲ್ ಜಸ್ಟೀಸ್’ನಲ್ಲಿ ಲಾಲು ಯಾದವ್ ನಂತರದ ವರ್ಷಗಳಲ್ಲಿ ಸಮಾಜವಾದಿ ಹಿರಿಯರನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ತೋರಿಸುವ ಈ ಘಟನೆಯನ್ನು ಬರೆದಿದ್ದಾರೆ.

ಒಂದು ದಿನ, ಬಿಹಾರ ಅಸೆಂಬ್ಲಿ ಅಧಿವೇಶನ ನಡೆಯುತ್ತಿರುವಾಗ, ಕರ್ಪೂರಿ ಠಾಕೂರ್ ಜ್ವರ ಬಂದು ಅಸ್ವಸ್ಥರಾಗಿದ್ದರು. ತುಂಬಾ ಹಸಿದಿದ್ದರು. ಊಟಕ್ಕೆ ಮನೆಗೆ ಹೋಗಬೇಕಾಯಿತು. ಅವರ ಬಳಿ ಸ್ವಂತ ವಾಹನ ಇರಲಿಲ್ಲ. ಬೇಗನೆ ಮನೆಗೆ ಹೋಗಬೇಕೆಂದು ಬಯಸಿದ ಕರ್ಪೂರಿ ಠಾಕೂರ್ ಒಂದು ಚೀಟಿಯನ್ನು ಬರೆದು ಲಾಲು ಯಾದವ್ ಅವರಿಗೆ ಸ್ವಲ್ಪ ಸಮಯದವರೆಗೆ ತಮ್ಮ ಜೀಪನ್ನು ಕೊಡುವಂತೆ ಮನವಿ ಮಾಡಿದರು. ಲಾಲು ಯಾದವ್ ಅದೇ ಚೀಟಿಯಲ್ಲಿ ತಮ್ಮ ಜೀಪಿನಲ್ಲಿ ಇಂಧನ ಇಲ್ಲ ಎಂದು ಬರೆದು ಮರಳಿ ಕಳಿಸಿದರಂತೆ.

ಹಿರಿಯ ಪತ್ರಕರ್ತ ಸುರೇಂದ್ರ ಕಿಶೋರ್ ಅವರ ಪ್ರಕಾರ, ಕರ್ಪೂರಿ ಠಾಕೂರ್‌ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಕನಿಷ್ಠ ಒಂದು ಕಾರನ್ನಾದರೂ ಖರೀದಿಸಬೇಕಿತ್ತು ಎಂದು ಲಾಲು, ಕರ್ಪೂರಿ ಠಾಕೂರ್ ಅವರಿಗೆ ಹೇಳಿದರಂತೆ. ಲಾಲುಗೆ ಉತ್ತರಿಸಿದ ಕರ್ಪೂರಿ ಠಾಕೂರ್, ʼಕಾರು ಖರೀದಿಸುವುದನ್ನು ಮರೆತುಬಿಡಿ, ಇಂಧನಕ್ಕೆ ಕೂಡ ನನ್ನ ಬಳಿ ಹಣವಿಲ್ಲʼ ಎಂದರಂತೆ.

ಈಗಿನಂತೆ ಎಂಎಲ್‌ಎಗಳಿಗೆ ಆಗ ಸರ್ಕಾರಿ ವಾಹನ ನೀಡುತ್ತಿರಲಿಲ್ಲ. ಆಗ ಕೈಗಾರಿಕೆಗಳ ಮೇಲೆ ಸರ್ಕಾರದ ನಿಯಂತ್ರಣವಿದ್ದು, ಕಾರು ಖರೀದಿಸುವುದೂ ಕಷ್ಟವಾಗಿತ್ತು. ಲಾಲು ಯಾದವ್‌ ತಮ್ಮ ಜೀಪನ್ನು 1977ರಲ್ಲಿ ಪಶ್ಚಿಮ ಬಂಗಾಳದ ಪಾನಾಪುರದಲ್ಲಿ 5,000 ರೂಪಾಯಿಗಳಿಗೆ ಮಿಲಿಟರಿ ವಿಲೇವಾರಿ ಹರಾಜಿನಲ್ಲಿ ಖರೀದಿಸಿದ್ದರು.

ಆದರೆ ಕರ್ಪೂರಿ ಠಾಕೂರ್‌ ಅವರು ಸಾಯುವವರೆಗೂ ಸ್ವಂತ ವಾಹನ ಹೊಂದಿರಲಿಲ್ಲ.

ಇದನ್ನೂ ಓದಿ: Karpuri Thakur Birth Centenary: ಹಿಂದುಳಿದ ವರ್ಗಗಳ ಹೆಮ್ಮೆ ಕರ್ಪೂರಿ ಠಾಕೂರ್ ಕುರಿತ ಮೋದಿ ವಿಶೇಷ ಲೇಖನ ಇದು‌

Exit mobile version