Site icon Vistara News

Bharat Rice: ಬೆಲೆ ಏರಿಕೆ ಎಫೆಕ್ಟ್; ಕೇಂದ್ರದಿಂದ ಕೆ.ಜಿ.ಗೆ 29 ರೂ.ನಂತೆ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟ!

Bharat Rice will sold at Rs 20 per KG by Central Government

ನವದೆಹಲಿ: ಏರುತ್ತಿರುವ ಬೆಲೆ ಏರಿಕೆಯನ್ನು (Price Rise) ತಡೆಯುವುದು ಹಾಗೂ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ (Lok Sabha Election) ಕೇಂದ್ರ ಸರ್ಕಾರವು (Central Government) ‘ಭಾರತ್ ರೈಸ್’ ಬ್ರ್ಯಾಂಡ್ ಅಕ್ಕಿಯನ್ನು (Bharat Rice) ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 29 ರೂ.ನಂತೆ ಮುಂದಿನವಾರದಿಂದ ಮಾರಾಟ ಮಾಡಲು ನಿರ್ಧರಿಸಿದೆ. ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ಶುಕ್ರವಾರ ಈ ಕುರಿತು ಖಚಿತಪಡಿಸಿದೆ.

ಮೊದಲ ಹಂತದಲ್ಲಿ ಐದು ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ‘ಭಾರತ್ ರೈಸ್’ ಬ್ರ್ಯಾಂಡ್‌ನ ಅಡಿಯಲ್ಲಿ ಮೂರು ಏಜೆನ್ಸಿಗಳಾದ ನಾಫೆಡ್, ಎನ್‌ಸಿಸಿಎಫ್ ಮತ್ತು ಕೇಂದ್ರೀಯ ಭಂಡಾರ್ ಮೂಲಕ ಚಿಲ್ಲರೆ ಮಾರಾಟಕ್ಕೆ ಹಂಚಿಕೆ ಮಾಡಲಾಗಿದೆ. ಭಾರತ್ ರೈಸ್‌ನ ಚಿಲ್ಲರೆ ದರವನ್ನು ಕಿಲೋಗೆ 29 ರೂ.ಗೆ ನಿಗದಿಪಡಿಸಲಾಗಿದೆ ಮತ್ತು ಅವುಗಳನ್ನು 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

‘ಭಾರತ್ ರೈಸ್’ ಮೊಬೈಲ್ ವ್ಯಾನ್‌ಗಳು ಮತ್ತು ಮೂರು ಕೇಂದ್ರ ಸಹಕಾರ ಏಜೆನ್ಸಿಗಳ ಮಳಿಗೆಗಳಿಂದ ಗ್ರಾಹಕರು ಖರೀದಿಸಬಹುದು. ಇದು ಶೀಘ್ರದಲ್ಲೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಇತರ ಚಿಲ್ಲರೆ ಸರಪಳಿಗಳ ಮೂಲಕವೂ ಲಭ್ಯವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಋತುವಿನಲ್ಲಿ ಉತ್ತಮ ಬೆಳೆ ಬಂದಿದ್ದರೂ, ಎಫ್‌ಸಿಐ ಮತ್ತು ಸಾಕಷ್ಟು ದಾಸ್ತಾನು ಮತ್ತು ಅಕ್ಕಿ ರಫ್ತಿನ ಮೇಲೆ ವಿವಿಧ ನಿಯಮಾವಳಿಗಳ ಹೊರತಾಗಿಯೂ ಅಕ್ಕಿ ಬೆಲೆ ಗಗನಮುಖಿಯಾಗಿದೆ. ಪ್ರಮುಖ ಆಹಾರ ಪದಾರ್ಥಗಳ ಚಿಲ್ಲರೆ ಬೆಲೆಗಳು ಕಳೆದ ವರ್ಷಕ್ಕಿಂತ 14.51 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ಬೆಲೆ ಏರಿಕೆಯನ್ನು ತಡೆಯಲು ಸರ್ಕಾರವು ಈಗಾಗಲೇ ವಿವಿಧ ಕ್ರಮಗಳನ್ನು ಕೈಗೊಂಡಿದೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಬೆಲೆಗಳನ್ನು ನಿಯಂತ್ರಿಸಲು ಮತ್ತು ದೇಶದಲ್ಲಿ ಸುಲಭವಾಗಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಗೋಧಿಯ ದಾಸ್ತಾನು ಮೇಲೂ ನಿಗಾವಹಿಸಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಗೋಧಿಯ ಅಖಿಲ ಭಾರತ ಸರಾಸರಿ ದೇಶೀಯ ಸಗಟು ಮತ್ತು ಚಿಲ್ಲರೆ ಬೆಲೆಯು ಒಂದು ತಿಂಗಳು ಮತ್ತು ವರ್ಷದಲ್ಲಿ ಇಳಿಕೆಯ ಪ್ರವೃತ್ತಿಯನ್ನು ಕಂಡಿದೆ ಎಂದು ಅದು ಹೇಳಿದೆ. ಗೋಧಿ ಹಿಟ್ಟಿನ ಬೆಲೆಗಳು ಸಹ ಒಂದು ವಾರ, ತಿಂಗಳು ಮತ್ತು ವರ್ಷದಲ್ಲಿ ಕಡಿಮೆಯಾಗುವ ಪ್ರವೃತ್ತಿಯನ್ನು ತೋರಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Anna Bhagya: ಅನ್ನ ಭಾಗ್ಯ ಹಣ ವರ್ಗಾವಣೆಗೆ ಚಾಲನೆ: ಎರಡು ಜಿಲ್ಲೆ ಫಲಾನುಭವಿಗಳ ಖಾತೆಗೆ ತಲಾ 170 ರೂ. ರವಾನೆ

Exit mobile version