ಮುಂಬಯಿ: ಎಲ್ಲೆಡೆ ಬಹು ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸಲಾಗಿದೆ. ನಗರ, ಗ್ರಾಮೀಣ ಪ್ರದೇಶ ಎನ್ನುವ ಭಾವ ಭಾವ ಇಲ್ಲದೆ ಎಲ್ಲರೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ವಿಸರ್ಜಿಸಿದ್ದಾರೆ. ಈ ಮಧ್ಯೆ ಮುಂಬಯಿಯ(Mumbai) ಪ್ರಸಿದ್ಧ ʼಲಾಲ್‌ಬಾಗ್‌ಚ ರಾಜ ʼ(Lalbaugcha Raja) ಗಣೇಶ ಪೆಂಡಾಲ್‌ನಲ್ಲಿ ಜನ ಸಾಮಾನ್ಯರಿಗೆ ಮತ್ತು ಸೆಲೆಬ್ರಿಟಿಗಳಿಗೆ ಭೇದ ಭಾವ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತಾದ ವಿಡಿಯೊವೊಂದು ವೈರಲ್ ಆಗಿದೆ.
ಮುಂಬಯಿಯ ಲಾಲ್‌ಬಾಗ್‌ಚ ಪ್ರದೇಶದಲ್ಲಿ ಪ್ರತಿವರ್ಷ ಚೌತಿಯಂದು ಗಣಪತಿ ಮೂರ್ತಿಯನ್ನು ಕೂರಿಸಿ ಪೂಜಿಸಲಾಗುತ್ತದೆ. ಈ ಗಣೇಶನನ್ನು ʼಲಾಲ್‌ಬಾಗ್‌ನ ರಾಜʼ ಎಂದೇ ಕರೆಯಲಾಗುತ್ತದೆ. 11 ದಿನಗಳವರೆಗೆ ಪೂಜಿಸಿ ಬಳಿಕ ಈ ಮೂರ್ತಿಯನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ಅರಬಿ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಈ ಗಣೇಶನ ದರ್ಶನಕ್ಕೆ ಬಾಲಿವುಡ್ ತಾರೆಯರು, ಉದ್ಯಮಿಗಳು ಸೇರಿದಂತೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಸದ್ಯ ಈ ಗಣಪತಿ ಪೆಂಡಾಲ್ ಚರ್ಚೆಯ ಕೇಂದ್ರಬಿಂದು ಆಗಿದೆ.
ವಿಡಿಯೊದಲ್ಲೇನಿದೆ?
ಗಣಪತಿ ದರ್ಶನಕ್ಕೆ ಆಗಮಿಸಿದ ಸಾಮಾನ್ಯ ಜನರು ಒಂದು ಕ್ಷಣ ಕೂಡ ದೇವರ ಮುಂದೆ ನಿಲ್ಲಲು ಬಿಡದೆ ರಕ್ಷಣಾ ಸಿಬ್ಬಂದಿ ಮುಂದೆ ತಳ್ಳುತ್ತಾರೆ. ಸರಿಯಾಗಿ ಕೈ ಮುಗಿಯಲೂ ಅವರಿಗೆ ಅವಕಾಶ ಕೊಡುತ್ತಿಲ್ಲ. ಇತ್ತ ವಿಐಪಿಗಳು ಬಂದರೆ ಅವರಿಗೆ ದೇವರ ಮುಂದೆ ಸಮಯ ಕಳೆಯಲು ಸಾಕಷ್ಟು ಅವಕಾಶ ನೀಡಲಾಗುತ್ತದೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ದೇವರ ಮುಂದೆ ಭೇದ-ಭಾವ ಸಲದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗಣಪತಿ ಮುಂದೆ ಕೈ ಮುಗಿಯಲೂ ಅವಕಾಶ ನೀಡದೆ ಅಮಾನುಷವಾಗಿ ಮುಂದಕ್ಕೆ ತಳ್ಳುತ್ತಿರುವ ಸೆಕ್ಯುರಿಟಿಗಳ ವರ್ತನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ. ಅದೇ ವಿಡಿಯೊದ ಕೊನೆಗೆ ನಟಿ, ಬಾಲಿವುಡ್ ಸ್ಟಾರ್ ಶಿಲ್ಪಾ ಶೆಟ್ಟಿ ಸಾವಕಾಶವಾಗಿ ಕುಟುಂಬದ ಜತೆಗೆ ಕೈ ಮುಗಿಯುತ್ತಿರುವ ದೃಶ್ಯ ಕಾಣಿಸುತ್ತಿದೆ. ಇದನ್ನು ಉಲ್ಲೇಖಿಸಿರುವ ನೆಟ್ಟಿಗರೊಬ್ಬರು, ದೇವರ ದರ್ಶನಕ್ಕೂ ಎಷ್ಟೊಂದು ಬೇಧ-ಭಾವ ಎಂದು ಬರೆದುಕೊಂಡಿದ್ದಾರೆ,
ನೆಟ್ಟಿಗರು ಏನಂದ್ರು?
ಇಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಈಗಾಗಲೇ 90 ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಮೆಂಟ್ ಮೂಲಕ ಅಸಮಾಧಾನ ಸೂಚಿಸಿದ್ದಾರೆ. ʼʼಒಬ್ಬರು ಮಹಿಳೆಯನ್ನು ದಾರುಣವಾಗಿ ಮುಂದಕ್ಕೆ ತಳ್ಳಲಾಗಿದೆ. ಇದು ಅಮಾನವೀಯ. ಇಂತಹ ಅನುಭವ ಯಾರಿಗೂ ಆಗಬಾರದುʼʼ ಎಂದು ಒಬ್ಬರು ಹೇಳಿದ್ದಾರೆ. ʼʼದೇವರ ದರ್ಶನಕ್ಕಾಗಿ ಹಲವಾರು ಮಂದಿ 10ರಿಂದ 11 ಗಂಟೆ ಸರದಿಯಲ್ಲಿ ನಿಂತಿರುತ್ತಾರೆ, ಅವರಿಗೆ ಸ್ವಲ್ಪ ಸಮಯವೂ ಅವಕಾಶ ಕೊಡದಿದ್ದರೆ ಹೇಗೆ? ಇಂತಹ ವರ್ತನೆಯನ್ನು ನಿಲ್ಲಿಸಬೇಕಾಗಿದೆʼʼ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ʼʼತುಂಬ ಬೇಸರ ಮೂಡಿಸುವ ದೃಶ್ಯ, ಗಣಪನಿಗೆ ಎಲ್ಲರೂ ಸಮಾನರು. ಆತ ಆಶೀರ್ವಾದ ಮಾಡುವಾಗ ಎಂದಿಗೂ ಭೇದ-ಭಾವ ಮಾಡುವುದಿಲ್ಲ. ಪ್ರತಿಯೊಬ್ಬರೂ ಒಂದೇ ಸಾಲು ಇರುವಂತಾಗಬೇಕುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Snake bite: ರಕ್ಷಿಸಿದವನ ಪ್ರಾಣಕ್ಕೆ ಎರವಾದ ನಾಗಪ್ಪ; ಹಾವು ಕಡಿದು ಉರಗ ಪ್ರೇಮಿ ಸಾಯುವ ವಿಡಿಯೊ ವೈರಲ್
ಈ ಬಾರಿಯ ಲಾಲ್‌ಬಾಗ್ ಗಣಪತಿಯ ದರ್ಶನಕ್ಕೆ ಶಿಲ್ಪಾ ಶೆಟ್ಟಿ ಕುಟುಂಬ ಮಾತ್ರವಲ್ಲದೆ ಬಾಲಿವುಡ್ ಸ್ಟಾರ್ ಗಳಾದ ಶಾರುಖ್ ಖಾನ್, ಐಶ್ವರ್ಯ ರೈ ಬಚ್ಚನ್, ಅಂಬಾನಿ ಕುಟುಂಬ ಸೇರಿದಂತೆ ಅನೇಕ ಪ್ರತಿಷ್ಠಿತರು ಆಗಮಿಸಿದ್ದರು.